Advertisement
ವಾಂಖೇಡೆಯಲ್ಲಿ ಎರಡೂ ತಂಡಗಳಿಂದ ಸಮ ಬಲದ ಹೋರಾಟ ಕಂಡುಬಂದಿತ್ತು. ಆದರೆ ಅದೃಷ್ಟ ಪಾಂಡ್ಯ ಪಾಳೆಯದಲ್ಲಿತ್ತು, ಅಷ್ಟೇ. ಪುಣೆಯಲ್ಲಿ ಅದೃಷ್ಟ ಯಾರ ಕೈಹಿಡಿದೀತೇ, ಮತ್ತೆ ಟಿ20ಯ ನೈಜ ರೋಮಾಂಚನ ಗರಿಗೆದರೀತೇ ಎಂಬುದೆಲ್ಲ ಕುತೂಹಲದ ಸಂಗತಿಗಳು.
Related Articles
Advertisement
ಇಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಲೆಕ್ಕಾಚಾರ ತಲೆಕೆಳಗಾಯಿತೇ ಎಂಬ ಪ್ರಶ್ನೆಯೂ ಉದ್ಭವಿಸದಿರದು. ಅಂತಿಮ ಓವರ್ ಎಸೆಯಲು ಸ್ಪೆಷಲಿಸ್ಟ್ ಪೇಸ್ ಬೌಲರ್‌ಗಳಾÂರೂ ಇರಲಿಲ್ಲ. ಅವರೆಲ್ಲರ ಕೋಟಾ ಆಗಲೇ ಮುಗಿದಿತ್ತು. ಒಂದು ಓವರ್ ಉಳಿಸಿಕೊಂಡಿದ್ದ ಪಾಂಡ್ಯ ಅವರೇ ಸ್ವತಃ ದಾಳಿಗೆ ಇಳಿಯಬಹುದೆಂಬ ನಿರೀಕ್ಷೆ ಇತ್ತು. ಆದರೆ ಚೆಂಡು ಅಕ್ಷರ್ ಪಟೇಲ್ ಕೈಸೇರಿತು.
ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಮರಳಿ ಟ್ರ್ಯಾಕ್ ಏರಬೇಕಾದ ಅಗತ್ಯವಿದೆ. ಟಿ20 ವಿಶ್ವಕಪ್‌ನಿಂದ ಹೊರಗಿರಿಸಿದ ಬಳಿಕ ಅವರ ಆತ್ಮವಿಶ್ವಾಸ ಕುಂಟಿತಗೊಂಡಂತಿದೆ. 2 ಓವರ್‌ಗಳಲ್ಲಿ 26 ರನ್ ನೀಡಿದ ಚಹಲ್ ಅವರನ್ನು ಮತ್ತೆ ಬೌಲಿಂಗ್ ದಾಳಿಗೆ ಇಳಿಸಲೇ ಇಲ್ಲ.
ಪವರ್ ಪ್ಲೇ ವೈಫಲ್ಯ:
ಟೀಮ್ ಇಂಡಿಯಾದ ಬಗೆಹರಿಯದ ಸಮಸ್ಯೆಯೆಂದರೆ ಪವರ್ ಪ್ಲೇ ಬ್ಯಾಟಿಂಗ್‌ನದ್ದು. ಕಳೆದ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ-ಕೆ.ಎಲ್. ರಾಹುಲ್ ಈ ಅವಧಿಯಲ್ಲಿ ಸಾಕಷ್ಟು ತಿಣುಕಾಡಿ ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧ ಇಶಾನ್ ಕಿಶನ್ ಮೊದಲ ಓವರ್‌ನಲ್ಲೇ 17 ರನ್ ದೋಚಿದಾಗ ಭಾರತದ ಸಮಸ್ಯೆ ಬಗೆಹರಿಯಿತು ಎಂದೇ ಭಾವಿಸಲಾಯಿತು. ಆದರೆ ಮೊದಲ ಪಂದ್ಯ ಕಂಡ ಶುಭಮನ್ ಗಿಲ್ ಸಿಡಿಯಲು ವಿಫಲರಾದರು. ಐಪಿಎಲ್ ಸೇರಿದಂತೆ 96 ಟಿ20 ಪಂದ್ಯಗಳಿಂದ 128.74ರಷ್ಟು ಉನ್ನತ ಸ್ಟ್ರೈಕ್‌ರೇಟ್ ದಾಖಲಿಸಿರುವ ಗಿಲ್ ಚೊಚ್ಚಲ ಪಂದ್ಯದಲ್ಲಿ “ಶೇಕಿ’ಯಾಗಿ ಕಂಡರು. ದ್ವಿತೀಯ ಪಂದ್ಯದಲ್ಲಿ ಅವರು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕಿದೆ.
ಋತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ ರೇಸ್‌ನಲ್ಲಿರುವುದರಿಂದ ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ.
“360 ಡಿಗ್ರಿ’ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಅಗ್ಗಕ್ಕೆ ಔಟಾದರು. 2022ರಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಅವರ ಅಪರೂಪದ ಟಿ20 ವೈಫಲ್ಯ ಇದಾಗಿದೆ. ಸಂಜು ಸ್ಯಾಮ್ಸನ್ ಕೂಡ ಲಭಿಸಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.
ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್ ಬೌಲಿಂಗ್ ಸರದಿಯಲ್ಲಿ ಕಾದು ನಿಂತಿದ್ದಾರೆ.
ಲಂಕಾ ಟಿ20 ಸ್ಪೆಷಲಿಸ್ಟ್ :
ಶ್ರೀಲಂಕಾ ಟಿ20 ಸ್ಪೆಷಲಿಸ್ಟ್ ಗಳನ್ನೇ ಹೊಂದಿರುವ ತಂಡ. ಏಷ್ಯಾ ಕಪ್ ಚಾಂಪಿಯನ್ ಎಂಬ ಕಿರೀಟವನ್ನೂ ಹೊತ್ತಿದೆ. ಇದಕ್ಕೆ ತಕ್ಕ ಪ್ರದರ್ಶನ ನೀಡುವ ಸಾಮರ್ಥ್ಯವಂತೂ ಇದ್ದೇ ಇದೆ. ಆದರೆ ಅದೃಷ್ಟ ಕೈ ಹಿಡಿಯಬೇಕಷ್ಟೇ. ಶಣಕ, ನಿಸ್ಸಂಕ, ರಾಜಪಕ್ಸ, ಹಸರಂಗ, ಧನಂಜಯ, ಕರುಣರತ್ನೆ ಅವರೆಲ್ಲ ಅತ್ಯಂತ ಅಪಾಯಕಾರಿಗಳೆಂಬುದರಲ್ಲಿ ಅನುಮಾನವಿಲ್ಲ.