ದೇವದುರ್ಗ: ಸ್ಥಳೀಯ ವಿಧಾನಸಭೆ ಎಸ್‌ಟಿ ಮೀಸಲು ಕ್ಷೇತ್ರದ 2018ರ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ದಿನೇದಿನೇ ರಾಜಕೀಯ ಚಟುವಟಿಕೆ ರಂಗೇರುತ್ತಿದೆ. ದೇವದರ್ಗು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಘೋಷಿಸಿದ ಅಭ್ಯರ್ಥಿಗಳು ಅರಕೇರಾ ಗ್ರಾಮದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇನ್ನು ಕಾಂಗ್ರೆಸ್ ಕೂಡಾ ಇದೇ ಗ್ರಾಮದ ಕುಟುಂಬದವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಕ್ಷೇತ್ರವನ್ನು ಅರಕೇರಾ ಕುಟುಂಬದಿಂದ ಮುಕ್ತಗೊಳಿಸಲು ಮತದಾರರು ಚಿಂತನೆ ನಡೆಸಿದ್ದು, ಇದು ಈ ಬಾರಿ ಪಕ್ಷೇತರರಿಗೆ ವರವಾಗುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿ ಪಕ್ಷದಿಂದ ಶಾಸಕ ಕೆ.ಶಿವನಗೌಡ ನಾಯಕ, ಜೆಡಿಎಸ್ ಪಕ್ಷದಿಂದ ವೆಂಕಟೇಶ ಪೂಜಾರಿ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ಇಲ್ಲಿವರೆಗೆ ಅಂತಿಮವಾಗಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅರಕೇರಾ ಗ್ರಾಮದ ರಾಜಶೇಖರ ನಾಯಕರೇ ಅಭ್ಯರ್ಥಿ ಆಗುವುದರಲ್ಲಿ ಯಾವುದೇ ದೇಹವಿಲ್ಲ ಎಂದು ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಒಂದೇ ಅರಕೇರಾ ಗ್ರಾಮಕ್ಕೆ ಮೂರು ಪಕ್ಷದಿಂದ ಟಿಕೆಟ್ ಬಹುತೇಕ ಖಚಿತವಾಗುತ್ತಿದೆ.
ಕಾಂಗ್ರೆಸ್ ನಲ್ಲಿ ಪೈಪೋಟಿ: ದೇವದುರ್ಗ ಕ್ಷೇತ್ರದಲ್ಲಿ ರಾಜಶೇಖರ ನಾಯಕ ಅವರಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದ್ದರೂ, ಈ ಬಾರಿ ಕಾಂಗ್ರೆಸ್ ಬೇರೆಯವರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಪಕ್ಷದ ಮುಖಂಡರಿಂದಲೇ ಕೇಳಿಬರುತ್ತಿದೆ. ಗೌರಮ್ಮ ಬಸಯ್ಯ ಶಾಖೆ ನೇತೃತ್ವದ ಐದು ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಲ್ಲದೇ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಐವರಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಹೇಳಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಕುಟುಂಬ ರಾಜಕಾರಣ ಬಿಟ್ಟು ಪಕ್ಷೆ ನಿಷ್ಠೆಗೆ ದುಡಿದ ದಿ| ಬಸಯ್ಯ ಶಾಖೆ ಅವರ ಪತ್ನಿ ಗೌರಮ್ಮ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಕಾಂಕ್ಷಿ ಭೀಮರೆಡ್ಡಿ ಮದರಕಲ್ ಆಗ್ರಹಿಸಿದ್ದಾರೆ. ಅಲ್ಲದೇ ಏ.19ರಂದು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ ಈ ಐವರ ತಂಡ ಸಭೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದ್ದು, ತಮಗೆ ಟಿಕೆಟ್ ಸಿಗದಿದ್ದಲ್ಲಿ ಪಕ್ಷೇತರಾಗಿ ಸ್ಪರ್ಧಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.ಇಂಥ ಬೆಳವಣಿಗೆ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪಕ್ಷೇತರರ ಪ್ರತಿರೋಧ: ಅರಕೇರಾ ಗ್ರಾಮದ ಕುಟುಂಬ ರಾಜಕಾರಣಕ್ಕೆ ಸೆಡ್ಡು ಹೊಡೆಯುವ ಉದ್ದೇಶದಿಂದ ಜೆಡಿಎಸ್ ಮುಖಂಡರಾದ ಕೆ. ಕರೆಮ್ಮ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೊಳಿಸಿ, ತಾವು ಸ್ಪರ್ಧೆಗಿಳಿಯುವ ಉದ್ದೇಶ ಹೊಂದಿದ್ದರು. ಆದರೆ ಜೆಡಿಎಸ್ ವರಿಷ್ಠರು ಅರಕೇರಾ ಗ್ರಾಮದ ವೆಂಕಟೇಶ ಪೂಜಾರಿ ಅವರಿಗೆ ಟಿಕೆಟ್ ಘೋಷಿಸಿದೆ. ಇದರಿಂದ ಬೇಸತ್ತ ಕೆ. ಕರೆಮ್ಮ ಬೆಂಬಲಿಗರ ಒತ್ತಾಸೆಯಂತೆ ಈ ಬಾರಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರದಿಂದ ಕಣಕ್ಕಿಳಿಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇನ್ನು ಗಬ್ಬೂರು ಭಾಗದಲ್ಲಿ ಗುರುವಿನ ಸಿದ್ದಯ್ಯ ತಾತಾನವರ ಪ್ರಭಾವ ಹೆಚ್ಚಾಗಿದ್ದು, ಅದೇ ಕುಟುಂಬದ ಮಮತಾ ಗುರುವಿನ ತಾತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದು, ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ.
