ಬರ್ನ್:ಸ್ವಿಟ್ಜರ್ಲೆಂಡ್ ಹಲವಾರು ಹೊಸ ನೀತಿಗಳನ್ನು ಜಾರಿಗೆ ತರುವ ಮೂಲಕ 2025 ನೇ ವರ್ಷವನ್ನು ಸ್ವಾಗತಿಸಿದೆ. ಅವುಗಳಲ್ಲಿ ಪ್ರಮುಖವಾಗಿ ಸುದ್ದಿಯಾಗುತ್ತಿರುವುದು ಬುರ್ಖಾ ನಿಷೇಧ.
ಸ್ವಿಸ್ ಸರಕಾರವು ಬುಧವಾರ(ಜ1)ದೇಶದಾದ್ಯಂತ ಬುರ್ಖಾ ನಿಷೇಧವನ್ನು ಜಾರಿಗೆ ತರಲು ನಿರ್ಧರಿಸಿದೆ. ಸ್ವಿಸ್ ಸುದ್ದಿವಾಹಿನಿ ಸ್ವಿಸ್ಇನ್ಫೋ ಪ್ರಕಾರ, ವಿವಾದಾತ್ಮಕ ‘ಬುರ್ಖಾ-ವಿರೋಧಿ’ ಉಪಕ್ರಮದಿಂದ ಕಾನೂನು ಹೊರಬಂದಿದ್ದು, ಇದನ್ನು ದೇಶದಾದ್ಯಂತ 51.2 ಪ್ರತಿಶತದಷ್ಟು ಮತದಾರರು ಅನುಮೋದಿಸಿದ್ದಾರೆ.
ಮಾರ್ಚ್ 2021 ರಲ್ಲಿ ಮತದಾರರು ನಿಷೇಧವನ್ನು ಬೆಂಬಲಿಸಿದ್ದರು. ಬುರ್ಖಾ ನಿಷೇಧವು ಹೊಸ ಸಾಂವಿಧಾನಿಕ ಬದಲಾವಣೆಯ ಭಾಗವಾಗಿದೆ, ಇದು ಮುಖವನ್ನು ಮುಚ್ಚುವುದನ್ನು ತಡೆಯುವುದಕ್ಕೆ ಕರೆ ನೀಡುತ್ತದೆ. ಅಧಿಕಾರಶಾಹಿಯನ್ನು ಕಡಿಮೆ ಮಾಡಲು ಆಡಳಿತಾತ್ಮಕ ದಂಡ ವಿಧಾನದ ಮೂಲಕ ಕಾನೂನಿನ ಉಲ್ಲಂಘನೆಯನ್ನು ನಿಭಾಯಿಸಲಾಗುವುದು ಎಂದು ಫೆಡರಲ್ ಅಧಿಕಾರಿಗಳು ಹೇಳಿದ್ದಾರೆ.
ಆಡಳಿತಾತ್ಮಕ ದಂಡವು CHF 100 ಆಗಿದ್ದು, ಅದನ್ನು ಆಡಳಿತಾತ್ಮಕ ಕಚೇರಿಯ ವೆಬ್‌ಸೈಟ್‌ನಲ್ಲಿ ನೇರವಾಗಿ ಪಾವತಿಸಬಹುದು. ದಂಡವನ್ನು ಪಾವತಿಸಲು ನಿರಾಕರಿಸುವವರು ಗರಿಷ್ಠ ದಂಡ CHF1,000 ತೆರಬೇಕಾಗುತ್ತದೆ.
CHF1,000 ಅಂದರೆ 93,470 ರೂಪಾಯಿಯಾಗುತ್ತದೆ.
ಮುಖವನ್ನು ಮುಚ್ಚುವ ನಿಷೇಧವು ವಿಮಾನಗಳು ಅಥವಾ ರಾಜತಾಂತ್ರಿಕ ಮತ್ತು ದೂತಾವಾಸ ಆವರಣದಲ್ಲಿ ಅನ್ವಯಿಸುವುದಿಲ್ಲ. ಸ್ವಿಟ್ಜರ್ಲೆಂಡ್‌ನಾದ್ಯಂತ ಜನರು ಧಾರ್ಮಿಕ ಸ್ಥಳಗಳಲ್ಲಿ ಅಥವಾ ಯಾವುದೇ ರೀತಿಯ ಜಾತ್ಯತೀತ ಪ್ರದೇಶಗಳಲ್ಲಿ ತಮ್ಮ ಮುಖಗಳನ್ನು ಮುಚ್ಚಿಕೊಳ್ಳಬಹುದಾಗಿದೆ.