Advertisement
ನಾಗರೀಕತೆ ಬೆಳೆದು ಬಂದಂತೆಲ್ಲಾ ಸಮುದಾಯಗಳು, ಪಂಥಗಳು ಜನ್ಮ ತಳೆದು ಮೂಲತಃ ಯಾವುದೇ ತೆರನಾಗಿ ಹಂಚಿ ಹೋಗದಿದ್ದರೂ ಮಾನವನ ಭ್ರಮೆಗೆ ವಿವಿಧ ಹೆಸರಿನಿಂದ ವಿವಿಧ ಪಂಥದಲ್ಲಿ ನೆಲೆ ನಿಂತ ದೇವರು ನಿಜಕ್ಕೂ ಶಕ್ತಿಯ ಸಾಗರವೇನು? ಕಣಕಣದಲ್ಲಿ ಪಸರಿಸಿದ್ದಾನೆ, ಆತ ಸರ್ವವ್ಯಾಪಿ, ಸರ್ವಶಕ್ತ ಎಂದು ಆತನ ಮಹಿಮೆಯನ್ನು ಓದಲು, ಕೇಳಲು ದೊರೆತರೂ ಆತನನ್ನು ಕಂಡವರಿಲ್ಲ.
Related Articles
Advertisement
ಈ ಮಾತು ಯಾವುದೇ ಧರ್ಮ, ಜಾತಿ, ಮತ ಅಥವಾ ಪಂಥಗಳ ಜನರಿಗೆ ಮೀಸಲಲ್ಲ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಇದೇ ತೆರನಾದ ಚಿತ್ರಣವನ್ನಾ ಅಥವಾ ಮನಸ್ಥಿತಿಯನ್ನಾ ಕಾಣಬಹುದು. ಆತ ತಿನ್ನೋ ಆಹಾರ ಬೇರೆ ಇರಬಹುದು, ಅನುಸರಿಸೋ ಧರ್ಮ ಬೇರೆ ಇರಬಹುದು, ಪರಸ್ಪರ ಸಂಹವನಕ್ಕಾಗಿ ಮಾತನಾಡುವ ಭಾಷೆ ಬೇರೆ ಇರಬಹುದು ಆದರೆ ದಿನದಾಂತ್ಯಕ್ಕೆ ಆತ ಬಯಸೋದು ಪರಮಾತ್ಮನನ್ನೇ (ಚೈತನ್ಯ, ಆನಂದ, ಶಾಂತಿ ಅಥವಾ ನೆಮ್ಮದಿ)
ಭಗವಂತನ ಸೃಷ್ಟಿಯಲ್ಲಿ ಒಂದು ಅತ್ಯದ್ಭುತ ಸಾಧನವೆಂದರೆ ಅದು ಮಾನವ ಶರೀರ. ಮೂಲತಃ ಮಾನವನಿಂದ ಹಿಡಿದು ಸೃಷ್ಟಿಯ ಸಕಲ ಜೀವ ಚರಾಚರಗಳೆಲ್ಲವೂ ಆತನ ಶಕ್ತಿಯ ರೂಪಕಗಳು. ಇಂತಹ ಈ ಅದ್ಭುತ ಮಾನವ ಶರೀರ ರಾಸಾಯನಿಕ ಪ್ರಕ್ರಿಯೆಗಳ ಗೂಡು. ಹಾಗಾದರೆ ಶರೀರ ರೋಗಗ್ರಸ್ಥವಾಗೋದಕ್ಕೆ ಮೂಲ ಕಾರಣ ಯಾವುದು ಅನ್ನೋದು ಸಹಜವಾಗಿ ಮೂಡೋ ಪ್ರಶ್ನೆ. ಮೇಲೆ ಹೇಳಿದಂತೆ ಶರೀರವೆಂಬ ಈ ರಾಸಾಯನಿಕ ಕ್ರಿಯೆಗಳ ಗೂಡಿನಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ವ್ಯತಿಕ್ರಮ ಅಥವಾ ವ್ಯತ್ಯಯ ಉಂಟಾದಾಗ ಶರೀರ ರೋಗಗ್ರಸ್ಥವಾಗುವುದು.
