ಹೊಸದಿಲ್ಲಿ: ಭಾರತದಲ್ಲಿ ವೃದ್ಧರ ಸಂಖ್ಯೆ ಗಣನೀಯ ವಾಗಿ ಹೆಚ್ಚಳವಾಗುತ್ತಿದ್ದು, 2024ರಲ್ಲಿ 15.67 ಕೋಟಿ ಇರುವ ವೃದ್ಧರ ಸಂಖ್ಯೆ 2050ರ ವೇಳೆಗೆ 34.6 ಕೋಟಿಗೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಹಿರಿಯ ನಾಗರಿಕರ ಸೇವಾ ಕೇಂದ್ರ ಸೌಲಭ್ಯಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ 25 ವರ್ಷಗಳ ಹಿಂದಿನ 1999ರ ಹಿರಿಯ ನಾಗರಿಕರ ರಾಷ್ಟ್ರೀಯ ನೀತಿಗೆ ಹೊಸ ರೂಪು ನೀಡುವುದರ ಜತೆಗೆ ಹಿರಿಯ ನಾಗರಿಕ ನಿರ್ವಹಣ ಕಾಯ್ದೆ 2007ಕ್ಕೆ ತಿದ್ದುಪಡಿ ತರಲು ಯೋಜಿಸಿದೆ.
ಅಸೋಸಿಯೇಶನ್ ಆಫ್ ಸೀನಿಯರ್ ಲಿವಿಂಗ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಅಮಿತ್ ಯಾದವ್ ಈ ಕುರಿತು ಮಾಹಿತಿ ನೀಡಿದ್ದಾರೆ. ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಳವಾಗುತ್ತಿರುವಂತೆಯೇ ಅವರ ಕ್ಷೇಮಾಭಿವೃದ್ಧಿ, ಭದ್ರತೆ ಬಗ್ಗೆಯೂ ಸರಕಾರ ಗಮನಹರಿಸುತ್ತಿದೆ.
ಈಗಾಗಲೇ 2019ರಲ್ಲಿ 1999ರ ನೀತಿ ಹಾಗೂ 2007ರ ಕಾಯ್ದೆ ಎರಡಕ್ಕೂ ತಿದ್ದುಪಡಿ ತರಲಾಗಿದೆ. ತಿದ್ದುಪಡಿಯು ವೃದ್ಧರ ಆಸ್ತಿ ಹಕ್ಕು, ವೃದ್ಧಾಶ್ರಮಗಳಿಗೆ ರಕ್ಷಣೆ ಸಂಬಂಧಿಸಿದ ಷರತ್ತುಗಳನ್ನು ಒಳಗೊಂಡಿವೆ. ಇದೀಗ ಹೊಸ ನೀತಿ ರೂಪಿಸಲು ಖಾಸಗಿ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದ್ದು, ವೃದ್ಧಾಶ್ರಮಗಳು, ಸೇವಾ ಕೇಂದ್ರಗಳ ಅಭಿವೃದ್ಧಿಯಲ್ಲಿ ಖಾಸಗಿ ಕ್ಷೇತ್ರವೂ ಮಹತ್ತರ ಪಾತ್ರ ವಹಿಸಲಿದೆ.
ಜತೆಗೆ 2007ರ ಕಾಯ್ದೆಯ ದೂರು, ಸವಾಲುಗಳನ್ನು ಪರಿಗಣಿಸಿ ಹೊಸ ತಿದ್ದುಪಡಿ ತರಲಾಗುವುದು. ಇದು ಮುಂದಿನ 25 ವರ್ಷಗಳ ವರೆಗೆ ಹಿರಿಯ ನಾಗರಿಕರ ನಿರ್ವಹಣೆಯಲ್ಲಿ ಮಾರ್ಗದರ್ಶನ ಒದಗಿಸಲಿದೆ ಎಂದು ಯಾದವ್ ಹೇಳಿದ್ದಾರೆ.
ಇದೇ ವೇಳೆ, ಹಿರಿಯ ನಾಗರಿಕರ ಸೌಲಭ್ಯ ಕೇಂದ್ರಗಳ ಸ್ಥಾಪನೆ ಕುರಿತಾದ ವರದಿ ಬಿಡುಗಡೆಗೊಳಿಸಲಾಗಿದೆ. ಆ ಪ್ರಕಾರ, 2014ರಿಂದ 2021ರ ವರೆಗೆ ವಾರ್ಷಿಕವಾಗಿ 1,100 ವೃದ್ಧರ ಆಶ್ರಯ ತಾಣಗಳ ನಿರ್ಮಾಣವಾಗುತ್ತಿತ್ತು. 2022ರ ಬಳಿಕ ಇದು 2,000ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ಅದರಲ್ಲೂ ದಕ್ಷಿಣ ಭಾರತದಲ್ಲೇ ಶೇ.60ರಷ್ಟು ಕೇಂದ್ರಗಳ ಸ್ಥಾಪನೆಯಾಗಿದೆ ಎನ್ನಲಾಗಿದೆ.
ಏನಿದು ಹೊಸ ನೀತಿ?
-1999ರಲ್ಲಿ ಜಾರಿಯಾಗಿದ್ದ ವೃದ್ಧರ ನೀತಿಗೆ ಈಗ ಹೊಸ ರೂಪ
-ವೃದ್ಧರ ಆಸ್ತಿ ಹಕ್ಕು, ವೃದ್ಧಾಶ್ರಮಗಳ ರಕ್ಷಣೆಗೆ ಸರಕಾರದಿಂದ ಈ ಕ್ರಮ