ಮಂಗಳೂರು: ಮಂಡ್ಯದಲ್ಲಿ ನಡೆದ 87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ಪ್ರಾಧಾನ್ಯ ಸಿಕ್ಕಿಲ್ಲ ಎಂಬ ಕೂಗು ಯಕ್ಷಾಭಿಮಾನಿಗಳಿಂದ ಕೇಳಿಬರುತ್ತಿದೆ.
ನಾಡೋಜ ಡಾ| ಗೊ.ರೂ. ಚನ್ನಬಸಪ್ಪ ಸಮ್ಮೇಳನಾಧ್ಯಕ್ಷತೆಯಲ್ಲಿ ಡಿ.20ರಿಂದ 22ರ ವರೆಗೆ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು, 4 ಪ್ರಧಾನ ವೇದಿಕೆ ಸಹಿತ 8 ಸಮಾನಾಂತರ ವೇದಿಕೆಯಲ್ಲಿ ಸುಮಾರು 156 ಮಂದಿ ವಿದ್ವಾಂಸರಿಂದ 31 ವಿವಿಧ ಗೋಷ್ಠಿಗಳು ನಡೆದಿವೆ.
ಮಹಿಳೆ, ನೆಲ-ಜಲ, ಸಾಹಿತ್ಯ, ರಾಜಕೀಯದ ವಿವಿಧ ಆಯಾಮ, ಕೃಷಿ, ಕನ್ನಡ ಭಾಷೆ, ಕಾನೂನು, ನೀರಾವರಿ, ಚಲನಚಿತ್ರ, ಸವಾಲು ಸಹಿತ ವಿವಿಧ ಗೋಷ್ಠಿಗಳನ್ನು ಆಯೋಜನೆ ಮಾಡಲಾಗಿತ್ತು. ಆದರೆ ಈ ಹಿಂದಿನ ಪ್ರಸ್ತಾವಿತ ಸಂಪ್ರದಾಯದಂತೆ ಯಕ್ಷಗಾನ ಬಗ್ಗೆ ಯಾವುದೇ ಗೋಷ್ಠಿ, ವಿಚಾರ ಮಂಡನೆಗಳು ಸಮ್ಮೇಳನದಲ್ಲಿ ಆಯೋಜನೆಗೊಂಡಿಲ್ಲ.
ಮಂಡ್ಯದಲ್ಲಿ ನಡೆಯುತ್ತಿರುವುದು ಸಮಗ್ರ ಸಾಹಿತ್ಯ ಸಮ್ಮೇಳನವಾದ ಕಾರಣ ಇಲ್ಲಿ ಯಕ್ಷಗಾನಕ್ಕೆ ಸಂಬಂಧಿತ ಗೋಷ್ಠಿ ಆಯೋಜಿಸಬೇಕಿತ್ತು ಎನ್ನುತ್ತಾರೆ ಯಕ್ಷಾಸಕ್ತರು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಹಿಂದೆಯೂ ಯಕ್ಷಗಾನಕ್ಕೆ ಸಂಬಂಧಿಸಿ ಪಾರ್ತಿಸುಬ್ಬ ಅವರ ಬಗ್ಗೆ ಗೋಷ್ಠಿ ಆಯೋಜಿಸಲಾಗಿತ್ತು. ಇದರಿಂದ ಕನ್ನಡ ಬಹುದೊಡ್ಡ ಕವಿಗೆ ಪ್ರಾಶಸ್ತ್ಯ ಸಿಕ್ಕಂತಾಗಿತ್ತು. ಕೆಲವು ವರ್ಷಗಳ ಹಿಂದೆ ಮನು ಬಳಿಗಾರ್ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿದ್ದಾಗ ರಾಜ್ಯ ಸಮ್ಮೇಳನ ಆಯೋಜನೆ ಸಂದರ್ಭ ಯಕ್ಷಗಾನಕ್ಕೆ ಸಂಬಂಧಪಟ್ಟ ವಿಷಯ ಮಂಡನೆ ಬಗ್ಗೆ ಪ್ರಸ್ತಾವಿಸಿದ್ದರು. ಆದರೆ ಕಾರಣಾಂತರದಿಂದ ಆ ಸಮ್ಮೇಳನವೇ ರದ್ದುಗೊಂಡಿತ್ತು.
ಹಿರಿಯ ವಿದ್ವಾಂಸ ಪ್ರಭಾಕರ ಜೋಷಿ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಕನ್ನಡ ಸಾಹಿತ್ಯದ ಸಮಗ್ರತೆ ಅರ್ಥವಾಗಬೇಕಾದರೆ, ಅಧ್ಯಯನ ಪೂರ್ಣವಾಗಬೇಕಾದರೆ ಯಕ್ಷಗಾನ, ಯಕ್ಷಗಾನ ಛಂದಸ್ಸು, ಸಾಹಿತ್ಯ ವಿಭಾಗ, ಲಿಖೀತ ಸಾಹಿತ್ಯ, ಅರ್ಥ ಸಾಹಿತ್ಯಗಳ ಅಧ್ಯಯನ ಸಾಗಬೇಕು. ಇದು ವಿನಯದಿಂದಲೇ ಆಗಬೇಕಾದ ಕೆಲಸ. ಒಂದು ನಿರ್ದಿಷ್ಟ ಸಾಹಿತ್ಯ ಸಮ್ಮೇಳನಕ್ಕೆ ಆಗಬೇಕಾದ ವಿಷಯವನ್ನು ಇನ್ನೊಂದು ಬಾರಿ ಆಯೋಜನೆ ವೇಳೆ ಕೈ ಬಿಟ್ಟಿದ್ದು ಯಾಕೆ ಎಂದು ಪರಿಷತ್ತು ತಿಳಿಸಬೇಕಲ್ಲವೇ? ಇದೊಂದು ವೈಯಕ್ತಿಕ ಪ್ರಶ್ನೆಯಲ್ಲ, ಪ್ರಕಾರದ ಪ್ರಶ್ನೆಯಾಗಿದೆ. ಇದರೊಂದಿಗೆ ಕನ್ನಡ ಸಾಹಿತ್ಯದ ಬಹುದೊಡ್ಡ ವಿಭಾಗವನ್ನು ಕೈಬಿಟ್ಟಂತಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಉಲ್ಲೇಖೀತವಾದಾಗ ಅದರ ಘನತೆಯೇ ಬೇರೆ’ ಎಂದಿತ್ತಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಪ್ರತಿಕ್ರಿಯಿಸಿ “ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನ ಕುರಿತು ವಿಷಯ ಮಂಡನೆಗೆ ಅವಕಾಶ ನೀಡಬೇಕಿತ್ತು. ಈ ಹಿಂದೆ ಯಕ್ಷಗಾನ ಗೋಷ್ಠಿಯ ಬಗ್ಗೆ ಅವಕಾಶ ನೀಡುವುದಾಗಿ ಪ್ರಸ್ತಾವಿಸಲಾಗಿತ್ತು. ಆದರೆ ಇದು ಅನುಷ್ಠಾನಕ್ಕೆ ಬಂದಿಲ್ಲ’ ಎನ್ನುತ್ತಾರೆ.