ಮೆಲ್ಬೋರ್ನ್: ಬಾರ್ಡರ್- ಗಾವಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯ ಮೂರು ಪಂದ್ಯಗಳು ಮುಗಿದಿದ್ದು, ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿದೆ. ನಾಲ್ಕನೇ ಪಂದ್ಯವು ಮೆಲ್ಬೋರ್ನ್ ನಲ್ಲಿ ನಡೆಯಲಿದ್ದು, ಇದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವಾಗಿರಲಿದೆ.
ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಉಳಿದೆರಡು ಪಂದ್ಯಗಳಿಗೆ ತಂಡ ಪ್ರಕಟಿಸಿದೆ. 15 ಜನರ ತಂಡ ಪ್ರಕಟ ಮಾಡಲಾಗಿದ್ದು, ಮೂರು ಬದಲಾವಣೆ ಮಾಡಲಾಗಿದೆ.
ಇದೇ ಸರಣಿಯಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಆರಂಭಿಕ ಆಟಗಾರ ನಥನ್ ಮೆಕ್‌ಸ್ವೀನಿ ಅವರನ್ನು ಉಳಿದೆರಡು ಪಂದ್ಯಗಳಿಗೆ ಕೈಬಿಡಲಾಗಿದೆ. ನಥನ್ ಮೆಕ್‌ಸ್ವೀನಿ ಅವರು ಜಸ್ಪ್ರೀತ್ ಬುಮ್ರಾ ನೇತೃತ್ವದ ವೇಗದ ದಾಳಿಯ ವಿರುದ್ಧ ಪರದಾಡಿದ್ದಾರೆ. ಅವರು ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 72 ರನ್‌ಗಳನ್ನು ಗಳಿಸಿದರು. 1974 ರಿಂದ ಅವರ ಮೊದಲ ಆರು ಇನ್ನಿಂಗ್ಸ್ ಗಳಲ್ಲಿ ಆಸ್ಟ್ರೇಲಿಯಾದ ಟೆಸ್ಟ್ ಆರಂಭಿಕ ಆಟಗಾರ ಗಳಿಸಿದ ಕಡಿಮೆ ಮೊತ್ತ ಇದಾಗಿದೆ. ಅವರು ಮೂರು ಟೆಸ್ಟ್‌ಗಳಲ್ಲಿ ಕೇವಲ 14.40 ಸರಾಸರಿಯನ್ನು ಹೊಂದಿದ್ದಾರೆ.
ಇದೇ ವೇಳೆ ಅಂಡರ್ 19 ಸ್ಟಾರ್, ಯುವ ಬ್ಯಾಟರ್ ಸ್ಯಾಮ್ ಕಾನ್ಸ್ಟಾಸ್ ಅವರನ್ನು ತಂಡಕ್ಕೆ ಮೊದಲ ಬಾರಿಗೆ ಸೇರಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಬಿಗ್ ಬ್ಯಾಷ್ ಲೀಗ್ (BBL) ನಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸಿಡ್ನಿ ಥಂಡರ್ (ST) ಗಾಗಿ ಕಾನ್ಸ್ಟಾಸ್ ಪದಾರ್ಪಣೆ ಮಾಡಿದ್ದು, ವಾರ್ನರ್ ಜೊತೆಗೆ ಆರಂಭಿಕರಾಗಿ, ಅವರು 26 ಎಸೆತಗಳಲ್ಲಿ ಬಿರುಸಿನ 57 ರನ್ ಗಳಿಸಿದರು, ಸಿಡ್ನಿ ಥಂಡರ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕವನ್ನು ಬಾರಿಸಿದ್ದಾರೆ.
ಮತ್ತೊಂದೆಡೆ, ಬ್ಯೂ ವೆಬ್‌ಸ್ಟರ್ ಜೊತೆಗೆ ಜೇ ರಿಚರ್ಡ್‌ಸನ್ ಮತ್ತು ಸೀನ್ ಅಬಾಟ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೂರು ವರ್ಷಗಳ ನಂತರ ರಿಚರ್ಡ್‌ಸನ್ ತಂಡಕ್ಕೆ ಮರಳಿದ್ದಾರೆ.
ಆಸೀಸ್ ತಂಡ
ಪ್ಯಾಟ್ ಕಮ್ಮಿನ್ಸ್ (ನಾ), ಟ್ರಾವಿಸ್ ಹೆಡ್ (ಉ.ನಾ), ಸ್ಟೀವ್ ಸ್ಮಿತ್ (ಉ.ನಾ), ಸೀನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಸ್ಯಾಮ್ ಕಾನ್ಸ್ಟಾಸ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಜೇ ರಿಚರ್ಡ್‌ಸನ್, ಮಿಚೆಲ್ ಸ್ಟಾರ್ಕ್ , ಬ್ಯೂ ವೆಬ್‌ಸ್ಟರ್.