ಬೆಂಗಳೂರು: ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಸರ್