Advertisement
“ಫ್ಲೋರೈಡ್ ನೀರು ಹಾನಿಕರ, ಶುದ್ಧ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಿ’ ಎಂಬ ಮಾತು ನೀರು ಕುಡಿಯುವ ಮುನ್ನ ಒಮ್ಮೆ ನೆನಪಿಗೆ ಬರುತ್ತದೆ. ಆದರೆ… “ಒಂದು ಗ್ಲಾಸ್ ನೀರು ಮಾರುಕಟ್ಟೆಗೆ ಬರಬೇಕಾದರೆ, ಬರೋಬ್ಬರಿ 104 ಪ್ರಕಾರಗಳ ಪರೀಕ್ಷೆಗೊಳಪಡಬೇಕು’ ಎಂದು ಭಾರತೀಯ ಮಾನಕ ಬ್ಯೂರೋ ನಿಯಮ ಹೇಳುತ್ತದೆ. ಇನ್ನು ಕರೆ ಮಾಡಿದ ಕೆಲ ಹೊತ್ತಿನಲ್ಲೇ ಮನೆ ಬಾಗಿಲಿಗೆ ಬಂದಿಳಿಯುವ ಕ್ಯಾನ್ ನೀರು ಈ ಎಲ್ಲಾ ಪರೀಕ್ಷೆಗಳನ್ನು ಪಾಸು ಮಾಡಿ ಮನೆ ಪ್ರವೇಶಿಸುತ್ತಿದೆಯೇ ಎಂಬುದನ್ನು ಯೋಚಿಸಬೇಕಿದೆ.
Related Articles
ಕುಡಿವ ನೀರು ಪೂರೈಸುವ ಬಹುತೇಕ ಘಟಕಗಳು ಪೀಣ್ಯ, ಜಾಲಹಳ್ಳಿ, ಹೆಸರಘಟ್ಟ, ಕುಂಬಳಗೋಡು, ಕೆಂಗೇರಿ, ಕೋಣನಕುಂಟೆ ಕ್ರಾಸ್, ಸರ್ಜಾಪುರ, ಕಾಡುಗೋಡಿ, ಆವಲಹಳ್ಳಿ, ಯಲಹಂಕ ಸೇರಿ ಇನ್ನಿತರ ನಗರದ ಹೊರವಲಯಗಳಲ್ಲಿ ಹೆಚ್ಚಾಗಿವೆ. ಇವೆಲ್ಲವೂ ಬೋರ್ ವೆಲ್‌ಗಳ ನೀರನ್ನೇ ಕ್ಯಾನ್‌ಗಳಿಗೆ ತುಂಬಿಸುತ್ತಿವೆ.
Advertisement
ವೇಗವಾಗಿ ಬೆಳೆಯುವ ಉದ್ಯಮ: ನಗರದ ದಾಹ ನೀಗಿಸಲು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಈ ಪೈಕಿ ಶೇ.15ರಷ್ಟು ಮನೆಗಳಲ್ಲಿ ಆರ್‌ಒ ಶುದ್ಧೀಕರಣ ಘಟಕಗಳನ್ನು ಅಳವಡಿಸಿಕೊಂಡಿದ್ದಾರೆ. ಶೇ.5ರಷ್ಟು ಬ್ರಾಂಡೆಡ್ ಮಿನರಲ್ ವಾಟರ್ ಬಾಟಲ್ ಬಳಸುತ್ತಾರೆ. ಶೇ.20 ವಾರ್ಡ್ ಹಂತಗಳಲ್ಲಿ ನಿರ್ಮಾಣವಾಗಿರುವ ಶುದ್ಧ ನೀರಿನ ಘಟಕ ಮತ್ತು ನಲ್ಲಿಗಳ ನೀರನ್ನು ಬಳಸುತ್ತಾರೆ. ಇನ್ನುಳಿದ ಶೇ.60 ಜನ 15ರಿಂದ 20 ಲೀಟರ್ ಸಾಮರ್ಥ್ಯದ ಕ್ಯಾನ್‌ಗಳನ್ನು ಬಳಸುತ್ತಾರೆ.
ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಂತಹ ನಗರದಲ್ಲಿ ಕುಡಿಯುವ ನೀರು ಪೂರೈಕೆ ಅತೀ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ಪ್ರತಿ ಮನೆಯಲ್ಲೂ ನೀರಿನ ಕ್ಯಾನ್‌ಗಳು ಕಾಣಿಸುತ್ತಿವೆ. ನಗರದ ಬಹುತೇಕ ಹೋಟೆಲ್, ಪಿಜಿ (ಪೇಯಿಂಗ್ ಗೆಸ್ಟ್), ಸರ್ಕಾರಿ-ಖಾಸಗಿ ಕಚೇರಿ, ಹಾಸ್ಟೆಲ್‌ಗಳಲ್ಲಿ ಕ್ಯಾನ್‌ಗಳ ಮೂಲಕ ಕುಡಿವ ನೀರನ್ನು ಪೂರೈಸಲಾಗುತ್ತಿದೆ. ಗುಣಮಟ್ಟದ ನೀರನ್ನು ಕುಡಿಯಲು ಬಳಸದಿರುವುದರಿಂದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಜಲ ತಜ್ಞ ಪ್ರೊ.ಸಿ.ನರಸಿಂಹಪ್ಪ ಮಾಹಿತಿ ನೀಡಿದ್ದಾರೆ.
ಘಟಕಗಳ ನೀರು ವ್ಯಾಪಾರಕ್ಕೆ!: ಜನತೆಯ ಅನುಕೂಲಕ್ಕೆ ವಾರ್ಡ್ ಗೊಂದರಂತೆ 198 ಘಟಕಗಳನ್ನು ಅಳವಡಿಸಲಾಗಿದೆ. ಕೇವಲ 5 ರೂ. ನಾಣ್ಯ ಹಾಕಿದರೆ, 20 ಲೀ. ನೀರು ದೊರೆಯುತ್ತದೆ. ಆದರೆ, ಈ ಘಟಕಗಳ ಪ್ರಯೋಜನವನ್ನು ಹೆಚ್ಚಾಗಿ ಪಡೆಯುತ್ತಿರುವವರು ನೀರು ಪೂರೈಸುವ ಖಾಸಗಿ ಏಜೆನ್ಸಿಗಳು. ಪ್ಯಾಕೇಜ್ ಕುಡಿವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಪರವಾನಗಿ ಪಡೆದು, ಐಎಸ್‌ಐ ಮಾನ್ಯತೆಯನ್ನೂ ನಾವು ಹೊಂದಿದ್ದೇವೆ. ನಮ್ಮಿಂದ ನಿತ್ಯ ನಾಲ್ಕೈದು ನೀರಿನ ವಿತರಕರು 10 ರೂ.ಗೆ ಒಂದು ಕ್ಯಾನ್ ನಂತೆ ನೂರಾರು ಕ್ಯಾನ್ ನೀರನ್ನು ಖರೀದಿಸುತ್ತಾರೆ. ಆ ನೀರನ್ನು ಗ್ರಾಹಕರಿಗೆ 40 ರೂ.ಗಳಿಗೆ ಮಾರಾಟ ಮಾಡುತ್ತಾರೆ. ಇದು ಗೊತ್ತಿದ್ದೂ ಏನೂ ಮಾಡದ ಸ್ಥಿತಿ ಇದೆ.
