ಹೊಸದಿಲ್ಲಿ: ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಎಲ್ಲರ ಗಮನ ಸೆಳೆದಿರುವ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ, ಫಿಟ್‌ನೆಸ್ ಹೆಚ್ಚಿಸಿಕೊಳ್ಳುವುದಕ್ಕಾಗಿ ತಾನಿನ್ನೂ ಶ್ರಮಿಸಬೇಕಿದೆ ಎಂದಿದ್ದಾರೆ. ಆ ಮೂಲಕ ಮುಂದಿನ ದಿನಗಳಲ್ಲಿ ದೇಶಕ್ಕೆ ಇನ್ನಷ್ಟು ಪದಕ ತರುವ ನಿರೀಕ್ಷೆ ಹೊಂದಿದ್ದಾರೆ.
21ನೇ ಕಾಮನ್ವೆಲ್ತ್ ಗೇಮ್ ಟಿಟಿ ಸ್ಪರ್ಧೆಯ ವನಿತಾ ಸಿಂಗಲ್ಸ್‌ನಲ್ಲಿ ಬಾತ್ರಾ ಚಿನ್ನ ಗೆಲ್ಲುವ ಜತೆಗೆ ತಂಡ ಸ್ಪರ್ಧೆಯಲ್ಲೂ ದೇಶಕ್ಕೆ ಬಂಗಾರ ತಂದಿತ್ತಿದ್ದರು. ಆದರೆ ತನ್ನ ಈಗಿನ ಸಾಧನೆಗೆ ತೃಪ್ತಿ ಪಟ್ಟುಕೊಳ್ಳದ ಬಾತ್ರಾ, “ನಾನು ಇನ್ನಷ್ಟು ಸುಧಾರಿಸಿಕೊಳ್ಳಬೇಕಿದೆ. ಮುಖ್ಯವಾಗಿ ನನ್ನ ಫಿಟ್‌ನೆಸ್‌ನಲ್ಲಿ ಪರಿಪೂರ್ಣತೆ ಸಾಧಿಸಬೇಕಿದೆ. ಅದಕ್ಕಾಗಿ ನಾನು ಇನ್ನೂ ಕಠಿನ ಶ್ರಮಪಡುವ ಅಗತ್ಯವಿದೆ’ ಎಂದಿದ್ದಾರೆ.
“ಅಗ್ರ ಶ್ರೇಯಾಂಕಿತ ಆಟಗಾರರನ್ನು ಸೋಲಿಸುವಷ್ಟರ ಮಟ್ಟಿಗೆ ನಾನಿನ್ನೂ ಸುಧಾರಿಬೇಕು. ಅದಕ್ಕಾಗಿ ನಾನು ಹೆಚ್ಚು ದುಡಿಯಬೇಕು. ಆ ಮೂಲಕ ನಾನು ಶೀಘ್ರ ದೈಹಿಕ ಕ್ಷಮತೆ ಗಳಿಸಿಕೊಳ್ಳಬೇಕು’ ಎಂದು ಗೋಲ್ಡ್‌ಕೋಸ್ಟ್‌ನಿಂದ ಮರಳಿದ ಮಣಿಕಾ ಸಂದರ್ಶನವೊಂದರಲ್ಲಿ ಹೇಳಿದರು.
22ರ ಹರೆಯದ ಮಣಿಕಾ ಗೋಲ್ಡ್‌ಕೋಸ್ಟ್ ತಂಡ ಸ್ಪರ್ಧೆಯಲ್ಲಿ ಎರಡನೇ ಶ್ರೇಯಾಂಕಿತೆ ಸಿಂಗಾಪುರದ ಮೆಂಗ್ಯು ಯು ಅವರನ್ನು ಎದುರುಗೊಳ್ಳುವ ಬಗ್ಗೆ ಆರಂಭದಲ್ಲಿ ಚಿಂತೆಗೊಳಗಾಗಿದ್ದರಂತೆ. ಆದರೆ 3 ಒಲಿಂಪಿಕ್ಸ್ ಪದಕ ವಿಜೇತೆ, ವಿಶ್ವದ 4ನೇ ಶ್ರೇಯಾಂಕಿತೆ ಸಿಂಗಾಪುರದ ಫೆಂಗ್ ಟಿಯಾನ್ವಿ ಸೋಲಿಸಿದ ಬಳಿಕ ಕೊಂಚ ಧೈರ್ಯ ತಾಳಿದರಂತೆ. ಅನಂತರ ಸಿಂಗಲ್ಸ್ ಮತ್ತು ತಂಡ ಸ್ಪರ್ಧೆಗಳೆರಡರಲ್ಲೂ ಸ್ವರ್ಣದಿಂದ ಸಿಂಗಾರಗೊಂಡಿದ್ದರು.
ಟಿಟಿ ಜನಪ್ರಿಯಗೊಳ್ಳಲಿದೆ
ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಅವರಂತೆ ಮಿಂಚುವ ಆಸೆಯನ್ನಿಟ್ಟುಕೊಂಡಿರುವ ಮಣಿಕಾ, “ದೇಶದಲ್ಲಿ ಉತ್ತಮ ಟಿಟಿ ಆಟಗಾರರಿರುವುದರಿಂದ ಟೇಬಲ್ ಟೆನಿಸ್ ಕೂಡ ಬ್ಯಾಡ್ಮಿಂಟನ್‌ನಂತೆ ಜನಪ್ರಿಯಗೊಳ್ಳಲಿದೆ’ ಎಂದರು.
ಎ. 29ರಿಂದ ಆರಂಭವಾಗಲಿರುವ ವರ್ಲ್ಡ್ ಟೀಮ್ ಚಾಂಪಿಯನ್‌ಶಿಪ್‌ಗಾಗಿ ಸ್ವೀಡನ್‌ಗೆ ತೆರಳುವ ಬಾತ್ರಾ, ಅಲ್ಲಿಯೂ ದೇಶಕ್ಕಾಗಿ ಪದಕ ಗೆಲ್ಲುವ ಗುರಿ ಹೊಂದಿದ್ದಾರೆ.