Advertisement

5 ರೊಳಗೆ ಯೋಜನೆ ಅನುಷ್ಠಾನಗೊಳಿಸಿ

10:38 AM Mar 03, 2019 | Team Udayavani |

ಯಾದಗಿರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಯಾವಾಗ ಬೇಕಾದರೂ ಜಾರಿಯಾಗಬಹುದು. ಹಾಗಾಗಿ ಎಸ್‌ ಸಿಎಸ್‌ಪಿ-ಟಿಎಸ್‌ಪಿ ಅಡಿ ಬಿಡುಗಡೆಯಾದ ಅನುದಾನವನ್ನು ಪ್ರತಿಶತ ಖರ್ಚು ಮಾಡಬೇಕು. ಅನುದಾನ ಖರ್ಚಾಗದಿದ್ದರೆ ಸಂಬಂಧಿಸಿದ ಇಲಾಖೆ ಮುಖ್ಯಸ್ಥರನ್ನು ಹೊಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಎಚ್ಚರಿಕೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಎಸ್‌ಸಿಎಸ್‌ಪಿ- ಎಸ್‌ಪಿ) ಅನುಷ್ಠಾನ ಕುರಿತ ನಾಲ್ಕನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.  ಆರ್ಥಿಕ ವರ್ಷದ ಕೊನೆ ತಿಂಗಳಲ್ಲಿದ್ದೇವೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಈ ತಿಂಗಳ ಕೊನೆಯವರೆಗೂ ಅನುಷ್ಠಾನಗೊಳಿಸಬಹುದು. ರಾಜ್ಯ ಸರ್ಕಾರದ ಯೋಜನೆಗಳನ್ನು ಪೂರ್ಣಗೊಳಿಸಲು ಮಾರ್ಚ್‌ 16ರವರೆಗೆ ಅವಕಾಶವಿದೆ. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಫಲಾನುಭವಿಗಳಿಗೆ ಒಂದು ರೂ. ಕೂಡ ವರ್ಗಾವಣೆ ಮಾಡುವ ಹಾಗಿಲ್ಲ. ಅಲ್ಲದೆ, ಹೊಸ ಕಾಮಗಾರಿ ಆರಂಭಿಸುವಂತಿಲ್ಲ. ಆದ್ದರಿಂದ ನಿರ್ಲಕ್ಷ್ಯಾ ವಹಿಸದೆ ಮಾರ್ಚ್‌ 5ರೊಳಗೆ ತಮ್ಮ ಇಲಾಖೆ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು ಮತ್ತು ಅನುಷ್ಠಾನಗೊಳಿಸಬೇಕು. ಈ ಕುರಿತಂತೆ ಪ್ರತಿದಿನದ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಂ.ಎಸ್‌.ಅಲ್ಲಾಬಕಷ ಮಾತನಾಡಿ, ಲೋಕೋಪಯೋಗಿ ಇಲಾಖೆ, ಪಂಚಾಯತ ರಾಜ್‌ ಇಂಜಿನಿಯರಿಂಗ್‌ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ವತಿಯಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸ ಇಲ್ಲದ ಪ್ರದೇಶಗಳಲ್ಲಿ ಕೆಲವೊಂದು ಕಾಮಗಾರಿ ನಿರ್ವಹಿಸುತ್ತಿರುವುದಾಗಿ ಸಂಘ-ಸಂಸ್ಥೆ ಮತ್ತು ಸಾರ್ವಜನಿಕ ದೂರುಗಳು ಬರುತ್ತಿವೆ ಎಂದು ಹೇಳಿದರು. ಆಗ ಜಿಲ್ಲಾಧಿಕಾರಿಗಳು ಮಾತನಾಡಿ, ನಿಗದಿತ ಸಮುದಾಯಗಳ ಪ್ರದೇಶಗಳಲ್ಲಿ ಮಾತ್ರ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ಖರ್ಚು ಮಾಡಬೇಕು. ಕಾಮಗಾರಿ ಪ್ರಾರಂಭಿಸುವ ಮುನ್ನ ಆ ಸ್ಥಳದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸವಿರುವ ಬಗ್ಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ದೃಢೀಕರಣ ಪಡೆಯಬೇಕು ಎಂದು ತಾಕೀತು ಮಾಡಿದರು. 

