Advertisement

ಕರಡು ಮತದಾರರ ಪಟ್ಟಿಯಲ್ಲಿ ಅಕ್ರಮ: ಆರೋಪ

05:21 PM Dec 15, 2018 | |

ಶಿಕಾರಿಪುರ: ಸ್ಥಳೀಯ ಸಂಸ್ಥೆ ಚುನಾವಣೆಯ ಹಿನ್ನೆಲೆಯಲ್ಲಿ ಪುರಸಭೆ ತುರಾತುರಿಯಲ್ಲಿ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ತೀವ್ರ ಅಕ್ರಮವಾಗಿದ್ದು, ಮನೆ- ಮನೆಗೆ ಭೇಟಿ ನೀಡಿ ಪರಿಶೀಲಿಸದೆ ಕೇವಲ ರಾಜಕೀಯ ಪ್ರಭಾವಿಗಳ
ಹಿತಾಸಕ್ತಿಯನ್ನು ಪರಿಗಣಿಸಿ ಮತದಾರರ ಸೇರ್ಪಡೆ, ವರ್ಗಾವಣೆಗೊಳಿಸಲಾಗಿದೆ ಎಂದು ಆರೋಪಿಸಿ ಶುಕ್ರವಾರ ಬಿಜೆಪಿ ವತಿಯಿಂದ ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವರ್ತನೆಯ ಬಗ್ಗೆ ಪ್ರತಿಭಟಿಸಲಾಯಿತು.

Advertisement

ಮತದಾರರ ಪಟ್ಟಿಗೆ ಸೇರ್ಪಡೆ, ದೀರ್ಘ‌ ಕಾಲ ವಾಸಸ್ಥಳದಲ್ಲಿರದ ಹಾಗೂ ಮೃತಪಟ್ಟವರನ್ನು ಕೈಬಿಡುವ ಸಮಗ್ರ ಮತದಾರರ ಪರಿಷ್ಕರಣೆ ಕಾರ್ಯವನ್ನು ಈಗಾಗಲೇ ಚುನಾವಣಾ ಆಯೋಗ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ
ಹಮ್ಮಿಕೊಂಡಿದೆ. ಮತದಾರರ ಪಟ್ಟಿಗೆ ಸೇರ್ಪಡೆಗೆ ಅಂತಿಮ ಗಡವು ಇದೇ 20 ರಂದು ನಿಗದಿಪಡಿಸಲಾಗಿದ್ದರೂ ಮನೆಮನೆಗೆ ಬೇಟಿ, ಸ್ಥಳೀಯ ಮುಖಂಡರಿಗೆ ಮಾಹಿತಿ ನೀಡದೆ ಪುರಸಭೆ ವತಿಯಿಂದ ಪ್ರಕಟಿಸಲಾದ ಕರಡು
ಮತದಾರರ ಪಟ್ಟಿಯಲ್ಲಿ ತೀವ್ರ ಗೋಲ್‌ಮಾಲ್‌ ನಡೆದಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಗುರುಮೂರ್ತಿ ದೂರಿದರು.
 
ಮತದಾರರ ಪಟ್ಟಿಯಲ್ಲಿನ ಅಧಿಕಾರಿಗಳ ತೀವ್ರ ದೋಷ, ಅಕ್ರಮ, ಲೋಪದ ಬಗ್ಗೆ ಸೂಕ್ತ ದಾಖಲೆಯಿದ್ದು ಈ ಕೂಡಲೇ ಕರಡು ಪ್ರತಿಯನ್ನು ರದ್ದುಗೊಳಿಸಿ ಹೊಸ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು. ಈ ಬಗ್ಗೆ ಚುನಾವಣಾ ಆಯೋಗ ಜ.19 ರೊಳಗಾಗಿ ಪ್ರಕಟಿಸಲು ಸೂಕ್ತ ನಿರ್ದೇಶನವನ್ನು ನೀಡಿದೆ ಎಂದ ಅವರು, ಇದೀಗ ಪ್ರಕಟಿಸಿದ ನಕಲಿ ಮತದಾರರ ಪಟ್ಟಿಯನ್ನು ಬೆಂಕಿಯಲ್ಲಿ ದಹಿಸುವಂತೆ ಅಧಿಕಾರಿಗಳ ಏಕಪಕ್ಷೀಯ ವರ್ತನೆ ಬಗ್ಗೆ ಹರಿಹಾಯ್ದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಬಿ. ಚನ್ನವೀರಪ್ಪ, ಗುರುರಾಜ ಜಗತಾಪ್‌ ಮಾತನಾಡಿ,ನಿತ್ಯ ಸಂಜೆ 7 ರ ನಂತರದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು ಅಧಿಕಾರಿಗಳು ಇಂತಹ ಅಕ್ರಮದಲ್ಲಿ ಭಾಗಿಯಾಗುವ ಬದಲು ನೇರವಾಗಿ ಕರ್ತವ್ಯಕ್ಕೆ ರಾಜೀನಾಮೆ ಸಲ್ಲಿಸಿ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಸವಾಲು ಹಾಕಿದರು.

ಉಪತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಪುರಸಭಾ ಸದಸ್ಯ ವಸಂತಗೌಡ,ಪರಶುರಾಮ ಚಾರ್ಗಲ್ಲಿ, ಪಾಲಾಕ್ಷಪ್ಪ, ಸೈಯದ್‌ಪೀರ್‌, ಮುಖಂಡ ಹಾಲಪ್ಪ, ಡಿ.ಎಸ್‌. ಈಶ್ವರಪ್ಪ, ಜಗದೀಶ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next