Advertisement

Delhi; ಈಗ ಟೈಂ ಬಾಂಬ್‌! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ

11:08 PM Nov 18, 2024 | Team Udayavani |

ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಮಾಲಿನ್ಯ ತೀವ್ರ ಹೆಚ್ಚಳವಾಗಿದ್ದು, ಸೋಮವಾರ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 495ಕ್ಕೆ ತಲುಪಿದೆ.

Advertisement

ಇದು ಕಳೆದ 8 ವರ್ಷದಲ್ಲೇ ದಾಖಲಾದ ಅತ್ಯಂತ ಕಳಪೆ ಮಟ್ಟದ ವಾಯು ಗುಣಮಟ್ಟ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ)ಹೇಳಿದೆ. 2016ರ ನವೆಂಬರ್‌ 6ರಂದು ದಿಲ್ಲಿಯಲ್ಲಿ ವಾಯು ಗುಣಮಟ್ಟ 497ಕ್ಕೆ ತಲುಪಿತ್ತು. ಇದು ದಿಲ್ಲಿ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯೂ ಆಗಿತ್ತು.

ಇನ್ನು ರಾಷ್ಟ್ರ ರಾಜಧಾನಿಯ ವಿವಿಧ ನಗರಗಳಲ್ಲೂ ವಾಯು ಗುಣಮಟ್ಟ ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿವೆ. ಮುಂಡಕ ನಗರದಲ್ಲಿ ಎಕ್ಯೂಐ 1591, ದ್ವಾರಕ ಸೆಕ್ಟರ್‌ 8ರಲ್ಲಿ 1497, ರೋಹಿಣಿ 1427, ನಜಾಫ್ಗಢ 1396, ವಿವೇಕ್‌ ವಿಹಾರ್‌ 1338, ನರೇಲಾದಲ್ಲಿ 1332ಕ್ಕೆ ತಲುಪಿದೆ. ಇದರಿಂದಾಗಿ ದಿಲ್ಲಿ ನಿವಾಸಿಗಳು ಉಸಿರಾಡಲೂ ಪರದಾಡುವಂತಾಗಿದೆ. ವಾಯು ಗುಣಮಟ್ಟ ತೀವ್ರ ಕಳಪೆಯಾಗಿರುವ ಹಿನ್ನೆಲೆಯಲ್ಲಿ ನಾಗರಿಕರು ಪಾರ್ಶ್ವವಾಯು, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳ ಬಗ್ಗೆ ವೈದ್ಯರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

15 ವಿಮಾನ ಮಾರ್ಗ ಬದಲು, 100ಕ್ಕೂ ಅಧಿಕ ವಿಳಂಬ:
ಮಾಲಿನ್ಯ ಹೆಚ್ಚಳದಿಂದ ಕಡಿಮೆ ಗೋಚರತೆ ಸೃಷ್ಟಿಯಾಗಿದ್ದು, ದಿಲ್ಲಿ ಏರ್‌ಪೋರ್ಟ್‌ನಲ್ಲಿ ಸೋಮವಾರ 15 ವಿಮಾನಗಳ ಮಾರ್ಗ ಬದಲಿಸಲಾಗಿದೆ. 13 ವಿಮಾನಗಳನ್ನು ಜೈಪುರಕ್ಕೆ, ತಲಾ 1 ವಿಮಾನವನ್ನು ಡೆಹ್ರಾಡೂನ್‌ ಮತ್ತು ಲಕ್ನೋಗೆ ಮಾರ್ಗ ಬದಲಿಸಲಾಗಿದ್ದು, 100ಕ್ಕೂ ಅಧಿಕ ವಿಮಾನಗಳ ವಿಳಂಬವೂ ವರದಿಯಾಗಿದೆ. ಸೋಮ ವಾರ ಬೆಳಗ್ಗೆ ಗೋಚ ರತೆಯ ಮಟ್ಟ 150 ಮೀಟರ್‌ಗೆ ಇಳಿದಿತ್ತು.

ಮಾಸ್ಕ್ ಧರಿಸಿ ಎಂದ ಸುಪ್ರೀಂ:
ಮಾಲಿನ್ಯ ಹೆಚ್ಚಳದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಎಲ್ಲಾ ಸಿಬ್ಬಂದಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಹಾಗೂ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿ ಸಿದೆ. ಈ ಸಂಬಂಧ ಕೋರ್ಟ್‌ನ ರಿಜಿಸ್ಟ್ರಾರ್‌ ಸುತ್ತೋಲೆಯನ್ನೂ ಹೊರಡಿಸಿದ್ದಾರೆ.