ಇನ್ನು ಜಾಲಹಳ್ಳಿ ಭಾಗದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಜಿಪಂ ಮಾಜಿ ಸದಸ್ಯೆ ಮಹಾದೇವಮ್ಮ ಮುದರಂಗಪ್ಪ ಯರಕಮಟ್ಟಿ ಬಿಜೆಪಿಯಲ್ಲಿ ತಮ್ಮನ್ನು ಕಡೆಗಣಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಒಂದೇ ಕುಟುಂಬದ ರಾಜಕಾರಣದಿಂದ ಕ್ಷೇತ್ರವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳಿಗೆ ಬಿಸಿ ಮುಟ್ಟಿಸಲು ಪಕ್ಷೇತರರು ಸೆಡ್ಡು ಹೊಡೆಯಲಿದ್ದಾರೆ. ಕ್ಷೇತ್ರದ ಮತದಾರರು ಕೂಡ ಪಕ್ಷೇತರರಿಗೆ ಮಣೆ ಹಾಕುತ್ತಾರೋ ಇಲ್ಲವೇ ಸಂಪ್ರದಾಯದಂತೆ ಕುಟುಂಬ ರಾಜಕಾರಣಕ್ಕೇ ಮನ್ನಣೆ ನೀಡುತ್ತಾರೋ ಕಾದು ನೋಡಬೇಕಿದೆ.
ಲಿಂಗಾಯತರಲ್ಲಿ ಮೂಡದ ಒಮ್ಮತ ದೇವದುರ್ಗ ಕ್ಷೇತ್ರವನ್ನು ಅರಕೇರಾ ಗ್ರಾಮದ ಕುಟುಂಬದಿಂದ ಮುಕ್ತಿಗೊಳಿಸಲು ಮತ್ತು ಪರ್ಯಾಯ ನಾಯಕತ್ವ ಹುಡುಕಾಟದಲ್ಲಿ ಲಿಂಗಾಯತ ಮುಖಂಡರು ಇತ್ತೀಚೆಗೆ ನಡೆಸಿದ ಸಭೆಯಲ್ಲೂ ಯಾರಿಗೆ ಬೆಂಬಲಿಸಬೇಕೆಂಬ ಕುರಿತು ಒಮ್ಮತಾಭಿಪ್ರಾಯ ಮೂಡಿಲ್ಲ ಎನ್ನಲಾಗಿದೆ. ಲಿಂಗಾಯತ ಮುಖಂಡ ಸಿ.ಎಸ್. ಪಾಟೀಲ ಬಣ ಜೆಡಿಎಸ್ ಅಭ್ಯರ್ಥಿ ವೆಂಕಟೇಶ ಪೂಜಾರಿಗೆ ಬೆಂಬಲಿಸುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರೆ, ಬುಡ್ಡನಗೌಡ ಬಣ ಪಕ್ಷೇತರ ಅಭ್ಯರ್ಥಿ ಕರೆಮ್ಮ ಗೋಪಾಲಕೃಷ್ಣ ಅವರಿಗೆ ಬೆಂಬಲಿಸುವ ಕುರಿತು ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಕ್ಷೇತ್ರದಲ್ಲಿ ಲಿಂಗಾಯತರ ಮತಗಳು ಕಡಿಮೆ ಪ್ರಮಾಣದಲ್ಲಿದ್ದರೂ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ನಾಗರಾಜ ತೇಲ್ಕರ್