Advertisement

Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ

12:49 AM Nov 21, 2024 | Team Udayavani |

ಕುಂದಾಪುರ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಆರ್ಥಿಕತೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಮೀನುಗಾರಿಕೆಯನ್ನೇ ನಂಬಿ ಲಕ್ಷಾಂತರ ಮಂದಿ ಜೀವನ ಸಾಗಿಸುತ್ತಿದ್ದಾರೆ. ರಾಜ್ಯದ ಬೊಕ್ಕಸಕ್ಕೂ ಕೋಟ್ಯಂತರ ರೂ. ಆದಾಯ ತಂದು ಕೊಡುತ್ತಿದೆ. ಆದರೂ ಮೀನುಗಾರಿಕೆ ವಲಯ ಅನು ಭವಿಸುವ ಕೆಲವು ಜ್ವಲಂತ ಸಮಸ್ಯೆಗಳು ದಶಕಗಳಿಂದ ಜೀವಂತವಾಗಿವೆ.

Advertisement

ಉಡುಪಿ ಸಹಿತ ಕರಾವಳಿಯ 3 ಜಿಲ್ಲೆಗಳಲ್ಲಿ ಒಟ್ಟಾರೆ 4,646 ಯಾಂತ್ರೀಕೃತ ದೋಣಿಗಳು ಹಾಗೂ 10,961 ಮೋಟರೀಕೃತ ದೋಣಿಗಳು, 8,657 ಸಾಂಪ್ರದಾಯಿಕ ದೋಣಿಗಳಿವೆ. 320 ಕಿ.ಮೀ. ದೂರದ ಕರಾವಳಿಯಲ್ಲಿ ಮಲ್ಪೆ, ಗಂಗೊಳ್ಳಿ, ಮರವಂತೆ, ಕೊಡೇರಿ ಸಹಿತ 8 ಪ್ರಮುಖ ಬಂದರುಗಳಿದ್ದು, ಒಟ್ಟಾರೆ 96 ಕಡೆಗಳಲ್ಲಿ ಮೀನು ಇಳಿಸುವ ತಂಗುದಾಣಗಳಿವೆ. ವಾರ್ಷಿಕ 7 ಲಕ್ಷ ಮೆಟ್ರಿಕ್‌ ಟನ್‌ಗೂ ಮಿಕ್ಕಿ ಮೀನು ಸಂಗ್ರಹವಾಗುತ್ತಿದೆ.

ಬಂದರಿನಲ್ಲಿ ಹೂಳು
ಗಂಗೊಳ್ಳಿ, ಮರವಂತೆ, ಕೊಡೇರಿ, ಕೋಡಿ ಕನ್ಯಾನ, ಶಿರೂರು ಅಳ್ವೆಗದ್ದೆ ಸಹಿತ ಬಹುತೇಕ ಬಂದರುಗಳು ಹಾಗೂ ಅಳಿವೆ ಬಾಗಿಲಲ್ಲಿ ಹೂಳು ತುಂಬಿದ್ದು, ಇದರಿಂದ ಬೋಟುಗಳು, ದೋಣಿಗಳು ಮೀನುಗಾರಿಕೆಗೆ ತೆರಳಲು, ಒಳ ಬರಲು ಬಹಳಷ್ಟು ಸಮಸ್ಯೆಗಳಾಗುತ್ತಿವೆ. ಅಲೆಗಳ ಅಬ್ಬರಕ್ಕೆ ಸಿಲುಕಿ ಹೂಳಿನಲ್ಲಿ ಸಿಲುಕಿ ಬಹಳಷ್ಟು ಬೋಟುಗಳು ಸಂಕಷ್ಟ ಅನುಭವಿಸುತ್ತಿದ್ದರೂ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎನ್ನುವುದು ಮೀನುಗಾರರ ಅಳಲು.

ಸೀ ಆ್ಯಂಬುಲೆನ್ಸ್‌
ಮೀನುಗಾರಿಕೆಗೆ ತೆರಳಿದ್ದಾಗ ಮೀನುಗಾರ ರಿಗೆ ತುರ್ತು ಅನಾರೋಗ್ಯ ಉಂಟಾದಾಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಹಳ ಕಷ್ಟ ಆಗುತ್ತಿದೆ. ಆದ್ದರಿಂದ ಕೇರಳದಂತೆ ನಮ್ಮಲ್ಲೂ 2 ಬಂದರುಗಳಿಗೆ ಒಂದರಂತೆ ಸೀ ಆ್ಯಂಬುಲೆನ್ಸ್‌ ಸೌಲಭ್ಯ ಒದಗಿಸಬೇಕು ಎಂದು ಮೀನುಗಾರರು ಆಗ್ರಹಿಸುತ್ತಿದ್ದಾರೆ.

