Advertisement
ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹಳೆಗೇಟು (ಸುಬ್ರಹ್ಮಣ್ಯ ಕ್ರಾಸ್) ನಿಂದ ಕೊಯಿಲ ವರೆಗೆ ರಸ್ತೆ ಕಾಮಗಾರಿಗೆ 7.25 ಕೋಟಿ ರೂ. ಅನುದಾನ ಬಿಡುಗಡೆಗೊಂಡಿತ್ತು. 2016ರ ಆಗಸ್ಟ್ ನಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾದರೂ 6 ಕಿ.ಮೀ. ಉದ್ದದ ಈ ಕಾಮಗಾರಿ ಯನ್ನು ಪೂರ್ಣಗೊಳಿಸಲು ಗುತ್ತಿಗೆದಾರ ನಿಗೆ ಸಾಧ್ಯವಾಗಲೇ ಇಲ್ಲ. ಇದೀಗ ಹಳೆಗೇಟುವಿನ ಕಂಚಿಬೆಟ್ಟು ಎಂಬಲ್ಲಿ ರಸ್ತೆ ಬದಿ ಆಳವಾದ ಚರಂಡಿ ಮಾಡಲಾಗಿದ್ದು, ಅದನ್ನು ಅರ್ಧದಲ್ಲಿಯೇ ಬಿಟ್ಟು ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ. ಕೆಲವು ಕಡೆ ಚರಂಡಿಗೆ ಕಾಂಕ್ರೀಟ್ ಹಾಕಲಾಗಿದ್ದು, ಇನ್ನು ಕೆಲವೆಡೆ ಸರಳುಗಳನ್ನು ಮಾತ್ರ ನಿಲ್ಲಿಸಲಾಗಿದೆ. ಇದು ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ.
ಚರಂಡಿ ಅಪೂರ್ಣವಾಗಿದ್ದರಿಂದ ನೀರು ಹೋಗಲು ಸರಿಯಾದ ವ್ಯವಸ್ಥೆಯಿಲ್ಲ. 6 ಅಡಿ ಆಳ ಹಾಗೂ 400 ಮೀ. ಉದ್ದದ ಈ ಚರಂಡಿಯನ್ನು ಅಪೂರ್ಣವಾಗಿ ಬಿಟ್ಟಿದ್ದರಿಂದ ಇತ್ತೀಚೆಗೆ ಬಿದ್ದ ಒಂದೆರಡು ಮಳೆಗೆ ಚರಂಡಿಯಲ್ಲಿ ನೀರು ಶೇಖರಣೆಗೊಂಡಿತ್ತು. ಇದು ಜನವಸತಿ ಪ್ರದೇಶವಾಗಿದ್ದು, ಮಕ್ಕಳಿಗೂ ಅಪಾಯಕಾರಿಯಾಗಿದೆ. ಈಗಾಗಲೇ ಕೆಲವು ಮಕ್ಕಳು ಆಟವಾಡುತ್ತ ಚರಂಡಿಯಲ್ಲಿ ಬಿದ್ದು ತರಚು ಗಾಯ ಮಾಡಿಕೊಂಡಿದ್ದೂ ಇದೆ. ರಸ್ತೆಯೂ ಅಪೂರ್ಣ
ಗುತ್ತಿಗೆದಾರ ಸಂಸ್ಥೆ ಎಂದೋ ಒಮ್ಮೆ ಬಂದು 4-5 ದಿನ ಗಳ ಕೆಲಸ ಮಾಡಿಸುತ್ತಿದೆ. ಹೀಗಾಗಿ, ಚರಂಡಿ ಮಾತ್ರ ಅಲ್ಲ, ರಸ್ತೆಯೂ ಅಪೂರ್ಣವಾಗಿದೆ. ಸುಮಾರು 2 ಕಿ.ಮೀ. ರಸ್ತೆಯನ್ನು ಇನ್ನೂ ನಿರ್ಮಿಸಿಲ್ಲ. ಮೊದಲು ನಿರ್ಮಿಸಿದ ರಸ್ತೆ ಕೆಲವೆಡೆ ಎದ್ದು ಹೋಗಿದೆ. ಆದರೂ ಇದನ್ನು ಪೂರ್ಣಗೊಳಿಸುವಲ್ಲಿ ಸಂಸ್ಥೆ ಮುಂದಾಗುತ್ತಿಲ್ಲ.
Related Articles
Advertisement
ಸಮಸ್ಯೆ ಗಮನಕ್ಕೆ ಬಂದಿದೆಇಕ್ಬಾಲ್ ಅಹ್ಮದ್ ಇನ್‌ಫ್ರಾ ಪ್ರಾಜೆಕ್ಟ್ ಸಂಸ್ಥೆಯ ಶರೀಫ್ ಕನ್‌ಸ್ಟ್ರಕ್ಷನ್ ಅವರು ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದು, ಕಳೆದ ವರ್ಷವೇ ಇದರ ಗುತ್ತಿಗೆ ಅವಧಿ ಮುಗಿದಿದೆ. ಗುತ್ತಿಗೆದಾರ ಸಂಸ್ಥೆಗೆ ಹಲವು ನೋಟಿಸ್ ಗಳನ್ನು ನೀಡಲಾಗಿದೆ. ಆದರೂ ಸರಿಯಾಗಿ ಸ್ಪಂದಿಸದ ಕಾರಣ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ. ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದು, ಅವಧಿ ವಿಸ್ತರಿಸಲು ಮನವಿ ಮಾಡಿದ್ದಾರೆ. ಅದರಂತೆ ಹೆಚ್ಚು ವರಿ ಅವಧಿ ನೀಡಲಾಗಿದ್ದು, ಮೇ ವರೆಗೆ ಅವಕಾಶವಿದೆ. ಇಲ್ಲಿ ಚರಂಡಿಯನ್ನು ಅಪೂರ್ಣವಾಗಿ ನಿರ್ಮಿಸಿದ್ದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಗುತ್ತಿಗೆದಾರರಿಗೆ ಇದನ್ನು ಶೀಘ್ರ ಮುಗಿಸಲು ಸೂಚಿಸಲಾಗಿದೆ.
– ಗೋಕುಲದಾಸ್
ಎಕ್ಸಿಕ್ಯೂಟಿವ್ ಎಂಜಿನಿಯರ್, ಪಿಡಬ್ಲ್ಯೂಡಿ ಮನವಿಗೆ ಸ್ಪಂದಿಸಿಲ್ಲ
ಇಲ್ಲಿನ ಸಮಸ್ಯೆ ಬಗ್ಗೆ ಗುತ್ತಿಗೆದಾರರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೂ ಯಾವುದೇ ಸ್ಪಂದನೆ ದೊರಕಿಲ್ಲ. ಎಂದೋ ಮುಗಿಯಬೇಕಾಗಿದ್ದ ಕಾಮಗಾರಿ ಇನ್ನೂ ಮುಗಿಯದ್ದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ಇದನ್ನು ಕೇಳುವವರೇ ಇಲ್ಲದಂತಾಗಿದೆ.
– ಇಕ್ಬಾಲ್,
ಸ್ಥಳೀಯ ನಿವಾಸಿ