Advertisement

ನಾನು ರೆಡ್ಡಿ ಸಮಾಜದವನೆಂದು ಹೇಳಲು ಹೆಮ್ಮೆ: ಗಾಲಿ

12:31 PM Jul 24, 2017 | |

ದಾವಣಗೆರೆ: ರಾಜ್ಯದ 60 ವಿಧಾನ ಸಭಾ ಕ್ಷೇತ್ರದಲ್ಲಿ ತಲಾ 30 ಸಾವಿರ ಮತದಾರರನ್ನು ಹೊಂದಿರುವ ರೆಡ್ಡಿ ಸಮುದಾಯ ನನ್ನದು ಎಂದು ಹೇಳಿಕೊಳ್ಳಲು ನಾನು ಹಿಂದೇಟು ಹಾಕುವುದಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

Advertisement

ಭಾನುವಾರ ಕಮ್ಮವಾರಿ ಭವನದಲ್ಲಿ ಶ್ರೀ ವೆಂಕಟೇಶ್ವರ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಮೊದಲು ನಾನು ರೆಡ್ಡಿ ಸಮುದಾಯದವನೆಂದು ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದೆ. ಆದರೆ, ಬೆಂಗಳೂರಿನಲ್ಲಿ ಇತೀಚಿಗೆ ವೇಮ, ಹೇಮರೆಡ್ಡಿ ಸಮಾಜದ ಸಮಾವೇಶದಲ್ಲಿ ಸೇರಿದ ಜನಸಂಖ್ಯೆ ನೋಡಿದ ಮೇಲೆ ನನಗೆ ನಾನು ಸಮುದಾಯದವನೆಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ ಎಂದರು.

ಬೆಂಗಳೂರಿನ ಸಮಾವೇಶಕ್ಕೆ ಸುಮಾರು 4 ಲಕ್ಷ ಜನರು ಸೇರಿದ್ದರು. ಇತ್ತೀಚೆಗೆ ಸರ್ಕಾರ ಕೈಗೊಂಡಿರುವ ಜನಗಣತಿ ವೇಳೆ ನಮ್ಮ ಸಮುದಾಯ 60 ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ 30 ಸಾವಿರ ಮತದಾರರನ್ನು ಹೊಂದಿದೆ. ನಾನು ಈವರೆಗೆ ಒಂದಿಷ್ಟು ತಾಲೂಕುಗಳಲ್ಲಿ ಮಾತ್ರ ನಾವಿದ್ದೇವೆ ಅಂದುಕೊಂಡಿದ್ದೆ. ಆದರೆ, ಕರ್ನಾಟಕದ ಮೂಲೆ ಮೂಲೆಯಲ್ಲೂ ನಾವು ಇದ್ದೇವೆ ಎಂದು ಹೇಳಿದರು.

ದಾವಣಗೆರೆ ಮಧ್ಯ ಕರ್ನಾಟಕ ನಗರಿಯಾಗಿದೆ. ಇಲ್ಲಿ ನಮ್ಮ ಸಮುದಾಯ ಉತ್ತಮ ಸಂಖ್ಯೆಯಲ್ಲಿದೆ. ಇಲ್ಲಿಯೇ ಸಮಾಜ ಬೆಳೆಯಬೇಕಿದೆ. ಇಲ್ಲಿಯೇ ಇರುವ ವೇಮನ ಮಠವನ್ನು ಅಭಿವೃದ್ದಿ ಪಡಿಸೋಣ. ಇನ್ನೊಂದು ಸಿದ್ಧಗಂಗಾ ಮಠ ಇಲ್ಲಿದೆ ಎಂಬಂತೆ ಸೇವೆ ಮಾಡೋಣ. ನಾನು ಮಠದ ಏಳಿಗೆಗೆ
ಶ್ರಮಿಸಲು ಸದಾ ಸಿದ್ಧ. ಇಂದು ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ ಎಂಬುದು ಗೊತ್ತಾಗುತ್ತಲೇ ಅನೇಕ ಮಠಾಧೀಶರು ನನ್ನನ್ನು ಮಠಕ್ಕೆ ಆಹ್ವಾನಿಸಿದ್ದರು. ಎಲ್ಲಾ ಮಠಗಳಿಗೆ ಇಂದು ನಾನು ಭೇಟಿನೀಡಿ ಬಂದೆ ಎಂದು ತಿಳಿಸಿದರು.