ಏಕೆಂದರೆ, ಮಾರುಕಟ್ಟೆಯಲ್ಲಿ ತುಂಬಾ ಸ್ಪರ್ಧೆ ಇದೆ. ಇದನ್ನು ಪ್ರಶ್ನಿಸುವವರು ಯಾರೂ ಇಲ್ಲವಾಗಿದ್ದಾರೆಂದು ಲಾಲ್‌ಬಾಗ್ ಬಳಿಯ ಸಿದ್ದಾಪುರದ ಶುದ್ಧ ಕುಡಿವ ನೀರು ಘಟಕದ ಉಸ್ತುವಾರಿ ವಿಷ್ಣುಕುಮಾರ್ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. “ಪ್ಯಾಕೇಜ್ ಡ್ರಿಂಕಿಂಗ್ ವಾಟರ್ ತಯಾರಕರ ಕೆಲಸ ನೀರನ್ನು ಶುದ್ಧೀಕರಿಸಿ ಸಾರ್ವಜನಿಕರಿಗೆ ವಿತರಿಸುವುದಾಗಿದೆ. ಇದಕ್ಕಾಗಿ ಪರವಾನಗಿ ಪಡೆದಿರಬೇಕು. ಪರವಾನಗಿ ಶುಲ್ಕ ಒಂದೂವರೆ ಲಕ್ಷ ರೂ. ಇದಲ್ಲದೆ, ವರ್ಷಕ್ಕೆ 13 ಲಕ್ಷ ರೂ.ಘಟಕ ನಿರ್ವಹಣೆಗೆ ಖರ್ಚಾಗುತ್ತದೆ. ಆದರೆ, ನಗರದಲ್ಲಿ ಈ ರೀತಿ ಲೈಸನ್ಸ್ ಪಡೆದು ನಡೆಸುತ್ತಿರುವವರು 150ಕ್ಕೂ ಕಡಿಮೆ ಮಂದಿ ಇದ್ದಾರೆ.
ಕ್ಯಾನ್ ವಿತರಕರು ಬಣ್ಣ ಬಣ್ಣದ ಮಾತುಗಳಿಂದ ಗ್ರಾಹಕರನ್ನು ಮರಳು ಮಾಡಿ, ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ’ ಎಂದು ತಿಳಿಸಿದರು. ಪ್ರತಿ ಘಟಕದಲ್ಲಿ ನಿತ್ಯ ಸರಾಸರಿ 500 ರಿಂದ 600 ಕ್ಯಾನ್ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ 1.2ಲಕ್ಷ ಕ್ಯಾನ್, ಅಂದರೆ 24ರಿಂದ 25ಲಕ್ಷ ಲೀಟರ್ ನೀರು ಪೂರೈಕೆಯಾಗುತ್ತಿದೆ. ಘಟಕ ಅಳವಡಿಕೆಗೆ ಬಿಬಿಎಂಪಿ ಸ್ಥಳ ನೀಡಿದ್ದು, ಘಟಕ ಸ್ಥಾಪಿಸಿದ ಕಂಪನಿಯೇ ಮೊದಲ ವರ್ಷದ ಘಟಕ ನಿರ್ವಹಣೆ ಮಾಡಲಿದೆ. ನಂತರ ನಿರ್ವಹಣೆಗೆ ಅಗತ್ಯವಿರುವ ವೆಚ್ಚವನ್ನು ಬಿಬಿಎಂಪಿ ನೀಡಲಿದೆ. ಈ ಘಟಕಗಳ ಜಲಮೂಲ ಕೂಡ ಕೊಳವೆಬಾವಿಗಳು.
ಕಡಿವಾಣ ಹಾಕುವುದು ಹೇಗೆ?: ಮೂಲಗಳ ಪ್ರಕಾರ ಅನಧಿಕೃತ ಶುದ್ಧ ನೀರು ತಯಾರಕರ ವಿರುದ್ಧ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ನೇರವಾಗಿ ಕ್ರಮ ಕೈಗೊಳ್ಳಲು ಬರುವುದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಭದ್ರತೆ ಪ್ರಾಧಿಕಾರಕ್ಕೆ ಸೂಚಿಸಬಹುದು. ಇನ್ನು ಬೆಸ್ಕಾಂ, ಬಿಬಿಎಂಪಿ ಮತ್ತಿತರ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು, ಕಡಿವಾಣ ಹಾಕಬೇಕಿದೆ. ಜತೆಗೆ ಈ ವಿಚಾರದಲ್ಲಿ ಜನರ ಅರಿವು ಕೂಡ ಬಹುಮುಖ್ಯ.
