Advertisement

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

01:39 AM Dec 18, 2024 | Team Udayavani |

ಬ್ರಿಸ್ಬೇನ್‌: ಆರಂಭಕಾರ ಕೆ.ಎಲ್‌.ರಾಹುಲ್‌, ಆಲ್‌ರೌಂಡರ್‌ ರವೀಂದ್ರ ಜಡೇಜ ಮತ್ತು ಅಂತಿಮ ಜೋಡಿಯಾದ ಜಸ್‌ಪ್ರೀತ್‌ ಬುಮ್ರಾ-ಆಕಾಶ್‌ ದೀಪ್‌ ಅವರ ಬ್ಯಾಟಿಂಗ್‌ ಸಾಹಸದಿಂದ ಭಾರತ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾಗಿದೆ. ತಂಡಕ್ಕೀಗ ದೊಡ್ಡದೊಂದು ರಿಲೀಫ್ ಸಿಕ್ಕಿದ್ದು, ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಹಾದಿಯೊಂದು ತೆರೆಯಲ್ಪಟ್ಟಿದೆ.

Advertisement

ಮಂಗಳವಾರದ ಆಟಕ್ಕೂ ಮಳೆಯಿಂದ ಸಾಕಷ್ಟು ಅಡಚಣೆಯಾಯಿತು. ಜತೆಗೆ ಪ್ರಮುಖ ವೇಗಿ ಜೋಶ್‌ ಹೇಝಲ್‌ವುಡ್‌ ಸ್ನಾಯು ಸೆಳೆತದಿಂದ ಬೌಲಿಂಗ್‌ನಿಂದ ಹಿಂದೆ ಸರಿದರು. ಭಾರತಕ್ಕೆ ಈ ಎರಡೂ ಅಂಶಗಳು ಪೂರಕವಾಗಿ ಪರಿಣಮಿಸಿದವು. 51ಕ್ಕೆ 4 ವಿಕೆಟ್‌ ಕಳೆದುಕೊಂಡ ಸ್ಥಿತಿಯಲ್ಲಿದ್ದ ಭಾರತ, 4ನೇ ದಿನದ ಕೊನೆಯಲ್ಲಿ 9 ವಿಕೆಟಿಗೆ 252 ರನ್‌ ಗಳಿಸಿದೆ. ಇನ್ನೂ ಒಂದು ಇನ್ನಿಂಗ್ಸ್‌ ಪೂರ್ತಿಗೊಂಡಿಲ್ಲ.

ಬುಧವಾರ ಪಂದ್ಯದ ಅಂತಿಮ ದಿನ. ಆಸ್ಟ್ರೇಲಿಯಕ್ಕೆ ದೊಡ್ಡ ಮೊತ್ತದ ಇನ್ನಿಂಗ್ಸ್‌ ಮುನ್ನಡೆ ಲಭಿಸುವುದರಲ್ಲಿ ಅನುಮಾನವಿಲ್ಲ. ಬಳಿಕ ದ್ವಿತೀಯ ಸರದಿಯಲ್ಲಿ ಪಟಪಟನೆ ರನ್‌ ಪೇರಿಸಿ, ಕೊನೆಯ 2 ಅವಧಿಯಲ್ಲಿ ಭಾರತಕ್ಕೆ ಟಾರ್ಗೆಟ್‌ ಒಂದನ್ನು ನೀಡುವ ಎಲ್ಲ ಸಾಧ್ಯತೆ ಇದೆ. ಆಗ ರೋಹಿತ್‌ ಪಡೆ ಎಚ್ಚರಿಕೆಯ ಬ್ಯಾಟಿಂಗ್‌ ಪ್ರದರ್ಶಿಸಬೇಕಾದುದು ಅನಿವಾರ್ಯ. ಇಲ್ಲಿ ಎಡವಟ್ಟು ಮಾಡಿಕೊಂಡರೆ ಕಷ್ಟ. ಆದರೆ ಪದೇಪದೆ ಮಳೆ ಸುರಿಯುತ್ತ ಇದ್ದರೆ ಈ ಯೋಜನೆ ಕಾರ್ಯಗತಗೊಳ್ಳುವುದು ಅಸಾಧ್ಯ. ಬುಧವಾರವೂ ಭಾರೀ ಮಳೆಯ ಮುನ್ಸೂಚನೆ ಇದೆ. ಆಗ ಪಂದ್ಯ ನೀರಸವಾಗಿ ಡ್ರಾಗೊಳ್ಳುವುದು ಖಚಿತ.

