ಬೆಂಗಳೂರು: ಚಿಕನ್ ರೋಲ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಜಗಳ ತೆಗೆದು ಹೋಟೆಲ್ ಹುಡುಗರು ವಾಸವಾಗಿದ್ದ ಕೊಠಡಿಗೆ ಬೆಂಕಿ ಇಟ್ಟ ಘಟನೆ ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಉತ್ತರ ಕರ್ನಾಟಕ ಮೂಲದ ದೇವರಾಜ್ ಹಾಗೂ ದೇವೇಗೌಡ ಎಂಬುವರನ್ನು ಬಂಧಿಸಲಾಗಿದೆ.
ಹನುಮಂತರ ನಗರದ ರಾಮಮಂದಿರ ಮುಂಭಾಗ ಬಿಹಾರ ಮೂಲದ ನಿತೀಶ್ ಎಂಬುವರು ಕುಮಾರ್ ಹೋಟೆಲ್ ನಡೆಸುತ್ತಿದ್ದಾರೆ. ಆರೋಪಿಗಳು ನಿತ್ಯ ಇದೇ ಹೋಟೆಲ್ಗೆ ಊಟಕ್ಕೆ ಹೋಗುತ್ತಿದ್ದರು. ಸೋಮವಾರ ರಾತ್ರಿ 11.30ರ ಸುಮಾರಿಗೆ ದೇವರಾಜ್, ದೇವೇಗೌಡ ಸೇರಿ ಮೂವರು ಊಟಕ್ಕೆಂದು ಹೋಗಿ, ಚಿಕನ್ ರೋಲ್ ಕೊಡುವಂತೆ ಕೇಳಿದ್ದಾರೆ. ಆಗ ಹೋಟೆಲ್ ಸಿಬ್ಬಂದಿ ತಡರಾತ್ರಿ ಆಗಿರುವುದರಿಂದ ಚಿಕನ್ ರೋಲ್ ಇಲ್ಲ. ಊಟ ಕೂಡ ಖಾಲಿಯಾಗಿದೆ ಎಂದಿದ್ದಾರೆ. ಅದಕ್ಕೆ ಕೋಪಗೊಂಡ ಆರೋಪಿಗಳು ಹೋಟೆಲ್ ಸಿಬ್ಬಂದಿ ಜತೆ ವಾಗ್ವಾದ ಆರಂಭಿಸಿದ್ದಾರೆ. ಅದು ವಿಕೋಪಕ್ಕೆ ಹೋದಾಗ ಮದ್ಯದ ಅಮಲಿನಲ್ಲಿದ್ದ ಆರೋಪಿಗಳಿಗೆ ಹೋಟೆಲ್ ಸಿಬ್ಬಂದಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಅದರಿಂದ ಆಕ್ರೋಶಗೊಂಡ ಆರೋಪಿಗಳು, ಸಮೀಪದ ಪೆಟ್ರೋಲ್ ಬಂಕ್ನಿಂದ ಪೆಟ್ರೋಲ್ ತಂದು ಹೋಟೆಲ್ ಪಕ್ಕದಲ್ಲೇ ಸಿಬ್ಬಂದಿ ವಾಸವಾಗಿದ್ದ ಕೊಠಡಿಯ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅದರಿಂದ ಕೊಠಡಿಯ ಕಿಟಕಿ ಮತ್ತು ಬಾಗಿಲು ಬೆಂಕಿಗಾಹುತಿ ಆಗಿದ್ದು, ಬೆಂಕಿಯ ಕಾವು ಹೆಚ್ಚಾಗುತ್ತಿದ್ದಂತೆ ಸಿಬ್ಬಂದಿ ಹೊರಗಡೆ ಬಂದಿದ್ದಾರೆ. ಸದ್ಯ ಎಲ್ಲಾ ಸಿಬ್ಬಂದಿ ಪಾರಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮಂಗಳವಾರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೂಬ್ಬ ಅಪ್ರಾಪ್ತನಾಗಿದ್ದರಿಂದ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ಘಟನೆ ಸಂಬಂಧ ಆರೋಪಿಗಳು ಕೂಡ ಹೋಟೆಲ್ ಸಿಬ್ಬಂದಿ ವಿರುದ್ಧ ಹಲ್ಲೆ ಸಂಬಂಧ ಪ್ರತಿದೂರು ದಾಖಲಿಸಿದ್ದಾರೆ.