ಸರಿಯಾಗಿ ಶುದ್ಧೀಕರಿಸದ ನೀರನ್ನು ಕುಡಿದರೆ ಗಂಟಲು ನೋವು, ಕಫ, ಶ್ವಾಸಕೋಶ ಮತ್ತು ಜಠರ ಸೋಂಕಿನಂತಹ ಕಾಯಿಲೆಗಳು ಬರುತ್ತವೆ. ಡೆಂ à, ಮಲೇರಿಯಾದಂತಹ ಕಾಯಿಲೆಗಳು ನೀರಿನಿಂದ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಹರಡುವ ಕಾರಣ ಎಚ್ಚರಿಕೆಯಿಂದ ನೀರು ಬಳಸಬೇಕು.-ಮೋಹನ್ ರಾಜಣ್ಣ, ಕೆ.ಸಿ.ಜನರಲ್ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ನಾವು ಪ್ರಾಮಾಣಿಕವಾಗಿ ಕುಡಿಯುವ ನೀರನ್ನು ಶುದ್ಧೀಕರಿಸಿ ಪೂರೈಕೆ ಮಾಡುತ್ತಿದ್ದೇವೆ. ನಿತ್ಯ ಶುದ್ಧೀಕರಣ ಘಟಕದ ತಪಾಸಣೆ ಮಾಡಲಾಗುತ್ತದೆ. ಘಟಕದ ಆವರಣವನ್ನೂ ಸ್ವತ್ಛವಾಗಿರಿಸಿದ್ದೇವೆ.
-ಪ್ರಕಾಶ್, ರಿಫ್ರೆಶ್ ವಾಟರ್ ಸಪ್ಲೈ ಮಾಲೀಕ ಬಿಬಿಎಂಪಿಯಿಂದ ಪ್ರತಿ ವಾರ್ಡ್ ಹಂತದಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಘಟಕ ಸ್ಥಾಪಿಸಿದ ಮೊದಲ ವರ್ಷ ಕಂಪನಿಯಿಂದ ಉಚಿತವಾಗಿ ನಿರ್ವಹಣೆ ಸೌಲಭ್ಯ ಸಿಗಲಿದೆ. ನಂತರ ಪ್ರತಿ ವರ್ಷದ ನಿರ್ವಹಣೆಗೆ ವಿಶೇಷ ಅನುದಾನ ಮೀಸಲಿಡಲಾಗುವುದು.
-ಗಂಗಾಂಬಿಕೆ, ಮೇಯರ್ ಜೀವನಕ್ಕೆ ಅತ್ಯವಶ್ಯಕವಾಗಿರುವ ಕುಡಿವ ನೀರಿನ ಉದ್ಯಮ ನಗರಗಳಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವುದು ಅತೀ ಕೆಟ್ಟ ಬೆಳವಣಿಗೆಯಾಗಿದೆ. ಶುದ್ಧೀಕರಣ ಘಟಕದ ಮಾಲಿಕರು ತಮ್ಮಿಷ್ಟದ ಬೆಲೆಗಳನ್ನು ನಿಗದಿಪಡಿಸುತ್ತಿದ್ದಾರೆ. ಘಟಕಗಳು ಪರವಾನಗಿ ಪಡೆಯದೆ ಉದ್ಯಮ ನಡೆಸುತ್ತಿವೆ. ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.
-ನರಸಿಂಹಪ್ಪ, ಜಲ ತಜ್ಞ * ಲೋಕೇಶ್ ರಾಮ್