Advertisement

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

10:24 AM Nov 25, 2024 | Team Udayavani |

ಬೆಂಗಳೂರು: ನಿವೇಶನ ಮಾರುವುದಾಗಿ ನಂಬಿಸಿ ಉದ್ಯಮಿಯಿಂದ 56 ಲಕ್ಷ ರೂ. ಪಡೆದು ವಂಚಿಸಿದ ದಂಪತಿ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಸಾದಹಳ್ಳಿ ವಿಲೇಜ್‌ ಹಾಲಿವುಡ್‌ ಟೌನ್‌ ನಿವಾಸಿ ಜಾನ್‌ ರಾಬರ್ಟ್‌ ಕೊಲಾಕೋ ವಂಚನೆಗೊಳ ಗಾದವರು. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ಎ.ಶಿವಲಿಂಗಯ್ಯ ಮತ್ತು ಆತನ ಪತ್ನಿ ಭವಾನಿ ರೆಡ್ಡಿ ಎಂಬುವರ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಏನಿದು ವಂಚನೆ ಪ್ರಕರಣ?: ಆರೋಪಿಗಳಾದ ಶಿವಲಿಂಗಯ್ಯ ಮತ್ತು ಅವರ ಪತ್ನಿ ಭವಾನಿ ರೆಡ್ಡಿ ದೇವನಹನಹಳ್ಳಿ ತಾಲೂಕು ಸಾದಹಳ್ಳಿ ವಿಲೇಜ್‌ ಸರ್ವೆ ನಂರ್ಬ 227 ಮತ್ತು 228ರಲ್ಲಿನ ಸ್ವಿಸ್‌ ಟೌನ್‌ನಲ್ಲಿ 6 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನ ಹೊಂದಿದ್ದು, ಹಣದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ 2016ರಲ್ಲಿ ಶಿವಲಿಂಗಯ್ಯ ಅವರು ಉದ್ಯಮಿ ಜಾನ್‌ ರಾಬರ್ಟ್‌ರನ್ನು ಸಂಪರ್ಕಿಸಿ, ನಿವೇಶನ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ. ಬಳಿಕ ಪ್ರತಿ ಚದರ ಅಡಿಗೆ 3 ಸಾವಿರ ರೂ.ನಂತೆ ಒಟ್ಟು 1.80 ಕೋಟಿ ರೂ.ಗೆ ನಿವೇಶನ ಮಾರಾಟಕ್ಕೆ ಮಾತುಕತೆ ನಡೆದಿತ್ತು. ಜಾನ್‌ ರಾಬರ್ಟ್‌ ತಮ್ಮ ಸ್ನೇಹಿತ ಆರ್‌.ಎನ್‌.ವಾಸುದೇವ್‌ ಜತೆಗೆ ಈ ನಿವೇಶನ ಖರೀದಿಸಲು ತೀರ್ಮಾನಿಸಿದ್ದರು. ಬಳಿಕ ಮಾತುಕತೆ ಯಂತೆ ನಿವೇಶನದ ಮಾಲಿಕ ಶಿವಲಿಂಗಯ್ಯಗೆ ಮುಂಗಡವಾಗಿ 30 ಲಕ್ಷ ರೂ. ನೀಡಿದ್ದಾರೆ. ಈ ನಡುವೆ ಶಿವಲಿಂಗಯ್ಯ ತಮ್ಮ ಮಗಳ ಮದುವೆಗಾಗಿ ಮತ್ತೆ ಮುಂಗಡವಾಗಿ 10 ಲಕ್ಷ ರೂ. ಪಡೆದುಕೊಂಡಿದ್ದಾರೆ. ನಂತರ ಶಿವಲಿಂಗಯ್ಯ ದಂಪತಿ 2016ರಿಂದ 2019ರ ವರೆಗೆ ವಿವಿಧ ಕಾರಣ ನೀಡಿ ನಿವೇಶನ ನೋಂದಣಿ ಮುಂದೂಡಿದ್ದಾರೆ. ಬಳಿಕ ಶಿವಲಿಂಗಯ್ಯ ಹಿಂದಿನ ದರಕ್ಕೆ ನಿವೇಶನ ಮಾರಾಟ ಸಾಧ್ಯವಿಲ್ಲ. ಈಗ ಪ್ರತಿ ಚದರ ಅಡಿಗೆ 3,625 ರೂ.ನಂತೆ ಒಟ್ಟು 2.17 ಕೋಟಿ ರೂ. ನೀಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ಜಾನ್‌ ರಾಬರ್ಟ್‌ ಒಪ್ಪಿದ್ದಾರೆ. ಬಳಿಕ ಶಿವಲಿಂಗಯ್ಯ ಮುಂಗಡವಾಗಿ ಮತ್ತೆ 16 ಲಕ್ಷ ರೂ. ಪಡೆದುಕೊಂಡಿದ್ದಾರೆ. 2019ರ ಜು.24ರಂದು ನಿವೇಶನ ನೋಂದಣಿ ಮಾಡಿಕೊಡುವುದಾಗಿ ಹೇಳಿದ್ದ ಶಿವಲಿಂಗಯ್ಯ ತಪ್ಪಿಸಿಕೊಂಡಿದ್ದಾರೆ.

ಮನೆ ಖಾಲಿ ಮಾಡಿದ ದಂಪತಿ: ಬಳಿಕ ಕೋವಿಡ್‌ ಹಿನ್ನೆಲೆಯಲ್ಲಿ 2020ರಿಂದ 2022ರ ವರೆಗೆ ಜಾನ್‌ ರಾಬರ್ಟ್‌ ಶಿವಲಿಂಗಯ್ಯ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. 2022ರ ಜನವರಿಯಲ್ಲಿ ಶಿವಲಿಂಗಯ್ಯನ ಸದಾಶಿವನಗರ ನಿವಾಸಕ್ಕೆ ಹೋದಾಗ ಶಿವಲಿಂಗಯ್ಯ ದಂಪತಿ ಮನೆ ಖಾಲಿ ಮಾಡಿರುವ ವಿಚಾರ ಗೊತ್ತಾಗಿದೆ. ಮೊಬೈಲ್‌ ಸಂಪರ್ಕಕ್ಕೂ ಸಿಗದೆ ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ನಿವೇಶನ ಮಾರಾಟ ಮಾಡುವುದಾಗಿ 56 ಲಕ್ಷ ರೂ. ಪಡೆದು ವಂಚಿಸಿದ ಶಿವಲಿಂಗಯ್ಯ ದಂಪತಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಾನ್‌ ರಾಬರ್ಟ್‌ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next