ಆರೋಗ್ಯ ಎಂದ ಮೇಲೆ ಅದು ಬರೇ ದೈಹಿಕ ಆರೋಗ್ಯಕ್ಕೆ ಸೀಮಿತವಲ್ಲ ದೈಹಿಕ ಕ್ಷಮತೆ ಅಥವಾ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಕ್ಷಮತೆ ಅಥವಾ ಆರೋಗ್ಯವೂ ಅಷ್ಟೇ ಮುಖ್ಯ. ಏಕೆಂದರೆ ಸುದೃಢ ಶರೀರದಲ್ಲಿ ಇವೆರಡೂ ತಮ್ಮದೇ ರೀತಿಯಲ್ಲಿ ಆದ ಪಾತ್ರ ನಿರ್ವಹಿಸುತ್ತವೆ. ಇಂತಹ ಈ ಅದ್ಭುತ ಸಾಧನ ರೋಗಗ್ರಸ್ಥವಾಗದಂತೆ ತಡೆಯೋ ಸಾಮರ್ಥ್ಯವಿರೋದು ಶರೀರದಲ್ಲಿ ಉತ್ಪತ್ತಿಯಾಗೋ ರೋಗ ನಿರೋಧಕ ಶಕ್ತಿಯಿಂದ. ಶಕ್ತಿಯ ಮಾತು ಬಂದಾಗ ಶರೀರಕ್ಕೆ ಮುಖ್ಯವಾಗಿ ಬೇಕಾದದ್ದು ಆಹಾರ.
ಆಹಾರ ಎಂದ ಕೂಡಲೇ ನಾವು ಹಸಿವನ್ನಾ ನೀಗಿಸೋ ಸಲುವಾಗಿ ತಿನ್ನುವಂತಹ ಆಹಾರ ಮಾತ್ರ ಆಹಾರವಲ್ಲ ಬದಲಾಗಿ ಕಣ್ಣು, ಕಿವಿ, ಮೂಗು ನಾಲಗೆಯಿಂದ ಏನನ್ನು ಗ್ರಹಿಸುತ್ತೇವೆಯೋ ಅದು ಕೂಡ ಆಹಾರದ ಸಾಲಿಗೆ ಸೇರುತ್ತದೆ. ಆಹಾರ ಯಾವತ್ತೂ ಪೌಷ್ಟಿಕಾಂಶದಿಂದ ಕೂಡಿರಬೇಕು. ಪಚನ ಕ್ರಿಯೆಗೆ ತೊಡಕು ಉಂಟು ಮಾಡದಂತಿರಬೇಕು. ದೇವರ ನಾಮಸ್ಮರಣೆಯೂ ಮನುಷ್ಯನ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಮರ್ಥ್ಯವುಳ್ಳ ಆಹಾರವೇ.
ಧರ್ಮ ಯಾವುದೇ ಇರಲಿ ಆದರೆ ದೇವರ ನಾಮಸ್ಮರಣೆಗೆ ಅದರದ್ದೇ ಆದ ಮಹತ್ವವಿದೆ. ಏಕೆಂದರೆ ಅದು ಧನಾತ್ಮಕತೆಯನ್ನು ತುಂಬಿ ಜೀವನದಲ್ಲಿ ಯೋಗ್ಯ ಸಮಯದಲ್ಲಿ ಯೋಗ್ಯ ಹೆಜ್ಜೆಯನ್ನಾ ಇರಿಸಿ ದಿಟ್ಟ ರೀತಿಯಲ್ಲಿ ಮುನ್ನಡೆಯಲು ಸಹಾಯ ಮಾಡುವಂತದ್ದು. ನಿರಾಕಾರ ಶಕ್ತಿ ಅಂದ್ರೆ ದೇವರ ಪ್ರತಿಯೊಂದು ನಾಮದಲ್ಲೂ ಅಂದ್ರೆ ಹೆಸರಿನಲ್ಲೂ ಆತನ ಮಹಿಮೆಯ ಆತನ ಗುಣದ ಪರಿಚಯವಿದೆ.
