ಬೀದರ: ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳು ಕಾಂಗ್ರೆಸ್ ಪಕ್ಷದ ಪಾಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಂಬರುವ ಲೋಕ ಸಭೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ವಿಧಾನ ಸಭೆ ಚುನಾವಣೆಯಲ್ಲಿ ಭಾಲ್ಕಿ, ಹುಮನಾಬಾದ, ಬಸವಕಲ್ಯಾಣ, ಬೀದರ(ಉ) ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದ್ದು, ಲೋಕ ಸಭೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವ ಅಭ್ಯರ್ಥಿ ಈ ಬಾರಿ ಸುಲಭವಾಗಿ ಜಯಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಆಕಾಂಕ್ಷಿಗಳು: ಕಾಂಗ್ರೆಸ್ ಮೂಲಗಳ ಪ್ರಕಾರ ಹಾಲಿ ಎಂಎಲ್‌ಸಿ ವಿಜಯಸಿಂಗ್ ಅಥವಾ ಧರ್ಮಸಿಂಗ್ ಪತ್ನಿ ಪ್ರಭಾವತಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವ ರಾಜಶೇಖರ ಪಾಟೀಲ ಸಹೋದರ ಭೀಮರಾವ್ ಪಾಟೀಲ, ಮಾಜಿ ಶಾಸಕ ಅಶೋಕ ಖೇಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬಸವರಾಜ ಬುಳ್ಳಾ, ಆನಂದ ದೇವಪ್ಪ, ಆಯಾಜ್ ಖಾನ್ ಲೋಕಸಭೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೆ, ಫೆ.3ರಂದು ಕಲಬುರಗಿ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಎಐಸಿಸಿ ಕಾರ್ಯದರ್ಶಿ ಡಾ| ಶೈಲಜನಾಥ್ ಮಧು ಗೌಡ ಅವರನ್ನು ಭೇಟಿ ಮಾಡಿದ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರ ಕಾರ್ಯಕರ್ತರು, ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಂಗ್ ಪರಿವಾರ ಬೇಡಿಕೆ: ಮಾಜಿ ಮುಖ್ಯಮಂತ್ರಿ ದಿ| ಎನ್.ಧರ್ಮಸಿಂಗ್ 2009ರ ಲೋಕಸಭೆ ಚುನಾವಣೆಯಲ್ಲಿ 3.37 ಲಕ್ಷ ಮತಗಳನ್ನು ಪಡೆದು ಜಯಗಳಿಸಿ ಬೀದರ್ ಕ್ಷೇತ್ರದ ಮೇಲೆ ಭಾರಿ ಪ್ರಭಾವ ಬೀರಿದರು. ಎನ್.ಧರ್ಮಸಿಂಗ್ ಅವರು ಹೇಳಿದ ಕಾರ್ಯಗಳು ಜಿಲ್ಲೆಯಲ್ಲಿ ನಡೆಯಲೇ ಬೇಕು ಎಂಬಂತೆ ಸ್ಥಿತಿ ನಿರ್ಮಾಣಗೊಂಡಿತ್ತು. ನಂತರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸಿಂಗ್ ಅವರ ಪುತ್ರ ವಿಜಯಸಿಂಗ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿ ಜಯಗಳಿಸಿದರು. ಇದೀಗ ಧರ್ಮಸಿಂಗ್ ಪರಿವಾರ ತಮ್ಮ ತಂದೆಯ ಸ್ಥಾನವನ್ನು ಮರಳಿ ಪರಿವಾರಕ್ಕೆ ನೀಡಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಎಂಎಲ್‌ಸಿ ವಿಜಯಸಿಂಗ್ ಪ್ರತಿಕ್ರಿಯೆ ನೀಡಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾನೇ ಸ್ಪರ್ಧೆ ನಡೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಖಂಡ್ರೆ ಪರಿವಾರ: ಸದ್ಯ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಭಾಲ್ಕಿ ಕ್ಷೇತ್ರದ ಶಾಸಕರು ಕೂಡ ಹೌದು. ಕಳೆದ ವಿಧಾನ ಸಭೆ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿ ಜಯಗಳಿಸುವಲ್ಲಿ ಇವರು ಶ್ರಮಿಸಿದ್ದಾರೆ. ಇದೀಗ ನಡೆಯಲಿರುವ ಲೋಕ ಸಭೆ ಚುನಾವಣೆಯಲ್ಲಿ ಖಂಡ್ರೆ ಪರಿವಾರದಲ್ಲಿ ಒಬ್ಬರನ್ನು ಸ್ಪರ್ಧೆಗೆ ಇಳಿಸಬೇಕು ಎಂದು ಚಿಂತನೆ ನಡೆಸಿದ್ದಾರೆ. ಖುದ್ದು ಅವರು ಕೂಡ ಆಕಾಂಕ್ಷಿಯಾಗಿದ್ದಾರೆ ಎಂದು ಭಾಲ್ಕಿ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಇಲ್ಲವಾದರೆ, ಅವರ ಪತ್ನಿ ಗೀತಾ ಖಂಡ್ರೆ ಅವರನ್ನು ಚುನಾವಣೆ ಅಖಾಡಕ್ಕೆ ಇಳಿಸುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಈ ಕುರಿತು ಶಾಸಕ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಸದ್ಯ ಯಾವುದನ್ನೂ ಹೇಳುವುದು ಸರಿಅಲ್ಲ ಎಂದ ಅವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವ ಕುರಿತು ರಾಷ್ಟ್ರೀಯ ಹೈಕಮಾಂಡ್ ಸೂಚಿಸಿದರೆ ಖುದ್ದು ಅಥವಾ ಖಂಡ್ರೆ ಪರಿವಾರದಿಂದ ಒಬ್ಬರು ಸ್ಪರ್ಧೆ ನಡೆಸುವುದಾಗಿ ತಿಳಿಸಿದ್ದಾರೆ.
ಪಾಟೀಲ ಪರಿವಾರ: ಸತತ ಮೂರು ಬಾರಿ ಹ್ಯಾಟ್ರಿಕ್ ಜಯಗಳಿಸಿದ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಅವರು ಮೈತ್ರಿ ಸರ್ಕಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾಗಿದ್ದು, ಅವರ ಸಹೋದರ ಡಾ| ಚಂದ್ರಶೇಖರ ಪಾಟೀಲ ಪದವಿಧರ ಎಂಎಲ್‌ಸಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಇದೀಗ ಬರಲಿರುವ ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಚಿವರ ಇನ್ನೊರ್ವ ಸಹೋದರ ಭೀಮರಾವ್ ಪಾಟೀಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭೀಮರಾವ್ ಪಾಟೀಲರು, ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಪಕ್ಷಕ್ಕೆ ಮನವಿ ಮಾಡಲಾಗಿತ್ತು. ಆದರೆ ಟಿಕೆಟ್ ದೊರೆಯಲಿಲ್ಲ. ಇದೀಗ ಲೋಕಸಭೆ ಚುನಾವಣೆಯ ಟಿಕೆಟ್ ನೀಡುವಂತೆ ಎಐಸಿಸಿ ಕಾರ್ಯಾದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ರಾಹುಲ್ ಗಾಂಧಿ ಯುವ ಜನರಿಗೆ ಟಿಕೆಟ್ ನೀಡುವುದಾಗಿ ಹೇಳುತ್ತಿದ್ದು, ನನಗೆ ಟಿಕೆಟ್ ಸಿಕ್ಕರೆ ಖಂಡಿತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಮುಂಬರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಯಾರಿಗೆ ಟಿಕೆಟ್ ಸಿಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ.
ದುರ್ಯೋಧನ ಹೂಗಾರ