ಅಂತಿಮ ವಿಕೆಟಿಗೊಂದು ಸಾಹಸ
ಭಾರತ ಫಾಲೋಆನ್‌ನಿಂದ ಪಾರಾಗಲು 246 ರನ್‌ ಗಳಿಸಬೇಕಿತ್ತು. ರಾಹುಲ್‌ ಮತ್ತು ಜಡೇಜ ದಿಟ್ಟ ಬ್ಯಾಟಿಂಗ್‌ ಹೋರಾಟವೊಂದನ್ನು ನಡೆಸಿ ತಂಡವನ್ನು ಅಪಾಯದಿಂದ ಪಾರುಮಾಡಲು ಶಕ್ತಿಮೀರಿ ಪ್ರಯತ್ನಿಸಿದರು. ಆದರೂ ಸ್ಕೋರ್‌ 213ಕ್ಕೆ ತಲುಪಿದಾಗ 9ನೇ ವಿಕೆಟ್‌ ರೂಪದಲ್ಲಿ ಜಡೇಜ ಪೆವಿಲಿಯನ್‌ ಸೇರಿಕೊಂಡರು. ಭಾರತ ಮರಳಿ ಬ್ಯಾಟಿಂಗ್‌ಗೆ ಇಳಿಯುವುದು ಬಹುತೇಕ ಖಚಿತ ಎಂಬಂಥ ಸ್ಥಿತಿ ನಿರ್ಮಾಣವಾಯಿತು. ಇಂಥದೊಂದು ಸಂಕಟಮಯ ಸನ್ನಿವೇಶದಲ್ಲಿ ಬುಮ್ರಾ ಮತ್ತು ಆಕಾಶ್‌ ದೀಪ್‌ ಕ್ರೀಸ್‌ ಕಚ್ಚಿಕೊಂಡು ನಿಂತ ರೀತಿ ನಿಜಕ್ಕೂ ಪ್ರಶಂಸನೀಯ. ಕ್ರಿಕೆಟಿನ “ಗ್ರೇಟ್‌ ಎಸ್ಕೇಪ್‌’ಗೆ ಇದೊಂದು ಉತ್ತಮ ದೃಷ್ಟಾಂತವಾಗಿದೆ.

Advertisement

ಸಾಮಾನ್ಯವಾಗಿ ಹೀಗೆ ಬಂದು ಹಾಗೆ ಹೋಗುವ ಬುಮ್ರಾ-ಆಕಾಶ್‌ ದೀಪ್‌ ತುಂಬು ಆತ್ಮವಿಶ್ವಾಸದಿಂದ ಆಡಿ ತಂಡದ ರಕ್ಷಣೆಗೆ ಟೊಂಕ ಕಟ್ಟಿದರು. ಅಂತಿಮ ವಿಕೆಟಿಗೆ 54 ಎಸೆತಗಳಿಂದ 39 ರನ್‌ ಒಟ್ಟುಗೂಡಿಸಿ ಭಾರತವನ್ನು ಬಚಾವ್‌ ಮಾಡಿದರು. ಆಕಾಶ್‌ ದೀಪ್‌ 31 ಎಸೆತಗಳಿಂದ 27 ರನ್‌ (2 ಬೌಂಡರಿ, 1 ಸಿಕ್ಸರ್‌) ಮತ್ತು ಬುಮ್ರಾ 27 ಎಸೆತಗಳಿಂದ 10 ರನ್‌ (1 ಸಿಕ್ಸರ್‌) ಮಾಡಿ ಆಡುತ್ತಿದ್ದಾರೆ.

ರಾಹುಲ್‌, ಜಡೇಜ ರಕ್ಷಣೆ
ಅಗ್ರ ಕ್ರಮಾಂಕದ ಬ್ಯಾಟರ್‌ಗಳೆಲ್ಲ ಆಸೀಸ್‌ ವೇಗವನ್ನು ತಾಳದೆ ಉದುರಿ ಹೋಗುತ್ತಿದ್ದ ವೇಳೆ ರಾಹುಲ್‌ ತಂಡದ ಪಾಲಿನ ಆಪತಾºಂಧವನಾಗಿ ಮೂಡಿಬಂದರು. ಇವರ ಬ್ಯಾಟಿಂಗ್‌ 43ನೇ ಓವರ್‌ ತನಕ ಸಾಗಿತು. ಕಾಂಗರೂ ದಾಳಿಯನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಿ ಶತಕದ ಸಾಧ್ಯತೆಯೊಂದನ್ನು ತೆರೆದಿರಿಸಿದರು. ಆದರೆ ಇದು ಸಾಧ್ಯವಾಗಲಿಲ್ಲ. 139 ಎಸೆತಗಳಿಂದ 84 ರನ್‌ (8 ಬೌಂಡರಿ) ಮಾಡಿ ಲಿಯಾನ್‌ ಎಸೆತದಲ್ಲಿ ಔಟಾದರು. ಇದು ರಾಹುಲ್‌ ಅವರ 17ನೇ ಅರ್ಧ ಶತಕವಾಗಿದೆ.