Advertisement

ಟೈಂ ಬಾಂಬ್‌ ಯಾಕೆ?
-ಸಾರ್ವಕಾಲಿಕ ಕಳಪೆ ಗುಣಮಟ್ಟದತ್ತ ದಿಲ್ಲಿ
– ಸೋಮವಾರ 495ಕ್ಕೆ ತಲುಪಿದ ಎಕ್ಯೂಐ
– ಅತಿ ಗಂಭೀರ ಪರಿಸ್ಥಿತಿಗೆ ರಾಷ್ಟ್ರ ರಾಜಧಾನಿ
– ಮನುಷ್ಯರ ಆರೋಗ್ಯಕ್ಕೆ ತೀವ್ರ ಹಾನಿಕರ
– ಗರ್ಭದಲ್ಲೇ ಮಕ್ಕಳ ಬೆಳವಣಿಗೆ ಕುಂಠಿತ
– ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್‌ ಭೀತಿ

– ಮಾಲಿನ್ಯಕ್ಕೆ ಕೇಂದ್ರ ಕಾರಣ-
ಬಿಜೆಪಿ ಆಡಳಿತ ರಾಜ್ಯಗಳಲ್ಲಿನ ಕೂಳೆ ಸುಡುವ ಪ್ರವೃತ್ತಿಯಿಂದಾಗಿ ದಿಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸುವಂತಾಗಿದೆ. ಕೇಂದ್ರ ಸರ್ಕಾರ ಮಾಲಿನ್ಯದ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ.
– ಆತಿಶಿ, ದಿಲ್ಲಿ ಮುಖ್ಯಮಂತ್ರಿ

ವಾಯು ಗುಣಮಟ್ಟದ ಕೆಟಗರಿ
ಸೂಚ್ಯಂಕ ಕೆಟಗರಿ
0-50 ಉತ್ತಮ
51-100 ತೃಪ್ತಿದಾಯಕ
101-200 ಮಧ್ಯಮ
201-300 ಕಳಪೆ
301-400 ಅತಿ ಕಳಪೆ
401-450 ಗಂಭೀರ (ಸಿವಿಯರ್‌)
451+ ಅತಿ ಗಂಭೀರ (ಸಿವಿಯರ್‌ ಪ್ಲಸ್‌)

2 ನಗರಗಳಲ್ಲಿ ಮಾತ್ರ ತೃಪ್ತಿಕರ ವಾಯು ಗುಣಮಟ್ಟ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ದಾಖಲೆ ಹೆಚ್ಚಳ ಕಂಡಿದೆ. ಅಂತೆಯೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ದೇಶದ 16 ಪ್ರಮುಖ ನಗರಗಳ ಪೈಕಿ, 56 ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) ದಾಖಲಿಸಿರುವ ಗುವಾಹಟಿ ಮತ್ತು ತಿರುವನಂತಪುರಂ (65 ಎಕ್ಯೂಐ)ನಲ್ಲಿ ಮಾತ್ರ ತೃಪ್ತಿಕರ ವಾಯು ಗುಣಮಟ್ಟ ದಾಖಲಾಗಿದೆ.

ನಂತರದಲ್ಲಿ ಬೆಂಗಳೂರು (108), ರಾಯ್‌ಪುರ್‌ (109), ಅಹಮದಾಬಾದ್‌ (114), ಹೈದರಾಬಾದ್‌ (119), ಮುಂಬೈ (133) ಸೇರಿದಂತೆ 9 ನಗರಗಳು ಮಧ್ಯಮ ವಾಯು ಗುಣಮಟ್ಟ ಕಾಯ್ದುಕೊಂಡಿದೆ. ಭೋಪಾಲ್‌(210), ಚೆನ್ನೈ-(238), ಚಂಡಿಗಢ (285) ಎಕ್ಯೂಐ ದಾಖಲಿಸಿದ್ದು ಕಳಪೆ ವಾಯು ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

 

 

 

Advertisement

Udayavani is now on Telegram. Click here to join our channel and stay updated with the latest news.

Next