Advertisement
ಜೋ ರೂಟ್ ನಾಟಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ 109 ರನ್ ಹೊಡೆದರೆ, ಲಾರ್ಡ್ಸ್‌ನಲ್ಲಿ ಅಜೇಯ 180 ರನ್ ಬಾರಿಸಿ ಮೆರೆದಿದ್ದರು. ಲೀಡ್ಸ್‌ನಲ್ಲಿ 124 ಎಸೆತಗಳಿಂದ ಅವರ ಶತಕ ಪೂರ್ತಿಗೊಂಡಿತು. ಇದು ಅವರ 23ನೇ ಟೆಸ್ಟ್ ಸೆಂಚುರಿ. ಅವರ ಬ್ಯಾಟಿಂಗ್ ಎಂದಿನ ಶೈಲಿಗೆ ಹೊರತಾಗಿತ್ತು; ಹೆಚ್ಚು ಬಿರುಸಿನಿಂದ ಕೂಡಿತ್ತು.
Related Articles
Advertisement
24 ರನ್ ಅಂತರದಲ್ಲಿ ಮೊತ್ತೋರ್ವ ಆರಂಭಕಾರ ಹಮೀದ್ ಕೂಡ ಬೌಲ್ಡ್ ಆದರು. ಅವರ ಗಳಿಕೆ 68 ರನ್. 195 ಎಸೆತಗಳ ಈ ಆಟದಲ್ಲಿ ಒಂದು ಡಜನ್ ಬೌಂಡರಿ ಸೇರಿತ್ತು. ವಿಕೆಟ್ ಟೇಕರ್ ರವೀಂದ್ರ ಜಡೇಜ. ಅವರಿಗೆ ಹಾಗೂ ಭಾರತದ ಸ್ಪಿನ್ನಿಗೆ ಈ ಸರಣಿಯಲ್ಲಿ ಲಭಿಸಿದ ಮೊದಲ ವಿಕೆಟ್ ಇದಾಗಿತ್ತು.
ಮಲಾನ್-ರೂಟ್ ಶತಕದ ಜತೆಯಾಟ:
3 ವರ್ಷಗಳ ಬಳಿಕ ಟೆಸ್ಟ್ ಆಡಲಿಳಿದ ಡೇವಿಡ್ ಮಲಾನ್ ಮತ್ತು ನಾಯಕ ಜೋ ರೂಟ್ ಮತ್ತೂಂದು ಅಮೋಘ ಜತೆಯಾಟದ ಮೂಲಕ ಇಂಗ್ಲೆಂಡ್ ಇನ್ನಿಂಗ್ಸ್ ಬೆಳೆಸತೊಡಗಿದರು. 3ನೇ ವಿಕೆಟಿಗೆ 189 ಎಸೆತಗಳಿಂದ 139 ರನ್ ಸಂಗ್ರಹಗೊಂಡಿತು. ಟೀ ವಿರಾಮಕ್ಕೆ ಸರಿಯಾಗಿ ಸಿರಾಜ್ ಈ ಜೋಡಿಯನ್ನು ಬೇರ್ಪಡಿಸಿದರು. 70 ರನ್ ಮಾಡಿದ ಮಲಾನ್ (128 ಎಸೆತ, 11 ಬೌಂಡರಿ) ಕೀಪರ್ ಪಂತ್‌ಗೆ ಕ್ಯಾಚ್ ನೀಡಿ ವಾಪಸಾದರು.
4ನೇ ವಿಕೆಟ್ ರೂಪದಲ್ಲಿ ಔಟಾದವರು ಜಾನಿ ಬೇರ್‌ಸ್ಟೊ (29). ಈ ವಿಕೆಟ್ ಶಮಿ ಪಾಲಾಯಿತು.
ಪ್ರೇಕ್ಷಕರ ವರ್ತನೆಗೆ ಪಂತ್ ಬೇಸರ :
ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ ವೀಕ್ಷಕರ ಅನುಚಿತ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ರಿಷಭ್ ಪಂತ್, ಇಂತಹ ಘಟನೆಗಳು ಕ್ರಿಕೆಟಿಗೆ ಶೋಭೆಯಲ್ಲ ಎಂದಿದ್ದಾರೆ.
ಇಂಗ್ಲೆಂಡ್ ತಂಡದ ಪ್ರಥಮ ಇನ್ನಿಂಗ್ಸ್ ವೇಳೆ ಬೌಂಡರಿ ಲೈನ್ ಬಳಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಸಿರಾಜ್ ಅವರತ್ತ ಇಂಗ್ಲೆಂಡ್ ಅಭಿಮಾನಿಗಳು ಚೆಂಡು ಮತ್ತು ಕೆಲವು ವಸ್ತುಗಳನ್ನು ಎಸೆದಿದ್ದರು.
“ನೀವು ಗ್ಯಾಲರಿಯಲ್ಲಿದ್ದು ಏನು ಬೇಕಾದರೂ ಮಾತನಾಡಿ. ಆದರೆ ಯಾವುದೇ ವಸ್ತುಗಳನ್ನು ಆಟಗಾರರ ಕಡೆ ಎಸೆಯಬೇಡಿ. ಇದು ಕ್ರಿಕೆಟ್‌ಗೆ ಒಳಿತಲ್ಲ’ ಎಂದು ಪಂತ್ ಇಂಗ್ಲೆಂಡ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
“ನಾವು ಆಲೌಟ್ ಆದ ಬಳಿಕ ಪಿಚ್ ಅನ್ನು ತುಂಬ ರೋಲ್ ಮಾಡಲಾಯಿತು. ಇದು ಬ್ಯಾಟಿಂಗಿಗೆ ಹೆಚ್ಚು ಸಹಕಾರ ನೀಡತೊಡಗಿತು. ಆದರೆ ನಾವು ಮೊದಲು ಬ್ಯಾಟ್ ಮಾಡುವಾಗ ಪಿಚ್ ಸ್ವಲ್ಪ ಮೃದುವಾಗಿತ್ತು, ಇದಕ್ಕೆ ತಕ್ಕಂತೆ ಇಂಗ್ಲೆಂಡಿಗೆ ಅತ್ಯುತ್ತಮ ಬೌಲಿಂಗ್ ನಡೆಸಲು ಸಾಧ್ಯವಾಯಿತು. ಇದೀಗ ಪಿಚ್ ಬಗ್ಗೆ ತಿಳಿದಿರುವ ನಾವು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಲಿದ್ದೇವೆ’ ಎಂದು ಪಂತ್ ಭರವಸೆ ನೀಡಿದ್ದಾರೆ.
“ನಾವು ಒಂದು, ನೀವು ಸೊನ್ನೆ’ :
ಇಂಗ್ಲೆಂಡ್ ಅಭಿಮಾನಿಗಳು ಸಿರಾಜ್ ಅವರತ್ತ ಕೇವಲ ವಸ್ತುಗಳನ್ನಷ್ಟೇ ಎಸೆದಿದ್ದಲ್ಲ, ಪದೇ ಪದೇ ತಂಡದ ಮೊತ್ತವೆಷ್ಟು ಎಂದು ಕೇಳುವ ಮೂಲಕ ಕೆರಳಿಸುತ್ತಿದ್ದರು. ಇದಕ್ಕೆ ಸಿರಾಜ್, “ಸರಣಿಯಲ್ಲಿ ನಾವು ಒಂದು, ನೀವು ಶೂನ್ಯ’ ಎಂದು ಕೈ ಸನ್ನೆಯ ಮೂಲಕ ತಕ್ಕ ಉತ್ತರ ನೀಡಿದರು!