Advertisement

ಐಐಎಸ್ಸಿ ಜಾಲತಾಣವೀಗ ಕನ್ನಡೀಕರಣ

12:22 PM Mar 06, 2018 | Team Udayavani |

ಬೆಂಗಳೂರು: ಮಲ್ಲೇಶ್ವರದಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತನ್ನ ವೆಬ್‌ಸೈಟ್‌ನಲ್ಲಿ ತ್ರಿಭಾಷಾ ಸೂತ್ರ ಅವಳಡಿಸಿಕೊಂಡಿದೆ. ಇಲ್ಲಿ ಇಂಗ್ಲಿಷ್‌ ಮತ್ತು ಹಿಂದಿಗೆ ನೀಡಿದಷ್ಟೇ ಮಹತ್ವವನ್ನು ಕನ್ನಡಕ್ಕೂ ನೀಡಿರುವುದು ವಿಶೇಷ.

Advertisement

ಐಐಎಸ್‌ಸಿ ಇತಿಹಾಸ, ನಿರ್ದೇಶಕರ ಸಂದೇಶ, ಚಟುವಟಿಕೆ, ವಿಭಾಗಗಳ ಮಾಹಿತಿ, ಕ್ಯಾಂಪಸ್‌ನನ ಸೌಲಭ್ಯ ಸೇರಿ ಎಲ್ಲ ಅಂಶಗಳನ್ನು ಕನ್ನಡದಲ್ಲೇ ನೀಡಲಾಗಿದೆ. ಕನ್ನಡದ ಮೂಲ ಆಶಯಕ್ಕೆ ಧಕ್ಕೆ ಇಲ್ಲದಂತೆ, ವಿಜ್ಞಾನದ ಪರಿಭಾಷೆಗೂ ಕುಂದುಂಟಾಗದಂತೆ ತರ್ಜುಮೆ ಮಾಡಲಾಗಿದೆ. ವಿಜ್ಞಾನದ ಕೆಲವೊಂದು ಪದಗಳನ್ನು ಇಂಗ್ಲಿಷ್‌ನಲ್ಲಿ ಇರುವಂತೆಯೇ ಕನ್ನಡದಲ್ಲಿ ಬರೆಯಲಾಗಿದೆ.

ಐಐಎಸ್‌ಸಿ ಪ್ರವೇಶ ಹೇಗೆ, ಲಭ್ಯವಿರುವ ಕೋರ್ಸ್‌ಗಳ ಮಾಹಿತಿ, ವಿದ್ಯಾರ್ಥಿ ದೃಷ್ಟಿಕೋನದಲ್ಲಿ ಐಐಎಸ್‌ಸಿ ಮತ್ತು ಜೀವ ಎಂಬ ವಿಷಯದಲ್ಲಿ ವಿದ್ಯಾರ್ಥಿಗಳು ಹಂಚಿಕೊಂಡ ಅಭಿಪ್ರಾಯಗಳೂ ಕನ್ನಡದಲ್ಲಿವೆ. ವಿವಿಧ ವಿಭಾಗಗಳ ಡೀನ್‌ಗಳ ಸಂದೇಶ, ಶುಲ್ಕದ ವಿವರ, ನೋಂದಣಿ, ವಿದ್ಯಾರ್ಥಿ ವೇತನದ ಮಾಹಿತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಸೌಲಭ್ಯಗಳ ವಿವರ ಕೂಡ ಕನ್ನಡದಲ್ಲೇ ಇದೆ.

ಐಐಎಸ್‌ಸಿ ಆವರಣದಲ್ಲಿನ ಗ್ರಂಥಾಲಯ, ಸಾಫ್ಟ್ವೇರ್‌, ನೇಮಕಾತಿ ಸೇವೆ, ಗ್ರಾಫಿಕ್ಸ್‌ ಕಾರ್ಯಕ್ಷೇತ್ರ, ಕಂಪ್ಯೂಟರ್‌ ಸೌಲಭ್ಯ, ಆರೋಗ್ಯ ಕೇಂದ್ರ, ಮನೋರಂಜನೆ ಹಾಗೂ ವಸತಿ ನಿಲಯಗಳ ಮಾಹಿತಿ ಸೇರಿ ಐಐಎಸ್‌ಸಿ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಇರುವ ಎಲ್ಲ ಮಾಹಿತಿಯೂ ಕನ್ನಡದಲ್ಲಿದೆ.

