Advertisement

NZ vs ENG: ಟೆಸ್ಟ್‌ನಲ್ಲಿ 5 ಲಕ್ಷ ರನ್‌; ಇಂಗ್ಲೆಂಡ್‌ ವಿಶ್ವದ ಮೊದಲ ತಂಡ

09:19 PM Dec 07, 2024 | Team Udayavani |

ವೆಲ್ಲಿಂಗ್ಟನ್‌: ಇಲ್ಲಿ ನಡೆಯುತ್ತಿರುವ ಆತಿಥೇಯ ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ ನಡುವಿನ 2ನೇ ಟೆಸ್ಟ್‌ 2ನೇ ದಿನ ಇಂಗ್ಲೆಂಡ್‌ ಹಲವಾರು ದಾಖಲೆಗಳನ್ನು ನಿರ್ಮಿಸಿದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 5 ಲಕ್ಷ ರನ್‌ (500,126) ಗಳಿಸಿದ ವಿಶ್ವದ ಮೊದಲ ತಂಡ ಎನಿಸಿಕೊಂಡಿದೆ. ಆಸ್ಟ್ರೇಲಿಯಾ (428,000), ಭಾರತ (278,751) ಗರಿಷ್ಠ ರನ್‌ ಗಳಿಸಿದ ತಂಡಗಳ ಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿವೆ.

Advertisement

ಇಂಗ್ಲೆಂಡ್‌ನ‌ 280 ರನ್ನುಗಳ ಮೊದಲ ಇನಿಂಗ್ಸ್‌ಗೆ ಜವಾಬಾಗಿ ನ್ಯೂಜಿಲೆಂಡ್‌ 125ಕ್ಕೆ ಕುಸಿಯಿತು. 5ಕ್ಕೆ 86 ರನ್‌ ಮಾಡಿದಲ್ಲಿಂದ ಲ್ಯಾಥಂ ಪಡೆ ಬ್ಯಾಟಿಂಗ್‌ ಮುಂದುವರಿಸಿತ್ತು. ದ್ವಿತೀಯ ಸರದಿಯಲ್ಲಿ ಆಕ್ರಮಣಕಾರಿ ಆಟವಾಡಿದ ಇಂಗ್ಲೆಂಡ್‌ 5 ವಿಕೆಟಿಗೆ 378 ರನ್‌ ರಾಶಿ ಹಾಕಿದೆ. ನಿಭಾಯಿಸಿದ್ದು 76 ಓವರ್‌ ಮಾತ್ರ. ಇನ್ನೂ 5 ವಿಕೆಟ್‌ ಕೈಲಿರಿಸಿಕೊಂಡಿರುವ ಇಂಗ್ಲೆಂಡ್‌ ಈಗಾಗಲೇ 533 ರನ್ನುಗಳ ಮುನ್ನಡೆ ಹೊಂದಿದೆ. 2 ದಿನಗಳ ಆಟದಲ್ಲಿ 25 ವಿಕೆಟ್‌ ನಷ್ಟಕ್ಕೆ 783 ರನ್‌ ಒಟ್ಟುಗೂಡಿರುವುದು ಈ ಪಂದ್ಯದ ವಿಶೇಷ.

100 ಬಾರಿ 50ಕ್ಕೂ ಅಧಿಕ ರನ್‌, ರೂಟ್‌ 4ನೇ ಬ್ಯಾಟರ್‌: ಅಜೇಯ 73 ರನ್‌ ಬಾರಿಸಿರುವ ಇಂಗ್ಲೆಂಡ್‌ ಜೋ ರೂಟ್‌, ಟೆಸ್ಟ್‌ ಕ್ರಿಕೆಟ್‌ 100 ಬಾರಿ 50ಕ್ಕೂ ಅಧಿಕ ರನ್‌ ಬಾರಿಸಿದ ವಿಶ್ವದ 4ನೇ ಬ್ಯಾಟರ್‌ ಎನಿಸಿಕೊಂಡರು. 119 ಬಾರಿ ಈ ಸಾಧನೆ ಮಾಡಿರುವ ಸಚಿನ್‌ ತೆಂಡುಲ್ಕರ್‌ ಅಗ್ರಸ್ಥಾನದಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-280 ಮತ್ತು 378/5 (ಡಕೆಟ್‌ 92, ಬೆಥೆಲ್‌ 96, ರೂಟ್‌ ಬ್ಯಾಟಿಂಗ್‌ 73, ಸೌದಿ 72ಕ್ಕೆ 2, ಹೆನ್ರಿ 76ಕ್ಕೆ 2). ನ್ಯೂಜಿಲೆಂಡ್‌ 1ನೇ 125 (ವಿಲಿಯಮ್ಸನ್‌ 37, ಲ್ಯಾಥಂ 17, ಅಟ್ಕಿನ್ಸನ್‌ 31ಕ್ಕೆ 4, ಕಾರ್ಸ್‌ 46ಕ್ಕೆ 4).

ಅಟ್ಕಿನ್ಸನ್‌ ಹ್ಯಾಟ್ರಿಕ್‌:

Advertisement

ಗಸ್‌ ಅಟ್ಕಿನ್ಸನ್‌ ನ್ಯೂಜಿಲೆಂಡ್‌ ಸರದಿಯ ಕೊನೆಯ 3 ವಿಕೆಟ್‌ಗಳನ್ನು ಸತತ 3 ಎಸೆತಗಳಲ್ಲಿ ಕೆಡವಿ ಹ್ಯಾಟ್ರಿಕ್‌ ಹೀರೋ ಎನಿಸಿಕೊಂಡರು. ನಥನ್‌ ಸ್ಮಿತ್‌, ಮ್ಯಾಟ್‌ ಹೆನ್ರಿ ಮತ್ತು ಟಿಮ್‌ ಸೌಥಿ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಸರ್ರೆ ಕೌಂಟಿಯ ಪೇಸರ್‌ ಆಗಿರುವ ಅಟ್ಕಿನ್ಸನ್‌, ಹ್ಯಾಟ್ರಿಕ್‌ ಸಾಧನೆಗೈದ ಇಂಗ್ಲೆಂಡ್‌ನ‌ 15ನೇ ಬೌಲರ್‌. 2017ರ ಬಳಿಕ ದಾಖಲಾದ ಇಂಗ್ಲೆಂಡ್‌ನ‌ ಮೊದಲ ಹ್ಯಾಟ್ರಿಕ್‌ ನಿದರ್ಶನ ಇದಾಗಿದೆ. ಅಂದಿನ ಸಾಧಕ ಮೊಯಿನ್‌ ಅಲಿ.

ಇನ್ನೂ 3 ದಿನಗಳ ಆಟ ಬಾಕಿ ಇದೆ. ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಡಿಕ್ಲೇರ್‌ ಸೂಚನೆಯನ್ನೇನೂ ನೀಡಿಲ್ಲ. ಹಾಗೆಯೇ ಈವರೆಗಿನ ಟೆಸ್ಟ್‌ ಇತಿಹಾಸದಲ್ಲಿ ಯಾವ ತಂಡವೂ 500 ಪ್ಲಸ್‌ ರನ್‌ ಚೇಸ್‌ ಮಾಡಿ ಗೆದ್ದಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next