Advertisement

ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಗೆ ಭಾರತವೇ ಅಧ್ಯಕ್ಷ

12:39 PM Apr 24, 2020 | mahesh |

ಹೊಸದಿಲ್ಲಿ: ಕೋವಿಡ್ -19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತ ಈಗಾಗಲೇ ವಿಶ್ವದ ಗಮನ ಸಳೆದಿದೆ. ಅದಕ್ಕೆ ಸಿಕ್ಕಿದ ಪುರಸ್ಕಾರವೋ ಎಂಬಂತೆ ಮುಂದಿನ ತಿಂಗಳು ನಡೆಯಲಿರುವ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಅಧಿವೇಶನದ ಬಳಿಕ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಸ್ಥಾನದ ಗೌರವ ದೇಶಕ್ಕೆ ಲಭಿಸಲಿದೆ. ಮುಂದಿನ ತಿಂಗಳ 22ನೇ ತಾರೀಕಿನಂದು ಮಂಡಳಿಯ ಅಧ್ಯಕ್ಷ ಸ್ಥಾನ ಸ್ವೀಕರಿಸಲಿದೆ. ಕಳೆದ ವರ್ಷವೇ ಈ ಬಗ್ಗೆ ನಿರ್ಧಾರವಾಗಿದ್ದರೂ, ಹಾಲಿ ಪರಿಸ್ಥಿತಿಯ ನಡುವೆ ಅದು ಸಿಗುತ್ತಿರುವುದು ಗೌರವವೇ ಸರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹುದ್ದೆಯ ಅವಧಿ ಮೂರು ವರ್ಷಗಳದ್ದಾಗಿದೆ. ಇಷ್ಟು ಮಾತ್ರವಲ್ಲ ದೇಶದ ಹೆಸರನ್ನು ಆವರ್ತನ ಪದ್ಧತಿಯಲ್ಲಿ ಸೂಚಿಸಲಾಗಿದೆ.

Advertisement

ಮೇ 18ರಂದು ನಡೆಯಲಿರುವ ವಿಶ್ವ ಆರೋಗ್ಯ ಅಸೆಂಬ್ಲಿ (ಡಬ್ಲ್ಯೂಎಚ್‌ಎ) ಸಭೆಯಲ್ಲಿ ಕಾರ್ಯಕಾರಿ ಮಂಡಳಿಯ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಸಭೆಯಲ್ಲಿ 60 ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗಿದ್ದರೂ, ಸದ್ಯ ಅದನ್ನು ಮೂರಕ್ಕೆ ಮಿತಿಗೊಳಿಸಲಾಗಿದೆ.

ಇತ್ತೀಚೆಗಷ್ಟೇ ಜಿ.20 ರಾಷ್ಟ್ರಗಳ ಮುಖ್ಯಸ್ಥರ ಜತೆಗೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಡೆದ ಸಮಾಲೋಚನೆ ವೇಳೆ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾದಂಥ ಜಾಗತಿಕ ಪಿಡುಗಿನ ಸಂದರ್ಭದಲ್ಲಿ ಸ್ವಂತ ಬಲದಿಂದಲೇ ಲಸಿಕೆ, ಔಷಧ ಮತ್ತು ಇತರ ಸಾಮುದಾಯಿಕವಾಗಿ ಉಪಯೋಗಕ್ಕೆ ಲಭ್ಯ ವಾಗುವಂಥ ಕಾರ್ಯಕ್ರಮ ರೂಪಿಸಬೇಕು ಮತ್ತು ಸ್ವತಂತ್ರವಾಗಿ ಇರುವಂಥ ವ್ಯವಸ್ಥೆ ಹೊಂದಿರಬೇಕು ಎಂದು ಅವರು ಪ್ರತಿಪಾದಿಸಿದ್ದರು. ಹೀಗಾಗಿ, ಮುಂದಿನ ಮೂರು ವರ್ಷಗಳಲ್ಲಿ ಕಾರ್ಯಕಾರಿ ಮಂಡಳಿಯಲ್ಲಿ ಭಾರತದ್ದೇ ನೇತೃತ್ವ ಇರಲಿರುವ ಹಿನ್ನೆಲೆಯಲ್ಲಿ ಮಹತ್ವದ ಸಂಶೋಧನೆ ಮತ್ತು ಲಸಿಕೆ ಅಭಿವೃದ್ಧಿ ವಿಚಾರದಲ್ಲಿ ಧನಾತ್ಮಕ ಅಂಶಗಳನ್ನು ನಿರೀಕ್ಷಿಸಬಹುದಾಗಿದೆ.

ಮಹಾ ನಿರ್ದೇಶಕರ ಜತೆಗೆ ಕೆಲಸ
ಸದ್ಯ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಟೆಡೋಸ್‌ ಅಧನೊಮ್‌ ಗೆಬ್ರೆಯೋಸಿಸ್‌ ಜತೆಗೆ ಭಾರತ ಕೆಲಸ ಮಾಡಬೇಕಾಗುತ್ತದೆ. ಕಾರ್ಯಕಾರಿ ಮಂಡಳಿ ಒಟ್ಟು 34 ಸದಸ್ಯರನ್ನು ಹೊಂದಿದೆ. ವಿಶ್ವ ಆರೋಗ್ಯ ಅಸೆಂಬ್ಲಿ ಕೈಗೊಂಡ ನಿರ್ಧಾರಗಳನ್ನು ಜಾರಿ ಮಾಡುವ ಅಧಿಕಾರ ಮತ್ತು ಹೊಣೆಗಾರಿಕೆಗಳನ್ನು ಹೊಂದಿರುತ್ತದೆ. ಇಷ್ಟು ಮಾತ್ರವಲ್ಲ ನಿರ್ಧಾರಗಳ ಜಾರಿಗೆ ಈ ಮಂಡಳಿಯ ಅಧ್ಯಕ್ಷರ ಅಭಿಪ್ರಾಯವನ್ನೂ ಮಹಾ ನಿರ್ದೇಶಕರು ಕೇಳಬೇಕಾಗುತ್ತದೆ. ಬಜೆಟ್‌ ಮತ್ತು ಆಡಳಿತ ನಿರ್ವಹಣೆಯಲ್ಲಿಯೂ ಭಾರತದ ಮಾತು ಕೆಲಸ ಮಾಡಲಿದೆ. ಇದರ ಜತೆಗೆ ಮುಂದಿನ ಮಹಾ ನಿರ್ದೇಶಕರ ಆಯ್ಕೆಯಲ್ಲಿ ಕೂಡ ಭಾರತದ ಪ್ರಭಾವ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next