ನಾಯಕ ರೋಹಿತ್‌ ಶರ್ಮ (10) ಮತ್ತೂಂದು ನೀರಸ ಪ್ರದರ್ಶನ ನೀಡಿ ತಂಡದ ಸಂಕಟವನ್ನು ಬಿಗಡಾಯಿಸಿದರು. ಈ ಹಂತದಲ್ಲಿ ಒಟ್ಟುಗೂಡಿದ ರಾಹುಲ್‌-ಜಡೇಜ 6ನೇ ವಿಕೆಟಿಗೆ 67 ರನ್‌ ಪೇರಿಸಿದರು. ಸರಣಿಯಲ್ಲಿ ಮೊದಲ ಪಂದ್ಯವಾಡಿದ ಜಡೇಜ ಕೊಡುಗೆ 77 ರನ್‌ (123 ಎಸೆತ, 7 ಬೌಂಡರಿ, 1 ಸಿಕ್ಸರ್‌). ಇದು ಅವರ 22ನೇ ಅರ್ಧ ಶತಕ. ನಿಧಾನ ಗತಿಯ ಆಟಕ್ಕೆ ಒತ್ತು ಕೊಟ್ಟ ನಿತೀಶ್‌ ಕುಮಾರ್‌ ರೆಡ್ಡಿ 61 ಎಸೆತಗಳಿಂದ 16 ರನ್‌ ಮಾಡಿದರು.

ಹೇಝಲ್‌ವುಡ್‌ ಗಾಯಾಳು
ಬಲಗಾಲಿನ ಸ್ನಾಯು ಸೆಳೆತಕ್ಕೆ ಸಿಲುಕಿರುವ ಆಸ್ಟ್ರೇಲಿ ಯದ ವೇಗಿ ಜೋಶ್‌ ಹೇಝಲ್‌ವುಡ್‌ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದಲ್ಲಿನ್ನು ಕಣಕ್ಕಿಳಿಯುವುದಿಲ್ಲ. ಹಾಗೆಯೇ ಸರಣಿಯ ಉಳಿದೆರಡು ಟೆಸ್ಟ್‌ ಪಂದ್ಯಗಳಲ್ಲಿ ಆಡುವ ಸಾಧ್ಯತೆ ತೀರಾ ಕಡಿಮೆ ಎಂದು “ಕ್ರಿಕೆಟ್‌ ಆಸ್ಟ್ರೇಲಿಯ’ ತಿಳಿಸಿದೆ.

ಮಂಗಳವಾರದ ಆಟದಲ್ಲಿ ಹೇಝಲ್‌ವುಡ್‌ ಕೇವಲ ಒಂದು ಓವರ್‌ ಎಸೆದು ಅಂಗಳದಿಂದ ಹೊರನಡೆದರು. ಬಳಿಕ ಸ್ಕ್ಯಾನಿಂಗ್‌ಗೆ ಒಳಗಾಗಿದ್ದು, ಇದರ ವರದಿ ಇನ್ನಷ್ಟೇ ಕೈಸೇರಬೇಕಿದೆ. ಹೇಝಲ್‌ವುಡ್‌ ಇದಕ್ಕೂ ಹಿಂದಿನ ಅಡಿಲೇಡ್‌ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಪಾರ್ಶ್ವ ಸ್ನಾಯು ಸೆಳೆತದಿಂದ ಹೊರಗುಳಿದಿದ್ದರು.

ಸಂಕಿಪ್ತ ಸ್ಕೋರ್‌:
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌ 445

ಭಾರತ ಪ್ರಥಮ ಇನ್ನಿಂಗ್ಸ್‌ (9 ವಿಕೆಟಿಗೆ) 252
ಕೆ.ಎಲ್‌. ರಾಹುಲ್‌ (84) ರವೀಂದ್ರ ಜಡೇಜ (77), ಆಕಾಶ್‌ ದೀಪ್‌ (27), ಜಸ್‌ಪ್ರೀತ್‌ ಬುಮ್ರಾ (10)

Advertisement

Udayavani is now on Telegram. Click here to join our channel and stay updated with the latest news.

Next