ಲೋಕೋಪಯೋಗಿ ಇಲಾಖೆ ಪ್ರಗತಿ ಕೇವಲ ಶೇ.23ರಷ್ಟಾಗಿದೆ. ಬಿಡುಗಡೆಯಾದ ಅನುದಾನಕ್ಕೂ ಪ್ರತಿಶತ ಪ್ರಗತಿ ಇಲ್ಲ ಎಂದು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಟೆಂಡರ್‌ ಪ್ರಕ್ರಿಯೆ ಮುಗಿದ ತಕ್ಷಣ ಬಿಡುಗಡೆಯಾದ ಅನುದಾನ ಒಂದು ವಾರದಲ್ಲಿ ಖರ್ಚಾಗಲಿದೆ ಎಂದು ಇಲಾಖೆ ಅಧಿಕಾರಿ ಸಮಜಾಯಿಷಿ ನೀಡಿದರು.

ಡಾ|ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಯೋಜನೆ ಫಲಾನುಭವಿಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಿ 2 ತಿಂಗಳು ಕಳೆದಿವೆ. ಸಹಾಯಧನ ಬಿಡುಗಡೆಗೆ ಈ ಪಟ್ಟಿಯನ್ನು ಇದುವರೆಗೂ ಬ್ಯಾಂಕ್‌ಗಳಿಗೆ ಕಳುಹಿಸಿಲ್ಲ ಎಂದು ಜಿಲ್ಲಾಧಿಕಾರಿಗಳು ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯಡಿ ವಿವಿಧ ಇಲಾಖೆಗಳ ಕಾರ್ಯಕ್ರಮ ಅನುಷ್ಠಾನಗೊಳಿಸಲು ನಿಯಮಾನುಸಾರ ಗ್ರಾಮಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆದರೆ, ಇಲಾಖೆಗೊಂದರಂತೆ ಗ್ರಾಮಸಭೆ ನಡೆಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಎಲ್ಲ ಇಲಾಖೆಗಳಿಗೆ ಸಂಬಂಧಪಟ್ಟಂತೆ ಒಂದು ದಿನ ಗ್ರಾಮಸಭೆ ನಡೆಸುವಂತಾಗಬೇಕು ಎಂದು ಅವರು ಸೂಚಿಸಿದರು.

ಜಿಪಂ, ತಾಪಂ, ಗ್ರಾಪಂಗಳ ಎಸ್‌ಸಿಎಸ್‌ ಪಿ-ಟಿಎಸ್‌ಪಿ ಯೋಜನೆಯಡಿ ಖರ್ಚು ಮಾಡಿದ ವರದಿ ನೀಡುತ್ತಿಲ್ಲ. ಈ ಬಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಜಿಪಂ ಉಪಕಾರ್ಯದರ್ಶಿ ಅವರಿಂದ ಮುಂದಿನ ಸಭೆಯಲ್ಲಿ ವರದಿ ಮಂಡಿಸುವಂತೆ ನಿರ್ದೇಶಿಸಿದರು.
 
ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌. ಎಸ್‌. ರವಿಶಂಕರ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾಬು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪ್ರಭಾರ ಉಪನಿರ್ದೇಶಕ ಡಾ| ಶರಣಭೂಪಾಲರೆಡ್ಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ ರಾಜಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್‌ ಠಾಕೂರ, ಯಾದಗಿರಿ ವೃತ್ತ ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ. ತಳವಾರ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಆರ್‌.ಗೋಪಾಲ ಇದ್ದರು. 

ಖಜಾನೆ ಅಧಿಕಾರಿಗೆ ನೋಟಿಸ್‌ಗೆ ಸೂಚನೆ
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಾಧನೆ ಶೂನ್ಯವಾಗಿದೆ. ಸುಧಾರಿತ ಉಪಕರಣಗಳ ವಿತರಣೆಗೆ ನಿಗದಿಪಡಿಸಿದ್ದ 12 ಲಕ್ಷ ರೂ. ಅನುದಾನವನ್ನು ಏಕೆ ಖರ್ಚು ಮಾಡಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು. ಟೆಂಡರ್‌ ಕರೆದು ಬಿಲ್‌ಗ‌ಳನ್ನು ಜಿಲ್ಲಾ ಖಜಾನೆ ಅಧಿಕಾರಿಗಳಿಗೆ ಕಳೆದ ಫೆಬ್ರುವರಿ 5ರಂದು ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಬಿಲ್‌ ಪಾಸ್‌ ಮಾಡಿಲ್ಲ ಎಂದು ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದರು. 25 ದಿನ ಕಳೆದರೂ ಬಿಲ್‌ ಪಾಸ್‌ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌, ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಮಗಾರಿ ಮತ್ತು ಯೋಜನೆಗಳಿಗೆ ಯಾವುದೇ ಹಂತದಲ್ಲಿ ವಿಳಂಬ ಆಗಬಾರದು. ಈ ಕುರಿತಂತೆ ಜಿಲ್ಲಾ ಖಜಾನೆ ಅಧಿಕಾರಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next