ಅವುಗಳೆಲ್ಲವೂ ಅರ್ಥ ಭರಿತವಾದವುಗಳು. ಇಂತಹ ನಾಮಸ್ಮರಣೆಗಳು ಮನುಷ್ಯ ಯೋಚನೆಯ ಲಹರಿಯನ್ನೇ ಬದಲಿಸಿ ಮಾನಸಿಕ ಸ್ವಾಸ್ಥ್ಯವನ್ನು ಉಚ್ಛ ಸ್ತರಕ್ಕೆ ಕೊಂಡೊಯ್ದು ಉನ್ನತ ರೀತಿಯಲ್ಲಿ ಚೈತನ್ಯ ಭರಿತರಾಗಿ ಜೀವನ ನಡೆಸಲು ಸಹಾಯ ಮಾಡುವ ಶಕ್ತಿಯ ಸಾಧನವಾಗಿ ಕೆಲಸ ಮಾಡುತ್ತವೆ.
ಅದು ಭಜನೆ ಇರಬಹುದು, ಸೂಫಿ ಸಂತರ ಹಾಡುಗಳಿರಬಹುದು, ಧನಾತ್ಮಕತೆಯಿಂದ ಕೂಡಿದ ಪ್ರವಚನಗಳಿರಬಹುದು, ಧರ್ಮ ಗ್ರಂಥಗಳಿರಬಹುದು ಇವೆಲ್ಲವೂ ಶಕ್ತಿಯ ಆಕರಗಳು. ಧನಾತ್ಮಕತೆಯನ್ನಾ ಹರಿಸುವಂತಹ ಅಧಮ್ಯ ಶಕ್ತಿವುಳ್ಳಂತಹ ಆಕರಗಳು. ಮಾನಸಿಕ ತುಮುಲಗಳನ್ನು ಅಳಿಸಿ ಧನಾತ್ಮಕ ಶಕ್ತಿ ನಿರಂತರವಾಗಿ ಹರಿಯುವಂತೆ ಮಾಡುವ ಶಕ್ತಿಯು ದೇವರ ನಾಮಾವಳಿಯಲ್ಲಿ ಅಡಕವಾಗಿವೆ.
ಯಾವಾಗ ಚೈತನ್ಯ ಶಕ್ತಿಯ ನಿರಂತರ ಹರಿವು ಶರೀರದಲ್ಲಿ ಯೋಗ್ಯ ರೀತಿಯಲ್ಲಿ ಹರಿದಾಡಲು ಆರಂಭವಾಗುತ್ತದೋ ಆ ಸಮಯದಲ್ಲಿ ಶರೀರಕ್ಕೆ ಬೇಕಾದ ರೋಗ ನಿರೋಧಕ ಶಕ್ತಿಯ ಉತ್ಪತ್ತಿಯಲ್ಲಿ ಹೆಚ್ಚಳವಾಗುವುದು.
ಈ ನಾಮಸ್ಮರಣೆ ಬರೇ ಪಠಣಕ್ಕೆ ಮೀಸಲಾಗದೆ ಪಾಲನಾ ಪೂಜೆಯಾಗಿ ಬದಲಾದಾಗ ಅರ್ಥಾತ್ ಮನುಷ್ಯ ಅದರೊಳಗಿನ ಅರ್ಥದಂತೆ ಜೀವನದಲ್ಲಿ ಹೆಜ್ಜೆ ಇರಿಸಲಾರಂಭಿಸಿದಾಗ ಆತನ ಕಷ್ಟಗಳು ಒಂದೊಂದಾಗಿ ದೂರ ಸರಿಯಲಾರಂಭಿಸಿ ಮನಸ್ಸಿನಲ್ಲಿ ಪರಮಾನಂದ ಸ್ಥಿತಿ ನೆಲೆಯಾಗುತ್ತದೆ.
– ಅನ್ನಪೂರ್ಣಿಕ ಪ್ರಭು, ಉಪನ್ಯಾಸಕಿ, ರಸಾಯನ ಶಾಸ್ತ್ರ ವಿಭಾಗ, ವಿವೇಕಾನಂದ ಕಾಲೇಜು ಪುತ್ತೂರು.