Advertisement

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

11:18 PM Nov 22, 2024 | Team Udayavani |

ಬೆಂಗಳೂರು: ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾಣ ಸಿಕ್ಕಿರುವ ಕಾಳಿಂಗ ಸರ್ಪದ ಹೊಸ ಪ್ರಭೇದಕ್ಕೆ ಅರಣ್ಯ-ಪರಿಸರ ಸಚಿವ ಈಶ್ವರ ಖಂಡ್ರೆ ಅವರು “ಓಫಿಯೋಫೆಗಸ್‌ ಕಾಳಿಂಗ’ ಎಂಬ ಕನ್ನಡದ ವೈಜ್ಞಾನಿಕ ಹೆಸರನ್ನು ಶುಕ್ರವಾರ ಇಂಡಿಯನ್‌ ಇನ್‌ ಸ್ಟಿ ಟ್ಯೂಟ್‌ ಆಫ್ ಸೈನ್ಸ್‌ನ ಜೆಎನ್‌ ಟಾಟಾ ಸಭಾಂಗಣದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಖಂಡ್ರೆ, ಡಾ| ಗೌರಿಶಂಕರ್‌ ಮತ್ತು ತಂಡದವರು ಇಂದು ಕರ್ನಾಟಕದ ಪಶ್ಚಿಮಘಟ್ಟದಲ್ಲಿ ಮತ್ತು ಮಲೆನಾಡಿನಲ್ಲಿರುವ ಅಪರೂಪದ ಅದರಲ್ಲೂ ಕಾಳಿಂಗ ಸರ್ಪಗಳ ಬಗ್ಗೆ ಅಧ್ಯಯನ ನಡೆಸಿರುವದಷ್ಟೇ ಅಲ್ಲದೆ ಅದಕ್ಕೆ ಕನ್ನಡದ ವೈಜ್ಞಾನಿಕ ಹೆಸರಿಡಲಾಗಿದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುವ ಓಫಿಯೋಫೇಗಸ್‌ ಅಂದರೆ ಕಾಳಿಂಗ ಸರ್ಪಗಳೆಲ್ಲ ಒಂದೇ ಎಂದು ಬಹುತೇಕರು ಭಾವಿಸಿದ್ದರು. ಆದರೆ, ಡಾ| ಗೌರಿಶಂಕರ್‌ ತಂಡ ಈ ಬಗ್ಗೆ ಅಧ್ಯಯನ ಮಾಡಿ ಕರ್ನಾಟಕದ ಕಾಳಿಂಗ ಸರ್ಪ ವಿಭಿನ್ನ ಪ್ರಭೇದಕ್ಕೆ ಸೇರಿದ್ದೆಂಬ ಅಂಶವನ್ನು ತಿಳಿಸಿರುತ್ತಾರೆ. ಇಂತಹ ಅಧ್ಯಯನಗಳು ರೋಚಕ ಮತ್ತು ವಿಸ್ಮಯಕಾರಿ ಹಾಗೂ ಅಷ್ಟೇ ಅಪಾಯಕಾರಿ. ಇಂತಹ ಅಧ್ಯಯನ ತಂಡಗಳಿಗೆ ಅರಣ್ಯ ಇಲಾಖೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡುತ್ತಿದೆ ಎಂದರು.

ಕಾಳಿಂಗ ಪ್ರತಿಷ್ಠಾನದ ಡಾ| ಗೌರಿಶಂಕರ್‌ ಮಾತನಾಡಿ, ಇಂದು ರಾಜ್ಯದಲ್ಲಿ ಕಾಳಿಂಗ ಸರ್ಪಗಳು ಉಳಿದುಕೊಂಡಿವೆ ಎಂದರೆ, ಜನರು ಅವುಗಳ ನ್ನು ಪ್ರೀತಿಸಿದ್ದು ಮತ್ತು ಅವುಗಳ ಮೇಲಿರುವ ನಂಬಿಕೆಯಿಂದ. ಪಶ್ಚಿಮಘಟ್ಟದಲ್ಲಿ ಕಾಳಿಂಗ ಸರ್ಪದ ಪ್ರಭೇದ ಸಾಕಷ್ಟು ಉಳಿದಿದೆ. ನಾನು ಕೂಡ ಕಾಳಿಂಗ ಹಾವಿನಿಂದ ಕಚ್ಚಿಸಿಕೊಂಡಿದ್ದೇನೆ. ಜಗ್ಗತಿನ ಅತ್ಯಂತ ವಿಷಕಾರಿ ಹಾವುಗಳಲ್ಲಿ ಇಂದು ಕೂಡ ಒಂದು ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ಪ್ರಧಾನಮುಖ್ಯ ಅರಣ್ಯ ಸಂರಕ್ಷಣಾಕಾರಿ (ವನ್ಯಜೀವಿ) ಸುಭಾಷ್‌ ಮಾಲ್ಕಡೆ, ನಟ ವಿನಯ್‌ ರಾಜ್‌ ಕುಮಾರ್‌, ಸಂಗೀತ ಸಂಯೋಜಕ ರಿಕಿ ಕೇಜ್‌ ಮತ್ತಿತರರು ಪಾಲ್ಗೊಂಡಿದ್ದರು.