ಮೀನುಗಾರರ ಪ್ರಮುಖ ಸಮಸ್ಯೆಗಳು
-ಮಲ್ಪೆ, ಗಂಗೊಳ್ಳಿ, ಮರವಂತೆ, ಕೊಡೇರಿ, ಶಿರೂರು ಅಳ್ವೆಗದ್ದೆ ಸಹಿತ ಎಲ್ಲ ಬಂದರುಗಳ ಅಭಿವೃದ್ಧಿ ಆಗದೆ ಸಮಸ್ಯೆ. -ಪಶ್ಚಿಮ ಕರಾವಳಿಯ ಎಲ್ಲ ರಾಜ್ಯಗಳಲ್ಲಿ ಏಕ ರೀತಿಯ ಮೀನುಗಾರಿಕೆ ನೀತಿ ರೂಪಿಸಬೇಕಿದೆ.-ಮೀನುಗಾರರ ಹಿತದೃಷ್ಟಿಯಿಂದ ಅಂತಾರಾಜ್ಯ ಸಮನ್ವಯ ಸಮಿತಿ ರಚಿಸಬೇಕು. – ಬೋಟುಗಳಿಗೆ ರೋಡ್‌ ಸೆಸ್‌ ವಿಧಿಸುವುದನ್ನು ತೆಗೆಯಬೇಕು. – ಸಬ್ಸಿಡಿ ಡೀಸೆಲನ್ನು 300 ಲೀ. ನಿಂದ 400 ಲೀ.ಗೆ ಹೆಚ್ಚಿಸಬೇಕು. ವಾರ್ಷಿಕ ಕೋಟವನ್ನು ಹೆಚ್ಚಿಸಬೇಕು.

Advertisement

ಸುಸ್ಥಿರ ಮೀನುಗಾರಿಕೆ ಯೋಚನೆಗೆ ಸಕಾಲ
ಆಳ ಸಮುದ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಸಿಗುತ್ತಿಲ್ಲ. ಆದ್ದರಿಂದ ಅವೈಜ್ಞಾನಿಕ ಮೀನುಗಾರಿಕೆಯಾದ ಬುಲ್‌ಟ್ರಾಲ್‌, ಬೆಳಕಿನ (ಲೈಟ್‌ ಫಿಶಿಂಗ್‌) ಮೀನುಗಾರಿಕೆಯನ್ನು ಸಂಪೂರ್ಣ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕಿದೆ. ಸಣ್ಣ ಕಣ್ಣಿನ ಬಲೆ ಉತ್ಪಾದನೆಯನ್ನೇ ನಿಲ್ಲಿಸಬೇಕು, ಅತಿಯಾದ ಮೀನುಗಾರಿಕೆಯು ಸುಸ್ಥಿರ ಮೀನುಗಾರಿಕೆಗೆ ಮಾರಕ ಎನ್ನುತ್ತಾರೆ ಕಾರವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಡಲ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಶಿವಕುಮಾರ ಹರಗಿ.

ಬಂದರು ಅಭಿವೃದ್ಧಿ ಅಗತ್ಯ
ಎಲ್ಲ ಬಂದರುಗಳ ಅಭಿವೃದ್ಧಿ ಆಗಬೇಕು. ಮತ್ಸ್ಯಾಶ್ರಯ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಕಡಲ ಬದಿ ನೆಲೆಸಿರುವ ಮೀನುಗಾರರಿಗೆ ಸಿಆರ್‌ ಝಡ್‌ ಸಮಸ್ಯೆ ಉಂಟಾಗುತ್ತಿದ್ದು, ಇದನ್ನು ಸಡಿಲ ಗೊಳಿಸಬೇಕು. ಬಂದರುಗಳಲ್ಲಿ ಮಹಿಳೆಯರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ, ಮೀನು ಸ್ವತ್ಛಗೊಳಿಸುವ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಆಗಬೇಕಿದೆ.
– ರಮೇಶ್‌ ಕುಂದರ್‌,
ಮೀನುಗಾರ ಮುಖಂಡ ಗಂಗೊಳ್ಳಿ

ಭವಿಷ್ಯತ್ತಿಗಾಗಿ ಮತ್ಸ್ಯ ಸಂಪನ್ಮೂಲಗಳನ್ನು ಸಂರಕ್ಷಿಸುವ, ಸುಸ್ಥಿರ ಮೀನುಗಾರಿಕೆಯೆಡೆಗೆ ಸಾಗಲು ಈ ವಿಶ್ವ ಮೀನುಗಾರಿಕೆ ದಿನಾಚರಣೆ ಸಹಕಾರಿಯಾಗಲಿದೆ. ಸಾಂಪ್ರದಾಯಿಕ ಮೀನುಗಾರರರ ಸಬಲೀಕರಣ ಹಾಗೂ ಸುಸ್ಥಿರ ಮೀನುಗಾರಿಕೆಯೇ ಈ ವರ್ಷದ ಘೋಷ ವಾಕ್ಯ. ಮೀನುಗಾರರ ಸಮಸ್ಯೆ ಬಗೆಹರಿಸಲು ಇಲಾಖೆಯಿಂದಲೂ ಎಲ್ಲ ರೀತಿಯಾಗಿ ಪ್ರಯತ್ನಿಸಲಾಗುವುದು.
– ದಿನೇಶ್‌ ಕುಮಾರ್‌ ಕಲ್ಲೇರ್‌,
ರಾಜ್ಯ ನಿರ್ದೇಶಕ, ಮೀನುಗಾರಿಕೆ ಇಲಾಖೆ

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next