ಮುಂಬೈ: ಕಳೆದೆರಡು ತಿಂಗಳಿನಿಂದ ನಡೆಯುತ್ತಿದ್ದ ಏಷ್ಯಾ ಕಪ್ ಆತಿಥ್ಯ ವಿವಾದ ಬಹುತೇಕ ಅಂತ್ಯವಾಗುವ ಲಕ್ಷಣ ತೋರುತ್ತಿದೆ. ಪಾಕಿಸ್ತಾನ ಪ್ರಸ್ತಾಪ ನಡೆಸಿದ್ದ ಹೈಬ್ರಿಡ್ ಮಾಡೆಲ್ ಗೆ ಎಸಿಸಿ ಒಪ್ಪಿಗೆ ನೀಡಿದ್ದು, ಆದರೆ ತುಸು ಬದಲಾವಣೆ ಮಾಡಲಾಗಿದೆ. ಹೀಗಾಗಿ ಪಾಕಿಸ್ತಾನದಲ್ಲಿಯೂ ಏಷ್ಯಾ ಕಪ್ ಪಂದ್ಯಗಳು ನಡೆಯಲಿದೆ. ಆದರೆ ಭಾರತ ತಂಡ ಪಾಕಿಸ್ಥಾನಕ್ಕೆ ಪ್ರಯಾಣಿಸುತ್ತಿಲ್ಲ.
ಭಾರತ ತಂಡವು ಪಾಕ್ ಗೆ ಪ್ರಯಾಣಿಸದ ಕಾರಣ ಪ್ರಮುಖ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ, ಭಾರತದ ಪಂದ್ಯಗಳನ್ನು ಯುಎಇ ನಲ್ಲಿ ನಡೆಸುವ ಹೈಬ್ರಿಡ್ ಮಾಡೆಲ್ ನ್ನು ಪಿಸಿಬಿ ಪ್ರಸ್ತಾಪಿಸಿತ್ತು. ಆದರೆ ಇದಕ್ಕೆ ಭಾರತ ಸೇರಿದಂತೆ ಇತರ ದೇಶಗಳು ವಿರೋಧ ವ್ಯಕ್ತಪಡಿಸಿದ್ದವು. ಸಂಪೂರ್ಣ ಕೂಟವನ್ನು ಲಂಕಾದಲ್ಲಿ ಆಯೋಜಿಸಲು ಯೋಜನೆ ರೂಪಿಸಲಾಗಿತ್ತು.
ಇದೀಗ ನಡೆದ ಬೆಳವಣಿಗೆಯಲ್ಲಿ ಭಾರತ ಹೊರತುಪಡಿಸಿದ ನಾಲ್ಕು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸಿ ಉಳಿದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸುವ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಎಸಿಸಿ ಅಧ್ಯಕ್ಷ ಜಯ್ ಶಾ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:Monsoon Season; ಮಳೆಗಾಲದಲ್ಲಿ ಯಾವ ಆಹಾರ ಆರೋಗ್ಯಕ್ಕೆ ಒಳ್ಳೆಯದು…
“ಒಮಾನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ, ಎಸಿಸಿ ಕಾರ್ಯಕಾರಿ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಪಂಕಜ್ ಖಿಮ್ಜಿ ಅವರಿಗೆ, ಹೆಚ್ಚಿನ ದೇಶಗಳು ಹೈಬ್ರಿಡ್ ಮಾದರಿಯನ್ನು ಬಯಸದ ಕಾರಣ ಪರಿಹಾರವನ್ನು ಹುಡುಕಲು ವಹಿಸಲಾಯಿತು. ಆದರೆ ಈಗ ನಾಲ್ಕು ಪಂದ್ಯಗಳು (ಪಾಕಿಸ್ತಾನ vs ನೇಪಾಳ, ಬಾಂಗ್ಲಾದೇಶ vs ಅಫ್ಘಾನಿಸ್ತಾನ, ಅಫ್ಘಾನಿಸ್ತಾನ vs ಶ್ರೀಲಂಕಾ ಮತ್ತು ಶ್ರೀಲಂಕಾ vs ಬಾಂಗ್ಲಾದೇಶ) ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡು ಭಾರತ ಮತ್ತು ಪಾಕಿಸ್ತಾನದ ಆಟಗಳು ಮತ್ತು ಇತರ ಎಲ್ಲಾ ಸೂಪರ್ ಫೋರ್ ಪಂದ್ಯಗಳು ಪಲ್ಲೆಕೆಲೆ ಅಥವಾ ಗಾಲೆಯಲ್ಲಿ ನಡೆಯಲಿದೆ” ಎಂದು ಎಸಿಸಿ ಮಂಡಳಿಯ ಸದಸ್ಯರೊಬ್ಬರು ಪಿಟಿಐಗೆ ತಿಳಿಸಿದರು.
ಐಸಿಸಿ ಸಿಎಒ ಜೆಫ್ ಅಲಾರ್ಡೈಸ್ ಮತ್ತು ಚೇರ್ಮನ್ ಗ್ರೆಗ್ ಬಾರ್ಕ್ಲೇ ಕರಾಚಿಯಲ್ಲಿ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರನ್ನು ಭೇಟಿ ಮಾಡಿದ್ದಾರೆ. ಪಾಕಿಸ್ತಾನವು ವಿಶ್ವಕಪ್ ಗೆ ಬರಲು ಯಾವುದೇ ಷರತ್ತುಗಳನ್ನು ಹಾಕುವುದಿಲ್ಲ, ಆದರೆ ಹೋಸ್ಟಿಂಗ್ ಹಕ್ಕುಗಳನ್ನು ಹೊಂದಿರುವುದರಿಂದ ನಾಲ್ಕು ಏಷ್ಯಾ ಕಪ್ ಪಂದ್ಯಗಳು ತಮ್ಮ ದೇಶದಲ್ಲಿ ನಡೆಯಬೇಕು” ಎಂದು ಸೇಥಿ ಹೇಳಿದ್ದರು.