ಹೇಗೆ ಪತ್ತೆಹಚ್ಚಲಾಗಿದೆ?
ಸಂಶೋಧನೆಯ ಪ್ರಕಾರ ಸರ್ಪಗಳ ಬಣ್ಣ ಮೈ ಪಟ್ಟಿ ಹಾಗೂ ಕೆಲ ಸೂಕ್ಷ್ಮ ದೈಹಿಕ ಬದಲಾವಣೆಗಳನ್ನು ನಾವು ಗುರುತಿಸಬಹುದು. ಓಫಿಯೋಫಗಸ್‌ ಕಾಳಿಂಗದಲ್ಲಿ 40ಕ್ಕಿಂತ ಕಡಿಮೆ ಪಟ್ಟಿಗಳಿರುತ್ತದೆ. ಬಂಗಾರಸ್‌ನಲ್ಲಿ 70ಕ್ಕಿಂತ ಹೆಚ್ಚು ಪಟ್ಟಿ, ಹ್ಯಾನ್‌ ಪ್ರಭೇದದಲ್ಲಿ 50-70 ಪಟ್ಟಿಗಳು ಹಾಗೂ ಸಲ್ವತಾನಾದಲ್ಲಿ ಯಾವುದೇ ಪಟ್ಟೆಗಳು ಕಂಡುಬರುವುದಿಲ್ಲ. ಇವುಗಳ ಆನುವಂಶಿಕ ಮಟ್ಟದಲ್ಲಿ ಶೇ. 1ರಿಂದ 4ರ ವರೆಗೆ ವ್ಯತ್ಯಾಸವಿರುತ್ತದೆ. ಈ ವ್ಯತ್ಯಾಸವನ್ನು ಡಿಎನ್‌ಎ ಹಾವಿನ ಪೊರೆ, ಫೋಟೋ ಹಾಗೂ ಪಳೆಯುಳಿಕೆಗಳನ್ನು ಅಧ್ಯಯನ ಮಾಡುವ ಮೂಲಕ ಗುರುತಿಸಲಾಗಿದೆ ಎಂದು ಗೌರಿಶಂಕರ್‌ ತಿಳಿಸಿದ್ದಾರೆ.

Advertisement

ಕಾಳಿಂಗದಲ್ಲಿ 4 ವಿಧ
ಪ್ರಪಂಚದಲ್ಲಿ ಕಂಡುಬರುವ ಕಾಳಿಂಗ ಸರ್ಪದಲ್ಲಿ ಸದ್ಯ 4 ಬಗೆಯ ಪ್ರಭೇದಗಳಿದ್ದು ಪೂರ್ವ ಪಾಕಿಸ್ಥಾನ, ಉತ್ತರ ಮತ್ತು ಪೂರ್ವ ಭಾರತ, ಅಂಡಮಾನ್‌ ದ್ವೀಪಗಳು, ಇಂಡೋ-ಬರ್ಮಾ, ಇಂಡೋ-ಚೀನ ಮತ್ತು ಥಾಯ್ಲೆಂಡ್‌ ಭಾಗದಲ್ಲಿ ಕಂಡುಬರುವುದು ನಾರ್ಥನ್‌ ಕಿಂಗ್‌ ಕೋಬ್ರಾ (ಓಫಿಯೋಫೆಗಸ್‌ ಹನ್ನಾ), ದಕ್ಷಿಣ ಫಿಲಿಫಿನ್ಸ್‌ ಭಾಗದಲ್ಲಿ ಸುಂದಕಿಂಗ್‌ ಕೋಬ್ರಾ (ಓಫಿಯೋಫೆಗಸ್‌ ಬಂಗಾರಸ್‌), ಉತ್ತರ ಫಿಲಿಫಿನ್ಸ್‌ನ ಲೂಜಾನ್‌ಕಿಂಗ್‌ ಕೋಬ್ರಾ (ಓಫಿಯೋಫೆಗಸ್‌ ಸಲ್ವತಾನಾ) ಹಾಗೂ ಭಾರತದ ಪಶ್ಚಿಮಘಟ್ಟದಲ್ಲಿ ಕಾಣಸಿಗುವುದಕ್ಕೆ ಕಾಳಿಂಗ ಸರ್ಪ (ಓಫಿಯೋಫೆಗಸ್‌ ಕಾಳಿಂಗ) ಎಂಬ ವೈಜ್ಞಾನಿಕ ಹೆಸರು ಇಡಲಾಗಿದೆ.

ಪಶ್ಚಿಮಘಟ್ಟದ ಕಾಳಿಂಗ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರಿಡುವ ಬಗ್ಗೆ ನ.9ರಂದು ಉದಯವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಪ್ರಕಟವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next