ಧಾರವಾಡ: ಲಿಂಗಾಯತ ಭವನದ ಹೆಸರಿನಲ್ಲಿ ರಾಜಕೀಯ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು. ನಗರದ ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದಲ್ಲಿ ಲಿಂಗಾಯತ ಭವನದ ಉದ್ಘಾಟನೆ ಹಿನ್ನೆಲೆಯಲ್ಲಿ ಮಂಗಳವಾರ ಜರುಗಿದ ಮಹಾಸಭಾ ಪದಾಧಿಕಾರಿಗಳ ಹಾಗೂ ಸಮಾಜದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಲಿಂಗಾಯತ ಸಮಾಜದ ಬಾಂಧವರು ಭವನದ ಮೇಲೆ ಅಭಿಮಾನ ಹೊಂದಿದ್ದಾರೆ. ಕೆಲವು ವಿಷಯಗಳ ಬಗ್ಗೆ ಈ ಹಿಂದೆ ಭಿನ್ನಾಭಿಪ್ರಾಯಗಳು ಬಂದಿದ್ದವು. ಇದರಿಂದ ಸಂಘದ ಉದ್ಘಾಟನೆ ವಿಳಂಬವಾಗಿತ್ತು. ಯಾವುದೇ ಪ್ರತಿಷ್ಠೆ ಇಟ್ಟುಕೊಳ್ಳದೆ ಭವನವನ್ನು ಶೀಘ್ರ ಉದ್ಘಾಟಿಸೋಣ, ಬೀಗ ಹಾಕಿಡುವುದು ಸರಿಯಲ್ಲ ಎಂದರು.
ಇಲ್ಲಿಯವರೆಗೆ ಮಹಾಸಭಾಕ್ಕೆ ದುಡಿದ ಎಲ್ಲರನ್ನೂ ಕರೆದು ಸನ್ಮಾನಿಸೋಣ. ಜಿ.ಜಿ. ದೊಡವಾಡ ಸೇರಿದಂತೆ ಚಂದ್ರಕಾಂತ ಬೆಲ್ಲದ ಅವರೂ ಭವನ ನಿರ್ಮಾಣ ಆಗಲು ಹೆಚ್ಚು ದುಡಿದಿದ್ದಾರೆ. ಇಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ. ನಾನೂ ಕೂಡ ಲಿಂಗಾಯತ ಭವನದ ಹೆಸರಿನಲ್ಲಿ ರಾಜಕೀಯ ಮಾಡುವ ಸಣ್ಣಮಟ್ಟಕ್ಕೆ ಇಳಿಯುವುದಿಲ್ಲ.
ಭವನ ಯಾರೊಬ್ಬರ ಆಸ್ತಿಯೂ ಅಲ್ಲ ಎಂದು ಹೇಳಿದರು. ಲಿಂಗಾಯತ ಭವನದ ಉದ್ಘಾಟನೆಯನ್ನು ಸರಳವಾಗಿ ಮಾಡೋಣ. ಈ ಸಂಬಂಧ ಮುಂದಿನ ವಾರದೊಳಗೆ ಇನ್ನೊಂದು ಸಭೆ ಸೇರಿ ದಿನಾಂಕ ನಿಗದಿ ಹಾಗೂ ಕಮಿಟಿಗಳನ್ನು ಮಾಡೋಣ. ಭವನದ ಇನ್ನಷ್ಟು ಅಭಿವೃದ್ಧಿಗೆ ಸರಕಾರದಿಂದ ಹಣಕಾಸಿನ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಶಿವಾನಂದ ಅಂಬಡಗಟ್ಟಿ ಮಾತನಾಡಿ, ಭವನದ ಉದ್ಘಾಟನೆ ಎರಡು ವರ್ಷ ಹಿಂದೆಯೇ ಆಗಬೇಕಿತ್ತು. ಅಡಚಣೆಯಿಂದ ಮಹಾಸಭಾಕ್ಕೆ 70 ರಿಂದ 80 ಲಕ್ಷ ರೂ. ನಷ್ಟವುಂಟಾಗಿದೆ. ಆಗಸ್ಟ್ ಒಳಗಾಗಿ ಉದ್ಘಾಟನೆಯ ದಿನಾಂಕವನ್ನು ನಿಗದಿ ಮಾಡಿ, ವಿವಿಧ ಕಮಿಟಿಗಳನ್ನು ರಚಿಸಬೇಕು ಎಂದರು.
ಮುಖಂಡರಾದ ಗುರುರಾಜ ಹುಣಸಿಮರದ, ಡಾ| ಎಸ್.ಆರ್. ರಾಮನಗೌಡ್ರ, ನಾಗರಾಜ ಪಟ್ಟಣಶೆಟ್ಟಿ, ಶಾಂತವೀರ ಬೆಟಗೇರಿ, ಅಶೋಕ ನಿಡವಣಿ, ಸಿದ್ದರಾಮ ನಡಕಟ್ಟಿ, ಬಸವರಾಜ ಬಿಕ್ಕಣ್ಣವರ, ಸಿ.ಬಿ. ಯಲಿಗಾರ, ಪ್ರಭಾಕರ ಮುಂತಾದವರಿದ್ದರು.