ಐಐಎಂನಲ್ಲೂ ಅನುಷ್ಠಾನ ಸಾಧ್ಯತೆ: ಐಐಎಸ್‌ಸಿ ವೆಬ್‌ಸೈಟ್‌ನಲ್ಲಿ ಈಗಾಗಲೇ ಕನ್ನಡ ಅನುಷ್ಠಾನ ಮಾಡಿರುವುದರಿಂದ ಬೆಂಗಳೂರಿನಲ್ಲಿ ಇರುವ ಕೇಂದ್ರ ಸರ್ಕಾರದ ಇನ್ನೊಂದು ಸಂಸ್ಥೆ ಐಐಎಂ ಕೂಡ ತನ್ನ ವೆಬ್‌ಸೈಟ್‌ನಲ್ಲಿ ಕನ್ನಡ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಈಗಾಗಲೇ ಐಐಎಂಗೆ ಭೇಟಿ ನೀಡಿ, ಕನ್ನಡ ಅನುಷ್ಠಾನದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹಂತಹಂತವಾಗಿ ಕನ್ನಡ ಅನುಷ್ಠಾನಕ್ಕೆ ಐಐಎಂ ಆಡಳಿತ ಮಂಡಳಿ ಒಪ್ಪಿಕೊಂಡಿದೆ ಎನ್ನಲಾಗಿದೆ.

Advertisement

ಪ್ರಯತ್ನ ನಿಲ್ಲದು: “ರಾಜ್ಯದಲ್ಲಿರುವ ಕೇಂದ್ರದ ಉದ್ಯಮಗಳಲ್ಲಿ ತ್ರಿಭಾಷಾ ಸೂತ್ರದಡಿ ಕನ್ನಡ ಅನುಷ್ಠಾನ ಮಾಡಬೇಕು ಎಂದು ಈಗಾಗಲೇ ಎಲ್ಲಾ ಸಂಸ್ಥೆಗಳಿಗೂ ಪತ್ರ ಬರೆದಿದ್ದೇವೆ. ಆಯಾ ಸಂಸ್ಥೆಗಳ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿದ್ದೇವೆ. ಐಐಎಸ್‌ಸಿಯಲ್ಲಿ ಹಂತ ಹಂತವಾಗಿ ಕನ್ನಡ ಅನುಷ್ಠಾನ ಮಾಡುವುದಾಗಿ ಒಪ್ಪಿಕೊಂಡಿದ್ದರು. ವೆಬ್‌ಸೈಟ್‌ನಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗಬೇಕು.

ಉಳಿದ ಭಾಷೆ ಆಯ್ಕೆಯಾಗಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ತಾಂತ್ರಿಕ ವಿಷಯಗಳಲ್ಲಿ ಮೂಲ ಅರ್ಥಕ್ಕೆ ಚ್ಯುತಿ ಬಾರದಂತೆ ತರ್ಜುಮೆ ಮಾಡಲು ಹೇಳಿದ್ದೇವೆ. ಕನ್ನಡ ಅನುಷ್ಠಾನದ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ,’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.

ಇನ್ನೊಂದು ಸುತ್ತಿನ ಭೇಟಿ: “ರಾಜ್ಯದ ಕೈಗಾರಿಕೆ ಸೇರಿದಂತೆ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಈಗಾಗಲೇ ಒಂದು ಸುತ್ತಿನ ಭೇಟಿ ಮಾಡಿ, ಅಲ್ಲಿನ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ಶೀಘ್ರವೇ ಎರಡನೇ ಸುತ್ತಿನ ಪರಿಶೀಲನಾ ಕಾರ್ಯ ನಡೆಸಲಿದ್ದೇವೆ. ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಣೆ ಪಡೆಯಲಿದ್ದೇವೆ. ರಾಜ್ಯ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ದ್ವಿಭಾಷಾ ಸೂತ್ರ ಹಾಗೂ ಕೇಂದ್ರದ ಅಧೀನದ ಸಂಸ್ಥೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಸಲು ಸೂಚನೆ ನೀಡುತ್ತಿದ್ದೇವೆ,’ ಎಂದು ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಹೇಳಿದರು.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next