ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರು ಬೀದಿಯಲ್ಲಿ ನಿಂತು ಹೋರಾಟಕ್ಕೆ ಅವಕಾಶ ನೀಡುವುದಿಲ್ಲ. 25 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೃಷಿ ನೀತಿ ಜಾರಿಗೆ ತಂದು ರೈತರ ಸಾಲಮನ್ನಾ ಜತೆಗೆ ಮತ್ತೆ ಅವರು ಸಾಲದ ಶೂಲಕ್ಕೆ ಸಿಲುಕದಂತೆ ನೋಡಿಕೊಳ್ಳುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಕಾರ್ಪೋರೇಷನ್ ಸರ್ಕಲ್ ಬಳಿ ಇರುವ ದೇವಾಂಗ ಸಂಘದ ಸಭಾಂಗಣದಲ್ಲಿ ಶುಕ್ರವಾರ ರೇಷ್ಮೆ ಬೆಳೆಗಾರರು, ರೇಷ್ಮೆ ಮೊಟ್ಟೆ ಉತ್ಪಾದಕರು, ನೂಲು ಬಿಚ್ಚಾಣಿಕೆದಾರರು ಮತ್ತು ನೇಕಾರರ ಜತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರಸ್ತುತ ಇರುವ ಕೃಷಿ ನೀತಿ ಬದಲಾವಣೆ ಮಾಡಿ ಹೊಸ ಕೃಷಿ ನೀತಿ ಜಾರಿಗೊಳಿಸಲಾಗುವುದು.
ರೇಷ್ಮೆ ಬೆಳೆಗಾರರ ಅನುಕೂಲಕ್ಕಾಗಿ ರೇಷ್ಮೆ ಕಾರಿಡಾರ್ ನಿರ್ಮಾಣ, ಮ್ಯೂಸಿಯಂ ಸ್ಥಾಪನೆ, ರೇಷ್ಮೆಗೂ ಬೆಂಬಲ ಬೆಲೆ ನೀಡುವ ಯೋಜನೆಗಳನ್ನು ಜಾರಿಗೆ ತರುವುದರೊಂದಿಗೆ ಪ್ರತಿ ತಿಂಗಳು ವಿಧಾನಸೌಧದಲ್ಲಿ ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ರೇಷ್ಮೆ ಬೆಳೆಗಾರರು, ನೂಲು ಬಿಚ್ಚಣಿಕೆದಾರರು, ನೇಕಾರರು ಪಾಲ್ಗೊಂಡಿದ್ದರು.
ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಲ್ಲ: ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣಾವದರೆ ಕಾಂಗ್ರೆಸ್ ಅಥವಾ ಬಿಜೆಪಿ ಮನೆ ಬಾಗಿಲಿಗೆ ಹೋಗದೆ ಅಧಿಕಾರದಿಂದ ದೂರವೇ ಉಳಿಯುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಅಧಿಕಾರಕ್ಕಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗುವ ಸಂದರ್ಭ ಎದುರಾದರೆ ಅದರಿಂದ ದೂರವೇ ಉಳಿಯುತ್ತೇನೆ.
ಜೆಡಿಎಸ್ ಅಧಿಕಾರಕ್ಕೆ ಬರುವ ವಿಚಾರದಲ್ಲಿ ನಾನು ಭ್ರಮಾಲೋಕದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ನಾನು ಭ್ರಮಾಲೋಕದಲ್ಲಿಲ್ಲ, ಜನತಾ ಲೋಕದಲ್ಲಿದ್ದೇನೆ. ಇನ್ನು ಒಂದು ತಿಂಗಳು ಕಾದರೆ ಯಾರು ಭ್ರಮಾಲೋಕದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.
ಮಾಜಿ ಪ್ರಧಾನಿ ದೇವೇಗೌಡರು ಅಮರೇಂದ್ರ ಬಾಹುಬಲಿ. ಎಚ್.ಡಿ.ಕುಮಾರಸ್ವಾಮಿ ಮಹೇಂದ್ರ ಬಾಹುಬಲಿ, ಪಿಜಿಆರ್.ಸಿಂಧ್ಯಾ ಕಟ್ಟಪ್ಪ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಲ್ಲಾಳದೇವ. ಕರ್ನಾಟಕದಲ್ಲಿ ಸಮರದ ಫಲಿತಾಂಶ ಇನ್ನು ಒಂದು ತಿಂಗಳಲ್ಲಿ ಗೊತ್ತಾಗುತ್ತದೆ.
-ಟಿ.ಎ.ಶರವಣ, ವಿಧಾನಪರಿಷತ್ ಸದಸ್ಯ