Advertisement

Hyderabad: ಆಂಗ್ಲರಿಗೆ ಕಾದಿದೆ ಸ್ಪಿನ್‌ ಸವಾಲು

12:08 AM Jan 24, 2024 | Team Udayavani |

ಹೈದರಾಬಾದ್‌: ಭಾರತ ಸೇರಿದಂತೆ ಏಷ್ಯಾದ ಕ್ರಿಕೆಟ್‌ ಅಂಗಳಗಳೆಲ್ಲ ಸ್ಪಿನ್‌ಟ್ರ್ಯಾಕ್‌ಗೆ ಹೆಸರುವಾಸಿ. ಹೀಗಾಗಿ ಏಷ್ಯಾದಾಚೆಯ ತಂಡಗಳಿಗೆ ಇದು ಯಾವತ್ತೂ ಒಂದು ಸವಾಲು. ಗುರುವಾರ ಭಾರತ-ಇಂಗ್ಲೆಂಡ್‌ ನಡುವಿನ 5 ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಲಿದ್ದು, ಇವು ಕೂಡ ಸ್ಪಿನ್‌ ಪಿಚ್‌ಗಳಲ್ಲೇ ನಡೆಯುವುದರಲ್ಲಿ ಅನುಮಾನವಿಲ್ಲ
ಮೊದಲ ಟೆಸ್ಟ್‌ ತಾಣವಾದ ಹೈದರಾಬಾದ್‌ ಪಿಚ್‌ ಕುರಿತು ಪ್ರತಿಕ್ರಿಯಿಸಿರುವ ಕೋಚ್‌ ರಾಹುಲ್‌ ದ್ರಾವಿಡ್‌, ಇಂಗ್ಲೆಂಡ್‌ ಕ್ರಿಕೆಟಿಗರು ಸ್ಪಿನ್‌ ಟೆಸ್ಟ್‌ ಎದುರಿಸಬೇಕಿದೆ ಎಂದಿದ್ದಾರೆ.

Advertisement

“ಹೈದರಾಬಾದ್‌ ಪಿಚ್‌ ಕಂಡಾಗ ಇದು ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಗೋಚರಿಸುತ್ತದೆ. ಆದರೆ ಎಂದಿನಿಂದ ಈ ಟ್ರ್ಯಾಕ್‌ ತಿರುವು ಪಡೆಯಲಿದೆ ಎಂಬುದನ್ನು ಹೇಳಲಾಗದು. ಪಂದ್ಯ ಮುಂದುವರಿದಂತೆಲ್ಲ ಪಿಚ್‌ ಸ್ಪಿನ್ನಿಗೆ ನೆರವು ನೀಡುವ ಸಾಧ್ಯತೆ ಇದೆ’ ಎಂಬುದಾಗಿ ದ್ರಾವಿಡ್‌ ಹೇಳಿದ್ದಾರೆ.

ಇದಕ್ಕೆ ಇಂಗ್ಲೆಂಡ್‌ ತಂಡದ ವೇಗಿ ಮಾರ್ಕ್‌ ವುಡ್‌ ಪ್ರತಿಕ್ರಿಯಿಸಿದ್ದು, “ಪಿಚ್‌ ಹೇಗೆಯೇ ಇರಲಿ, ಇದಕ್ಕೆ ಹೊಂದಿಕೊಳ್ಳಬಲ್ಲ ಬೌಲಿಂಗ್‌ ಪಡೆಯನ್ನು ನಾವು ಹೊಂದಿದ್ದೇವೆ. ನಮ್ಮಲ್ಲಿ ಸ್ಪೆಷಲಿಸ್ಟ್‌ ಸ್ಪಿನ್ನರ್ ಇದ್ದಾರೆ, ಸೀಮರ್ ಇದ್ದಾರೆ. ಉತ್ತಮ ಬ್ಯಾಟರ್‌ಗಳನ್ನು ಹೊಂದಿದ್ದೇವೆ. ನಮ್ಮ ಇತ್ತೀಚಿನ ನಿರ್ವಹಣೆ ಕೂಡ ಗಮನಾರ್ಹ ಮಟ್ಟದಲ್ಲಿದೆ. ನಾವು ಯಾವುದೇ ರೀತಿಯ ಪಿಚ್‌ಗಳಿಗೂ ಹೊಂದಿಕೊಳ್ಳಬಲ್ಲೆವು’ ಎಂದಿದ್ದಾರೆ.

ರಾಹುಲ್‌ ಕೀಪಿಂಗ್‌ ನಡೆಸುವುದಿಲ್ಲ
ಇಂಗ್ಲೆಂಡ್‌ ಎದುರಿನ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೆ.ಎಲ್‌. ರಾಹುಲ್‌ ವಿಕೆಟ್‌ ಕೀಪಿಂಗ್‌ ನಡೆಸುವುದಿಲ್ಲ ಎಂಬುದಾಗಿ ಕೋಚ್‌ ರಾಹುಲ್‌ ದ್ರಾವಿಡ್‌ ಸ್ಪಷ್ಟಪಡಿಸಿದ್ದಾರೆ. ಇದರಿಂದ ಕೆ.ಎಸ್‌. ಭರತ್‌ ಮತ್ತು ಧ್ರುವ ಜುರೆಲ್‌ ನಡುವೆ ಕೀಪಿಂಗ್‌ ರೇಸ್‌ ನಡೆಯಲಿದೆ.

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕೆ.ಎಲ್‌. ರಾಹುಲ್‌ ಕೀಪಿಂಗ್‌ ನಡೆಸಿದ್ದರು. ಚುರುಕುಗತಿಯ ಕೀಪಿಂಗ್‌ ಮೂಲಕ ಗಮನ ಸೆಳೆದಿದ್ದರು.
“ಕೆ.ಎಲ್‌. ರಾಹುಲ್‌ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಯಲ್ಲಿ ಕೀಪಿಂಗ್‌ ನಡೆಸುವುದಿಲ್ಲ. ನಮ್ಮಲ್ಲಿ ಇನ್ನೂ ಇಬ್ಬರು ಕೀಪರ್‌ಗಳಿದ್ದಾರೆ. ಇದು 5 ಪಂದ್ಯಗಳ ಸುದೀರ್ಘ‌ ಸರಣಿ. ರಾಹುಲ್‌ ಕಳೆದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಉತ್ತಮ ಮಟ್ಟದ ಕೀಪಿಂಗ್‌ ನಡೆಸಿದ್ದರು. ಟೆಸ್ಟ್‌ ಸರಣಿ ಡ್ರಾಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂಬುದಾಗಿ ದ್ರಾವಿಡ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next