Advertisement

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

07:11 PM May 05, 2024 | Shreeram Nayak |

ವಿಜಯಪುರ: ಜನತಾ ಪರಿವಾರದಲ್ಲಿ ಸಂಸದನಾಗಿದ್ದ ನನ್ನನ್ನು ಮಂತ್ರಿ ಮಾಡುತ್ತೇವೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಬಿಜೆಪಿ ನಾಯಕರು ಆಹ್ವಾನಿಸಿದರೂ ನಿರಾಕರಿಸಿದ್ದೆ. ಆದರೆ ನಿಮ್ಮದೇ ಪಕ್ಷದಲ್ಲಿರುವ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮಂತ್ರಿ ಮಾಡಿ ಎಂದು ಸಲಹೆ ನೀಡಿದ್ದೇ ನಾನು ಎಂದು ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.

Advertisement

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ಯತ್ನಾಳ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದೇ ನಾನು ಎಂಬ ಆರೋಪದ ಮೂಲಕ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಸೋಲಿನ ಭೀತಿಯಿಂದ ನನ್ನ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನಾನು ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸುವ ಕೆಲಸದಲ್ಲಿ ತೊಡಗಿದ್ದಾರೆ. ಚಿಕ್ಕೋಡಿ ಸಂಸದನಾಗಿದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ಉಮೇಶ ಕತ್ತಿ, ಎ.ಬಿ.ಪಾಟೀಲ ರಾಜು ಕಾಗೆ, ಲಕ್ಷ್ಮಣ ಸವದಿ ಸೇರಿದಂತೆ ಹಲವರನ್ನು ಬೆಳೆಸಿದ್ದು ನಾನು. ವಿಜಯಪುರ ಜಿಲ್ಲೆಯಲ್ಲಿ ಬಿ.ಎಸ್.ಪಾಟೀಲ ಮನಗೂಳಿ ಅವರನ್ನು ಸಚಿವರನ್ನಾಗಿ ಮಾಡುವಲ್ಲಿ ನನ್ನ ಪಾತ್ರವೂ ಇದೆ.

ಬಿ.ಜಿ.ಪಾಟೀಲ ನನ್ನ ಜೊತೆ ಇದ್ದವರು, ಕಾರಣಾಂತರದಿಂದ ಬಿಟ್ಡುಹೋಗಿದ್ದಾರೆ. ನಾನು ಮಾಡಿದ ಉಪಕಾರವನ್ನು ಮರೆತಿರುವ ಎಂ.ಆರ್.ಪಾಟೀಲ ನನ್ನ ವಿರುದ್ಧ ಸಲ್ಲದ ಆರೋಪದ ಟೀಕೆ ಮಾಡುತ್ತಿದ್ದಾರೆ. ನಾನು ಲಿಂಗಾಯತ ವಿರೋಧಿ, ಲಿಂಗಾಯತಿಗೆ ಅನ್ಯಾಯ ಮಾಡಿದ್ದಾಗಿ ಅಪಪ್ರಚಾರ ನಡೆಸಿದ್ದಾರೆ ಎಂದು ಟೀಕಿಸಿದರು.

ರಾಮಕೃಷ್ಣ ಹೆಗಡೆ, ಜೆ.ಎಚ್.ಪಾಟೀಲ ಅವರಿಂದ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವ ರಾಜಕೀಯ ಕಲಿತವನು ನಾನು. ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ನನಗೆ ಅನ್ಯಾಯ ಮಾಡಿದ ಯಾರಿಗೂ ನಾನು ಕೆಟ್ಟದ್ದು ಮಾಡಿಲ್ಲ, ಆದರೆ ದೇವರಿಗೆ ಮೊರೆ ಇಟ್ಟಿದ್ದೇನೆ ಎಂದರು.

Advertisement

ಡಿಎಸ್‍ಎಸ್ ಬಗ್ಗೆ ನನಗೆ ಗೌರವವಿದೆ, ರಾಜು ಆಲಗೂರ ಹಿಂದಿರುವ ಡಿಎಸ್‍ಎಸ್ ಹುಡುಗರ ಬಗ್ಗೆ ಕ್ಷೇತ್ರದ ಜನರಿಗೆ ಭಯವಿದೆ.

45 ವರ್ಷದ ರಾಜಕೀಯ ಮಾಡಿರುವ ನಾನು ಜಿಲ್ಲೆಯ ಮತದಾರರ ನಾಡಿ ಮಿಡಿತ ಅರಿತಿದ್ದೇನೆ. ನಾನು ಅನಾರೋಗ್ಯದಿಂದ ಇದ್ದಾಗ ಏ ಮುತ್ಯಾ ಟಿಕೆಟ್ ತೊಗೊಂಡ ಬಾ, ನಾವ ಗೆಲ್ಲಿಸುತ್ತೇವೆ ಎಂದು ಜನರೇ ಹೇಳಿದ್ದಾರೆ. ಕಾರಣ ಇಂಥ ಅಪಪ್ರಚಾರದಿಂದ ನನಗೇನೂ ಆಗದು, ಕಳೆದ ಚುನಾವಣೆಗಿಂತ ಕನಿಷ್ಠ ಒಂದು ಮತದ ಅಂತರದಿಂದಾದರೂ ಗೆಲ್ಲುವುದು ನಾನೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೊಕ್ಕ ಇಲ್ಲದ ನಾನು ಬಡವ, ಆದರೆ ನನ್ನದು ಸಂತೃಪ್ತ ಕುಟುಂಬ. ನನ್ನ ಮಕ್ಕಳ ಸಹಕಾರ, ಹೆಂಡತಿಯ ಪರಿಶ್ರಮದಿಂದ ಹಿಂದೆ 4 ಸಾವಿರಕ್ಕೆ ಎಕರೆಯಂತೆ ಖರೀದಿಸಿದ ಜಮೀನುಗಳು ಈಗ ಕೋಟಿ ಮೌಲ್ಯವಾಗಿದೆ. ಹೀಗಾಗಿ ಹೆಚ್ಚಿನ ಮೌಲ್ಯವಾಗಿದ್ದು, 50 ಕೋಟಿ ಆಸ್ತಿ ಇದ್ದರೂ ನನ್ನ ಜೇಬಲ್ಲಿ ನೂರು ರೂಪಾಯಿ ಇಲ್ಲ ಎಂದರು.

ಪ್ರಜ್ವಲ್ ಪ್ರಕರಣ ಪರಿಣಾಮ ಬೀರದು :
ವಿಜಯಪುರ : ಪ್ರಜ್ವಲ್ ಪ್ರಕರಣ, ರೇವಣ್ಣ ಬಂಧನ ಉತ್ತರ ಕರ್ನಾಟಕ ಭಾಗದ ಚುನಾವಣೆಯಲ್ಲಿ ಪರಿಣಾಮ ಬೀರದು ಎಂದಿರುವ ವಿಜಯಪುರ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ರಮೇಶ ಜಿಗಜಿಣಗಿ, ತಪ್ಪು ಮಾಡಿದವರಿಗೆ ಕಾನೂನು ಶಿಕ್ಷೆ ನೀಡಲಿದೆ ಎಂದಿದ್ದಾರೆ.

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿ ಮಾಡಿರುವ ಕೃತ್ಯಕ್ಕೆ ನಾವಾಗಲಿ, ನಮ್ಮ ಪಕ್ಷವಾಗಲಿ ಹೊಣೆಯಾಗಲು ಸಾಧ್ಯವೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next