Advertisement

Champions Trophy: ಷರತ್ತಿನೊಂದಿಗೆ “ಹೈಬ್ರಿಡ್‌’ ಮಾದರಿಗೆ ಪಾಕ್‌ ಒಪ್ಪಿಗೆ

10:52 PM Nov 30, 2024 | Team Udayavani |

ಕರಾಚಿ: ಬಹಿಷ್ಕಾರ ಬೆದರಿಕೆಯಿಂದ ಹಿಂದೆ ಸರಿದಿರುವ ಪಾಕಿಸ್ಥಾನ ಕ್ರಿಕೆಟ್‌  ಮಂಡಳಿ (ಪಿಸಿಬಿ)ಯು ಷರತ್ತಿನೊಂದಿಗೆ ಮುಂದಿನ ವರ್ಷದ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯಕ್ಕಾಗಿ “ಹೈಬ್ರಿಡ್‌’ ಮಾದರಿ ಯನ್ನು ಸ್ವೀಕರಿಸಲು ತನ್ನ ಒಪ್ಪಿಗೆಯಿದೆ ಎಂದು ಐಸಿಸಿಗೆ ತಿಳಿಸಿದೆ.

Advertisement

2031ರ ವರೆಗೆ ಭಾರತದಲ್ಲಿ ನಡೆಯಲಿರುವ ಎಲ್ಲ ಕೂಟಗಳಿಗೂ ಇದೇ ರೀತಿಯ ವ್ಯವಸ್ಥೆಗಳಿಗೆ ವಿಶ್ವ ಮಂಡಳಿ ಅನುಮತಿ ನೀಡಿದರೆ “ಹೈಬ್ರಿಡ್‌’ ಮಾದರಿಯನ್ನು ಒಪ್ಪಿಕೊಳ್ಳುವೆ ಎಂಬ ಷರತ್ತನ್ನು ಪಿಸಿಬಿ ವಿಧಿಸಿದೆ.

ಸುರಕ್ಷತೆಯ ದೃಷ್ಟಿಯಿಂದ ದುಬಾೖ  ಯಲ್ಲಿ ನಡೆಯುವ ಪಾಕಿಸ್ಥಾನ ವಿರು ದ್ಧದ ಪಂದ್ಯ ಸಹಿತ ಭಾರತ ಆಡುವ ಎಲ್ಲ ಪಂದ್ಯಗಳಲ್ಲಿ ಸಿಗುವ ವಾರ್ಷಿಕ ಆದಾಯದಲ್ಲಿ ಹೆಚ್ಚಿನ ಪಾಲನ್ನು ನೀಡುವ ಷರತ್ತನ್ನು ಪಿಸಿಬಿ ವಿಧಿಸಿದೆ ಎಂದು ಪಿಸಿಬಿಯ ಉನ್ನತ ಮೂಲಗಳು ತಿಳಿಸಿವೆ. ಈ ಷರತ್ತಿಗೆ ಐಸಿಸಿ ಒಪ್ಪಿಗೆ ಸೂಚಿಸಿದರೆ “ಹೈಬ್ರಿಡ್‌’ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ ಆಯೋಜಿಸಲು ಪಾಕಿಸ್ಥಾನ ಬದ್ದವಾಗಿದೆ ಎಂದು ತಿಳಿದು ಬಂದಿದೆ.

ತಟಸ್ಥ ತಾಣದಲ್ಲಿ ಪಂದ್ಯಗಳನ್ನು ಆಯೋಜಿಸುವ ಭಾರತದ ಆಗ್ರಹಕ್ಕೆ ಒಪ್ಪಿಗೆ ನೀಡಿದರೆ ಮತ್ತು ಆತಿಥ್ಯ ಹಕ್ಕುಗಳನ್ನು ಪೂರ್ಣವಾಗಿ ನೀಡದಿದ್ದರೆ ಚಾಂಪಿಯನ್ಸ್‌ ಟ್ರೋಫಿಯನ್ನು ಬಹಿಷ್ಕರಿಸುವುದಾಗಿ ಈ ಮೊದಲು ಪಿಸಿಬಿ ಬೆದರಿಕೆ ಹಾಕಿತ್ತು.

ಭವಿಷ್ಯದಲ್ಲಿ ಐಸಿಸಿಯ ಎಲ್ಲ ಕೂಟಗಳು ಇದೇ ಮಾದರಿಯಲ್ಲಿ ನಡೆಯುತ್ತವೆ ಎಂಬುದನ್ನು ಐಸಿಸಿ ಒಪ್ಪಿಕೊಂಡರೆ ಚಾಂಪಿಯನ್ಸ್‌ ಟ್ರೋಫಿ ಯನ್ನು ಹೈಬ್ರಿಡ್‌ ಮಾದರಿಯಲ್ಲಿ ಆಯೋಜಿಸಲು ಒಪ್ಪಿಕೊಳ್ಳುವು ದಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ಹೇಳಿದ್ದಾರೆ.

Advertisement

ಇದರಂತೆ ಭವಿಷ್ಯದಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಕೂಟಗಳ ಪಂದ್ಯಗಳಲ್ಲಿ ಆಡಲು ಪಾಕಿಸ್ಥಾನ ಭಾರತಕ್ಕೆ ಬರುವುದಿಲ್ಲ ಎಂದು ಪಿಸಿಬಿ ಮೂಲಗಳು ತಿಳಿಸಿವೆ.

2031ರ ವರೆಗೆ ಭಾರತವು ಮೂರು ಐಸಿಸಿ ಪುರುಷರ ಕೂಟಗಳ ಆತಿಥ್ಯ ವಹಿಸುತ್ತಿದೆ. 2026ರ ಟಿ20 ವಿಶ್ವಕಪ್‌ ಅನ್ನು ಶ್ರೀಲಂಕಾ ಜತೆ ಮತ್ತು 2029ರ ಚಾಂಪಿಯನ್ಸ್‌ ಟ್ರೋಫಿ ಮತ್ತು 2031ರ ಏಕದಿನ ವಿಶ್ವಕಪ್‌ ಅನ್ನು ಬಾಂಗ್ಲಾದೇಶದ ಜತೆ ಜಂಟಿಯಾಗಿ ಭಾರತ ಆಯೋಜಿಸುತ್ತಿದೆ. ಈ ಎರಡು ಪ್ರಮುಖ ಕೂಟಗಳಿಗೆ ಬಾಂಗ್ಲಾ ದೇಶ ಮತ್ತು ಶ್ರೀಲಂಕಾ ಸಹ ಆತಿಥ್ಯ ವಹಿಸಿರುವ ಕಾರಣ ಪಾಕಿಸ್ಥಾನ ಪಂದ್ಯಗಳನ್ನು ಆಡಲು ಭಾರತಕ್ಕೆ ಆಗಮಿಸುವ ಅಗತ್ಯ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next