Advertisement

ನಾನು ಮೋದಿ ಸಿದ್ಧಾಂತದ ವಿರೋಧಿ: ಕನ್ಹಯ್ಯ ಕುಮಾರ್‌

11:50 AM Jan 20, 2017 | Team Udayavani |

ಬೆಂಗಳೂರು: ದೇಶದಲ್ಲಿ “ಬಿಜೆಪಿ, ಆರ್‌ಎಸ್‌ಎಸ್‌, ಮೋದಿ ಎಂದರೆ “ದೇಶ’ ಎಂಬ ಸಮೀಕರಣ ಶುರುವಾಗಿದೆ. ಈ ಮೂವರನ್ನು ಪ್ರಶ್ನಿಸುವವರನ್ನು ದೇಶದ್ರೋಹಿ ಎಂದು ಬಿಂಬಿಸಿ ಹಿಂಸಿಸಲಾಗುತ್ತದೆ ಎಂದು ದೆಹಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ನಾನು ಪ್ರಧಾನಿ ನರೇಂದ್ರ ಮೋದಿ ವಿರೋಧಿಯಲ್ಲ. ದೇಶದ ಪ್ರಧಾನಮಂತ್ರಿಯಾಗಿ ನಾನು ಅವರನ್ನು ಒಪ್ಪುತ್ತೇನೆ. ಆದರೆ, ಅವರ ಕೆಲ ಸಿದ್ಧಾಂತಕ್ಕೆ ನನ್ನ ತೀವ್ರ ವಿರೋಧವಿದೆ. ಯಾವುದೋ ಒಂದು ಪಕ್ಷ, ಸಂಘಟನೆ ಅಥವಾ ಸಿದ್ಧಾಂತವನ್ನು ಒಪ್ಪಿಕೊಳ್ಳಬೇಕು ಎಂಬ ನಿಯಮ ಪ್ರಜಾಪ್ರಭುತ್ವದಲ್ಲಿಲ್ಲ ಎಂದೂ ಹೇಳಿದ್ದಾರೆ. 

ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ಬೆಂಗಳೂರು ಟಿವಿ ಪತ್ರಕರ್ತರ ಒಕ್ಕೂಟ ಗುರುವಾರ ನಗರದ ಪ್ರಸ್‌ಕ್ಲಬ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದ ಅವರು, ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಮೂಲ ಆಶಯವನ್ನೇ ಗಾಳಿಗೆ ತೂರುತ್ತಿದೆ. ಯುವಜನತೆ ಸಂವಿಧಾನ, ಪ್ರಜಾಸತ್ತೆ ಹಾಗೂ ದೇಶವನ್ನು ರಕ್ಷಿಸಲು ದನಿ ಎತ್ತಬೇಕಿದೆ ಎಂದು ತಿಳಿಸಿದರು.

ದೇಶದಲ್ಲಿನ ವಿಶ್ವವಿದ್ಯಾಲಯಗಳಲ್ಲಿನ ಸ್ಥಿತಿಗತಿ, ನೋಟು ನಿಷೇಧದ ಪರಿಣಾಮ, ಸೇನೆ, ನ್ಯಾಯಾಂಗ ವ್ಯವಸ್ಥೆ ಹಾಗೂ ತಮ್ಮ ಮುಂದಿನ ನಡೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಅವರು, ಬಿಜೆಪಿ ಪಕ್ಷವು “ಸ್ವತ್ಛ ಭಾರತ’ದ ಹೆಸರಿನಲ್ಲಿ ಮೊದಲು ಮಹಾತ್ಮ ಗಾಂಧಿಯವರ ಕನ್ನಡಕ ಹೈಜಾಕ್‌ ಮಾಡಿತ್ತು. ಈಗ ಖಾದಿಯ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪರ್ಯಾಯ ಎಂಬಂತೆ ಪ್ರತಿಷ್ಠಾಪಿಸುತ್ತಿದ್ದಾರೆ. ಇನ್ನು ಆರ್‌ಎಸ್‌ಎಸ್‌ ಸಂವಿಧಾನವನ್ನು ವಿರೋಧಿಸುವುದೇ ತನ್ನ ಅಜೆಂಡಾ ಆಗಿಸಿಕೊಂಡಿದೆ ಎಂದು ಹೇಳಿದರು. 

ಜನರ ಮೂಲಭೂತ ಹಕ್ಕುಗಳನ್ನು ದಮನ ಮಾಡಲಾಗುತ್ತಿದ್ದು, ವ್ಯವಸ್ಥೆಯ ಬಗ್ಗೆ ಏನಾದರೂ ಪ್ರಶ್ನಿಸಿದವರನ್ನು ಬಂಧಿಸಲಾಗುತ್ತಿದೆ. ರೋಹಿತ್‌ ವೇಮುಲ ಸಾವಿಗೆ ನ್ಯಾಯ ಕೇಳಿದಕ್ಕಾಗಿ ನನ್ನನ್ನೂ ಸೇರಿದಂತೆ ಹಲವರನ್ನು ವಿನಾಕಾರಣ ಜೈಲಿಗೆ ತಳ್ಳಲಾಯಿತು ಎಂದು ಆರೋಪಿಸಿದರು.

