ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೈಗಾರಿಕೆ ವಲಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಎಫ್ಕೆಸಿಸಿ ವತಿಯಿಂದ ಆಯೋಜಿಸಿದ್ದ ಕೈಗಾರಿಕೋದ್ಯಮಿಗಳ ಜತೆ ಸಂವಾದದಲ್ಲಿ ಮಾತನಾಡಿ, ಕೈಗಾರಿಕ ವಲಯದ ಸಮಗ್ರ ಅಭಿವೃದ್ಧಿಗೆ ಜೆಡಿಎಸ್ ಬದ್ಧವಾಗಿದೆ ಎಂದರು.
ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದರೆ ಅದಕ್ಕೆ ಪರಿಹಾರ ಕಂಡು ಕೊಳ್ಳಲಾಗುವುದು. ಸರ್ಕಾರದ ಕಾರ್ಯಕ್ರಮ ಯಾವ ರೀತಿ ಇರಬೇಕು ಅನ್ನೋ ಬಗ್ಗೆ ಯೋಚಿಸಿದ್ದೇನೆ ಎಂದು ತಿಳಿಸಿದರು. ಮಧ್ಯಮ ವರ್ಗದ ಜನ ಹೆಚ್ಚು ಕೆಲಸ ಮಾಡುವುದೇ ಸಣ್ಣ ಕೈಗಾರಿಕೆಗಳಲ್ಲಿ, ಹೀಗಾಗಿ, ಉದ್ಯೋಗ ಸೃಷ್ಟಿಯಾಗುವುದು ಅಲ್ಲೇ.
ಮೂಲಭೂತ ಸೌಕರ್ಯಗಳನ್ನು ಸರ್ಕಾರ ನೀಡಿದರೆ ನಿಮಗೂ ಅನುಕೂಲವಾಗಲಿದೆ. ಈಗಿನ ಸರ್ಕಾರದಲ್ಲಿ ಅಧಿಕಾರಿಗಳ ಮೂಲಕ ಉದ್ಯಮಿಗಳಿಗೆ ಸಾಕಷ್ಟು ಕಿರುಕುಳ ನೀಡಿರುವುದು ನನ್ನ ಗಮನಕ್ಕೂ ಬಂದಿದೆ. ನಮ್ಮ ಸರ್ಕಾರ ಬಂದರೆ ಆ ರೀತಿಯ ತೊಂದರೆ ಇರುವುದಿಲ್ಲ ಎಂದು ಭರವಸೆ ನೀಡಿದರು.
ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ನಾನು ಹೇಳಿದ್ದೇನೆ. ಅದಕ್ಕೆ 50 ಸಾವಿರ ಕೋಟಿ ರೂ. ಬೇಕು. ಅಷ್ಟು ಮೊತ್ತ ಮನ್ನಾ ಮಾಡಿದರೆ ಹಣಕಾಸಿನ ಸ್ಥಿತಿ ಹೇಗೆ ಎಂಬ ಆತಂಕ ಉದ್ಯಮಿಗಳಿಗೂ ಇದೆ. ಆದರೆ, ಸಂಪನ್ಮೂಲ ಕ್ರೂಢೀಕರಣದ ಬಗ್ಗೆ ಲೆಕ್ಕಾಚಾರ ಹಾಕಿಕೊಂಡೇ ಭರವಸೆ ನೀಡಿದ್ದೇನೆ ಎಂದರು. ರಾಜ್ಯದಲ್ಲಿ ಮುಂದೆ ಸಮ್ಮಿಶ್ರ ಸರ್ಕಾರ ಬರುತ್ತದೆ ಅಂತಾ ಹಲವರ ಭಾವನೆ ಇದೆ. ಆದರೆ ನಾವೇ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುತ್ತೇವೆ ಅನ್ನೋ ವಿಶ್ವಾಸ ನನಗೆ ಇದೆ ಎಂದು ತಿಳಿಸಿದರು.
ರಾಜಕಾರಣದಲ್ಲಿ ನನಗೆ ದುಡ್ಡು ಮಾಡುವ ಉದ್ದೇಶ ಇಲ್ಲ, ನನ್ನ ಮಗನೂ ಸಹ ನಾನು ಆಸ್ತಿ ಮಾಡಿಲ್ವ ಎಂದು ಕೇಳಲ್ಲ, ಅವನ ಭವಿಷ್ಯ ಅವನು ನೋಡಿಕೊಳ್ಳುತ್ತಾನೆ. ನನಗೆ ಹೈಕಮಾಂಡ್ ಇಲ್ಲ, ಹೈಕಮಾಂಡ್‌ಗೆ ಹಣ ಕಳುಹಿಸುವ ವ್ಯವಸ್ಥೆಯು ನಮಗಿಲ್ಲ. ನನಗೆ ನೀವೇ ಹೈಕಮಾಂಡ್, ನೀವು ಹೇಳಿದಂತೆ ಕೆಲಸ ಮಾಡುತ್ತೇನೆ.
-ಎಚ್.ಡಿ.ಕುಮಾರಸ್ವಾಮಿ