ವಾಷಿಂಗ್ಟನ್: ವಿಶ್ವ ಬ್ಯಾಂಕ್‌ನ ಮಾನವ ಬಂಡವಾಳ ಸೂಚ್ಯಂಕದ ವಾರ್ಷಿಕ ಪಟ್ಟಿ ಬಿಡುಗಡೆಯಾಗಿದ್ದು, ಭಾರತ 116ನೇ ಸ್ಥಾನ ಪಡೆದಿದೆ. ಆದರೆ 2018ರಲ್ಲಿದ್ದಂತಹ ಶೇ.0.44 ರಿಂದ 0.49ಕ್ಕೆ ಏರಿಕೆ ಕಂಡಿದೆ.
174 ದೇಶಗಳಲ್ಲಿನ ಆರೋಗ್ಯ, ಶಿಕ್ಷಣದ ಮಾಹಿತಿ ಹಾಗೂ 2020ರ ಮಾರ್ಚ್ ಅಂತ್ಯದ ವೇಳೆಗೆ ಇರುವ ವಿಶ್ವದಲ್ಲಿರುವ ಶೇ.98ರಷ್ಟು ಜನಸಂಖ್ಯೆಯ ದತ್ತಾಂಶದ ಆಧಾರದ ಮೇಲೆ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಮಕ್ಕಳನ್ನು ಮಾನವ ಬಂಡವಾಳವನ್ನಾಗಿ ಮಾಡುವ ಕಡಿಮೆ ಆದಾಯ ಹೊಂದಿದ ದೇಶಗಳಲ್ಲಿನಲ್ಲಿ ಪ್ರಕ್ರಿಯೆಯನ್ನು ಮಹಾಮಾರಿ ಕೋವಿಡ್ ಬರುವುದಕ್ಕೂ ಹಿಂದಿನ ಅಂಕಿ ಅಂಶಗಳ ಆಧಾರದಲ್ಲಿ ವರದಿ ತಯಾರಿಸಲಾಗಿದೆ. ಇಂತಹ ದೇಶಗಳಲ್ಲಿ ಜನಿಸುವ ಮಕ್ಕಳು ಶೇ.56ರಷ್ಟು ಪೌಷ್ಠಿಕಾಂಶದ ಮಾನವ ಬಂಡವಾಳವನ್ನು ಹೊಂದಲು ಸಾಧ್ಯವಾಗುತ್ತದೆ. ಇದಕ್ಕೆ ಶಿಕ್ಷಣ ಮತ್ತು ಸಂಪೂರ್ಣ ಆರೋಗ್ಯ ಮಾನದಂಡವಾಗಲಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.
ಆರೋಗ್ಯ, ಬದುಕುಳುವಿಕೆಯ ದರಗಳು ಹಾಗೂ ಶಾಲಾ ದಾಖಲಾತಿಯಂತಹ ಮಾನವ ಬಂಡಾಳ ಹೆಚ್ಚಳ ಮಾಡುವ ದಶಕಗಳ ಪ್ರಕ್ರಿಯೆಗೆ ಕೊರೊನಾ ಹೊಡೆತ ನೀಡಿದ್ದು, ಮಾತ್ರವಲ್ಲದೆ ಬಡತನ ಮತ್ತು ಆಹಾರ ಅಭದ್ರತೆ ಎದುರಿಸುತ್ತಿರುವ ದುರ್ಬಲರು, ಮಹಿಳೆಯರು ಮತ್ತು ಸಂಕಷ್ಟದಲ್ಲಿರುವ ಕುಟುಂಬಗಳ ಮೇಲೆ ಆರ್ಥಿಕವಾಗಿ ಈ ಸಾಂಕ್ರಾಮಿಕ ಪಿಡುಗು ಪರಿಣಾಮ ಬೀರಿದೆ ಎಂದು ವಿಶ್ವ ಬ್ಯಾಂಕ್ ಸಮೂಹ ಅಧ್ಯಕ್ಷ ಡೇವಿಡ್ ಮಲ್ಪಾಸ್ ತಿಳಿಸಿದ್ದಾರೆ.
ಸಂಕಷ್ಟದಿಂದ ಚೇತರಿಕೆ, ಸುಸ್ಥಿರ ಅಭಿವೃದ್ಧಿ ಹಾಗೂ ಭವಿಷ್ಯದ ಬೆಳವಣಿಗೆಗಾಗಿ ಎಲ್ಲ ದೇಶಗಳು ರಕ್ಷಣೆ ಮತ್ತು ಹೂಡಿಕೆ ಮೂಲಕ ಅಡಿಪಾಯ ಹಾಕಬೇಕು ಎಂದು ಡೇವಿಡ್ ಕರೆ ನೀಡಿದ್ದಾರೆ. ಈ ಆರೋಗ್ಯ ಬಿಕ್ಕಟ್ಟಿನ ಪರಿಣಾಮದಿಂದಾಗಿ 1 ಬಿಲಿಯನ್‌ಗೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಅರ್ಧ ವರ್ಷ ಶಾಲೆಗಳು ನಡೆದಿವೆ. ಕಲಿಕೆಯನ್ನು ಹೊಂದಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ಅಗತ್ಯ ಆರೋಗ್ಯ ಸೇವೆಗೂ ತಡೆಯಾಗಿದೆ ಎಂದು ಅಂಕಿ ಅಂಶಗಳನ್ನು ಆಧರಿಸಿ ವರದಿ ಮಾಡಿದೆ.