ನೀವು ಯಾವುದೇ ಕಾರ್ಯಕ್ರಮಕ್ಕೆ, ರಾಜ್ಯದ ಯಾವುದೇ ಮೂಲೆಗೆ ಆಹ್ವಾನಿಸಿದರೂ ನಾನು ಬರಲು ಸಿದ್ಧ. ಅಲ್ಲಿ 50 ಮನೆ ಇವೆಯಾ, 5000 ಮನೆ ಇವೆಯಾ ಮುಖ್ಯವಲ್ಲ. ನಮ್ಮ ಸಮುದಾಯದ ಜನರಿರುವುದು ಮುಖ್ಯ. ನಿಮ್ಮೆಲ್ಲಾ ಕಷ್ಟ ಸುಖದಲ್ಲಿ ನಾನು ಭಾಗಿಯಾಗುತ್ತೇನೆ. ಕಳೆದ 6 ತಿಂಗಳಲ್ಲಿ ನಾನು ರಾಜ್ಯದ ವಿವಿಧ ಬಾಗಗಳಲ್ಲಿ ನಡೆದ 43 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ ಎಂದು ತಿಳಿಸಿದರು.

Advertisement

ಹೇಮರೆಡ್ಡಿ ಮಲ್ಲಮ್ಮ ಪವಾಡ ಸೃಷ್ಟಿಸಿದ ಮಹಾನ್‌ ಸಾಧಕಿ. ಜೀವನದುದ್ದಕ್ಕೂ ಶಿವನನ್ನು ಒಲಿಸಿಕೊಳ್ಳುವಲ್ಲಿ ಯಶ ಕಂಡವರು. ಸಣ್ಣ ವಯಸ್ಸಿನಲ್ಲಿ ತಾಯಿ ಕಳೆದುಕೊಂಡು, ಶಿವನನ್ನೇ ತಾಯಿ ರೂಪದಲ್ಲಿ ಪಡೆದು ಮಮತೆ ಪಡೆದುಕೊಂಡಾಕೆ. ಮದುವೆಯಾದ ನಂತರ ತನ್ನ ಮೈದುನನ್ನು ಪರಿವರ್ತಿಸಿ, ಶರಣನನ್ನಾಗಿಸಿದಳು. ಕೊನೆ ಗಳಿಗೆಯಲ್ಲಿ ಶಿವನನ್ನು ಒಲಿಸಿಕೊಂಡು ರೆಡ್ಡಿ ಸಮಾಜ ಸದಾ ದಾನಮಾಡುವಷ್ಟು ಸಿರಿ ಕೊಡುವಂತೆ ಬೇಡಿಕೊಂಡವರು. ಅಂತಹವರ ಆಶೀರ್ವಾದ ನನ್ನ ಮೇಲೂ ಸಹ ಇದೆ. ಸುಮಾರು 5 ವರ್ಷ ಜನರ ಒಡನಾಟದಿಂದ ದೂರ ಇದ್ದ ನಾನು ಇದೇ ಮಲ್ಲಮ್ಮ ವೇಮನರ ಆಶೀರ್ವಾದದಿಂದ ಮತ್ತೆ ಜನರ ಮಧ್ಯೆಕ್ಕೆ ಬಂದಿದ್ದೇನೆ. ಇದು ನನಗೆ ಸಂತಸ ತರುವ ವಿಷಯವಾಗಿದೆ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ವಿಪ ಮಾಜಿ ಸದಸ್ಯ ಡಾ| ಎ.ಎಚ್‌. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಎಸ್‌.ವಿ. ರಾಮಚಂದ್ರ, ಜಿಪಂ ಮಾಜಿ ಅಧ್ಯಕ್ಷ ವೀರೇಶ್‌ ಎಂ. ಹನಗವಾಡಿ, ಮಾಜಿ ಮೇಯರ್‌ ಅಶ್ವಿ‌ನಿ ಪ್ರಶಾಂತ್‌, ಆರ್‌ಎಸ್‌ ಎಸ್‌ ಮುಖಂಡ ಕೃ. ನರಹರಿ, ಬಸಪ್ಪ ರೆಡ್ಡಿ, ವಿನಯ್‌ ಪಾಟೀಲ್‌, ಕವಿತ ವಸಂತ ಇತರರು ವೇದಿಕೆಯಲ್ಲಿದ್ದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು, ಶಾಲೆಗೆ ಶೇ.100ರಷ್ಟು ಫಲಿತಾಂಶ ತಂದುಕೊಡಲು ಕಾರಣರಾದ ಶಿಕ್ಷಕರು, ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next