Advertisement

“ಬಿಜೆಪಿಯವರು ಎಷ್ಟೇ ಪ್ರಯತ್ನಿಸಿದರೂ ಗಾಂಧೀಜಿ, ಅಂಬೇಡ್ಕರ್‌ ಮತ್ತು ಭಗತ್‌ಸಿಂಗ್‌ರಂತಹ ಬಹುತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದವರನ್ನು ಹೈಜಾಕ್‌ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಉದಾರವಾದಿ ಸಂಸ್ಕೃತಿ ಕಣ್ಮರೆಯಾಗಿದ್ದೇ ಏಕರೂಪದ ಸಂಸ್ಕೃತಿ ಪ್ರತಿಪಾದಿಸುವ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಎಂದು ಅಭಿಪ್ರಾಯಪಟ್ಟರು.

ಇಡೀ ಜಗತ್ತಿನಲ್ಲಿ ಈಗ ಬಲಪಂಥೀಯ ಶಕ್ತಿಗಳು ಮುಂಚೂಣಿಗೆ ಬಂದಿವೆ. ಆದರೆ ನಮ್ಮಂಥವರ ಬೆಂಬಲ ಪ್ರತ್ಯೇಕತಾವಾದಿಗಳಿಗೆ ಎಂದಿಗೂ ಇಲ್ಲ. ನಮ್ಮದೇನಿದ್ದರೂ ಸಂವಿಧಾನದ ಪರವಾದ ದನಿ ಅಷ್ಟೆ. ಹಾಗೆಯೇ, ನಾವು ಗಲ್ಲು ಶಿಕ್ಷೆಯನ್ನು ವಿರೋಧಿಸುತ್ತೇವೆಯೇ ವಿನಹ ಸಂಸತ್‌ ಮೇಲಿನ ದಾಳಿಯ ತತ್ತಿತಸ್ಥನಾದ ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಿದ್ದರ ವಿರುದ್ಧ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉನ್ನತ್ತ ಶಿಕ್ಷಣಕ್ಕೆ ಅನುದಾನ ನೀಡುವ ಬದಲು ತಮ್ಮ ವಿಚಾರಗಳನ್ನು ಹೇರುವ ಕೆಲಸ ಮಾಡುತ್ತಿದೆ. ಇದರಿಂದ ಅನೇಕ ಮಂದಿ ವಿಶ್ವವಿದ್ಯಾಲಯ ತೊರೆದಿದ್ದಾರೆ. ದೇಶದ ಬಹುತೇಕ ಕಾಲೇಜುಗಳಲ್ಲಿ ಆರ್‌ಎಸ್‌ಎಸ್‌ ಸಿದ್ಧಾಂತ ಹೇರುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ನಾನು ಮೋದಿಯನ್ನು ದ್ವೇಷಿಸುತ್ತಿಲ್ಲ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇನೆ. ಜನವಿರೋಧಿ ನೀತಿಯನ್ನು ಪ್ರಶ್ನಿಸಿದರೆ ತಪ್ಪೇನು?” ಪ್ರಧಾನಿ ಅಥವಾ ಒಂದು ಪಕ್ಷದ ವಿರುದ್ಧ ಮಾತನಾಡಿದರೆ ದೇಶದ್ರೋಹ ಪಟ್ಟ ಕಟ್ಟುತ್ತಾರೆ. ದೇಶದ್ರೋಹ ಆರೋಪ ಹೊರಿಸಿ ಒಂದು ವರ್ಷವಾದರೂ ಏಕೆ ಎಫ್ಐಆರ್‌ ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.

ಚುನಾವಣೆ ಸ್ಪರ್ಧಿಸಲ್ಲ: ನನ್ನ ಪಿಎಚ್‌ಡಿ ಮುಗಿದ ಬಳಿಕ ಶಿಕ್ಷಣ ವೃತ್ತಿ ಜತೆಗೆ ಹೋರಾಟವೂ ಮುಂದುವರೆಯಲಿದೆ. ನಾನು ಯಾವುದೇ ಪಕ್ಷದ ಪರವಾಗಿಲ್ಲ. ಪ್ರಸ್ತುತ ಓಟ್‌ ಬ್ಯಾಂಕ್‌ ರಾಜಕೀಯ ಮಾಡುವ ಪಕ್ಷಗಳ ನಡುವೆ ಪರ್ಯಾಯ ರಾಜಕೀಯ ಶಕ್ತಿ ಅಗತ್ಯವಿದೆ ಎಂಬುದು ನನ್ನ ನಂಬಿಕೆ. ಎಂದು ಕನ್ಹಯ್ಯ ಹೇಳಿದರು.

ಬಿಗಿ ಪೊಲೀಸ್‌ ಭದ್ರತೆ 
ಕನ್ಹಯ್ಯ ಆಗಮದ ವಿರುದ್ಧ ಎಬಿವಿಪಿ ಪ್ರತಿಭಟನೆ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಸ್‌ಕ್ಲಬ್‌ ಸುತ್ತಮುತ್ತ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಈ ಬಗ್ಗೆ ಭಾಷಣದಲ್ಲಿ ಪ್ರತಿಕ್ರಿಯಿಸಿದ ಕನ್ಹಯ್ಯ ಇದು ನನಗಾಗಿ ಮಾಡಿದ ಭದ್ರತೆ ಅಲ್ಲ. ನನ್ನ ವಿರುದ್ಧ ಪ್ರತಿಭಟನೆ ನಡೆಸುವರನ್ನು ಸ್ವಾಗತಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next