Advertisement

Champions Trophy: ಹೈಬ್ರಿಡ್‌ ಮಾದರಿ ಕೂಟ ಆಯೋಜನೆಗೆ ಮೂರು ಷರತ್ತು ಹಾಕಿದ ಪಾಕ್:‌ ಏನದು?

09:44 AM Dec 01, 2024 | Team Udayavani |

ದುಬೈ: ಮುಂದಿನ ಫೆಬ್ರವರಿಯಲ್ಲಿ ನಡೆಯಬೇಕಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕೂಟವು ಹೈಬ್ರಿಡ್‌ ಮಾದರಿಯಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಭಾರತದ ಪಂದ್ಯಗಳು ದುಬೈನಲ್ಲಿ ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಸಲು ಪಾಕಿಸ್ತಾನ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

Advertisement

ಪಾಕಿಸ್ತಾನಕ್ಕೆ ಭಾರತವು ಪ್ರಯಾಣಿಸದ ಕಾರಣದಿಂದ ಚಾಂಪಿಯನ್ಸ್‌ ಟ್ರೋಫಿ ಆಯೋಜನೆ ಅನಿಶ್ಚಿತತೆಯಿಂದ ಕೂಡಿತ್ತು. ಹೈಬ್ರಿಡ್‌ ಮಾದರಿಯಲ್ಲಿ ಕೂಟ ನಡೆಸಲು ಭಾರತ ಸೂಚಿಸಿತ್ತು. ಐಸಿಸಿ ಕೂಡಾ ಇದೇ ವಿಚಾರವನ್ನು ಪಿಸಿಬಿ ಮುಂದಿಟ್ಟಿತ್ತು. ಆದರೆ ಪಿಸಿಬಿ ಇದಕ್ಕೆ ಅಪಸ್ವರ ಎಬ್ಬಿಸಿತ್ತು. ಆದರೆ ಕೊನೆಗೂ ಷರತ್ತುಗಳೊಂದಿಗೆ ಹೈಬ್ರಿಡ್‌ ಮಾದರಿಯಲ್ಲಿ ಕೂಟ ನಡೆಸಲು ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.

ಹೈಬ್ರಿಡ್‌ ಮಾದರಿಯಲ್ಲಿ ಕೂಟ ನಡೆದರೆ, ಭಾರತ ಆಡುವ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯುವ ನಿರೀಕ್ಷೆಯಿದೆ. ಹೀಗಾಗಿ, ಸುರಕ್ಷತೆಯ ದೃಷ್ಟಿಯಿಂದ ದುಬೈನಲ್ಲಿ ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯ ಸಹಿತ ಭಾರತ ಆಡುವ ಎಲ್ಲ ಪಂದ್ಯಗಳಲ್ಲಿ ಸಿಗುವ ವಾರ್ಷಿಕ ಆದಾಯದಲ್ಲಿ ಹೆಚ್ಚಿನ ಪಾಲನ್ನು ನೀಡುವ ಷರತ್ತನ್ನೂ ಪಿಸಿಬಿಯು ಐಸಿಸಿಗೆ ವಿಧಿಸಿದೆ ಎಂದು ಪಿಸಿಬಿಯ ಉನ್ನತ ಮೂಲಗಳು ತಿಳಿಸಿವೆ. ಈ ಷರತ್ತಿಗೆ ಐಸಿಸಿ ಒಪ್ಪಿಗೆ ಸೂಚಿಸಿದರೆ “ಹೈಬ್ರಿಡ್‌’ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ ಆಯೋಜಿಸಲು ಪಾಕಿಸ್ತಾನ ಬದ್ಧವಾಗಿದೆ ಎಂದು ತಿಳಿದು ಬಂದಿದೆ.

ಹೈಬ್ರಿಡ್ ಚಾಂಪಿಯನ್ಸ್ ಟ್ರೋಫಿಯನ್ನು ಒಪ್ಪಿಕೊಳ್ಳಲು ಪಿಸಿಬಿ ಮುಂದಿಟ್ಟಿರುವ ಷರತ್ತುಗಳೇನು?

ಭಾರತ ಕ್ರಿಕೆಟ್ ತಂಡವನ್ನು ಒಳಗೊಂಡ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಇದು ಗುಂಪು ಹಂತದ ಪಂದ್ಯಗಳು ಮತ್ತು ಸೆಮಿ-ಫೈನಲ್ ಮತ್ತು ಫೈನಲ್ (ಅರ್ಹತೆ ಪಡೆದರೆ) ಒಳಗೊಂಡಿರುತ್ತದೆ.

Advertisement

ಭಾರತವು ಸ್ಪರ್ಧೆಯ ಗುಂಪು ಹಂತಗಳನ್ನು ಮೀರಿ ಮುನ್ನಡೆಯಲು ವಿಫಲವಾದರೆ, ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳು ನಡೆಯಲಿದೆ.

ಭಾರತವು ಭವಿಷ್ಯದಲ್ಲಿ ಯಾವುದೇ ಐಸಿಸಿ ಕಾರ್ಯಕ್ರಮಗಳನ್ನು ಆಯೋಜಿಸಿದರೆ, ಪಾಕಿಸ್ತಾನವು ತಟಸ್ಥ ಸ್ಥಳಗಳಲ್ಲಿ ತನ್ನ ಪಂದ್ಯಗಳನ್ನು ಆಡುತ್ತದೆ.

2031ರವರೆಗೆ ಭಾರತದಲ್ಲಿ ಆಗಬೇಕಿದೆ 3 ಐಸಿಸಿ ಕೂಟ

2031ರ ವರೆಗೆ ಭಾರತವು ಮೂರು ಐಸಿಸಿ ಪುರುಷರ ಕೂಟಗಳ ಆತಿಥ್ಯ ವಹಿಸುತ್ತಿದೆ. 2026ರ ಟಿ20 ವಿಶ್ವಕಪ್‌ ಅನ್ನು ಶ್ರೀಲಂಕಾ ಜತೆ ಮತ್ತು 2029ರ ಚಾಂಪಿಯನ್ಸ್‌ ಟ್ರೋಫಿ ಮತ್ತು 2031ರ ಏಕದಿನ ವಿಶ್ವಕಪ್‌ ಅನ್ನು ಬಾಂಗ್ಲಾದೇಶದ ಜತೆ ಜಂಟಿಯಾಗಿ ಭಾರತ ಆಯೋಜಿಸುತ್ತಿದೆ. ಈ ಕೂಟಗಳಿಗೆ ಪಾಕ್‌ ತಂಡ ಭಾರತಕ್ಕೆ ಬರುವ ಸಾಧ್ಯತೆ ಕಡಿಮೆ. ಈ ಎರಡು ಪ್ರಮುಖ ಕೂಟಗಳಿಗೆ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸಹ ಆತಿಥ್ಯ ವಹಿಸಿರುವ ಕಾರಣ ಪಾಕಿಸ್ತಾನ ಪಂದ್ಯಗಳನ್ನು ಆಡಲು ಭಾರತಕ್ಕೆ ಆಗಮಿಸುವ ಅಗತ್ಯ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next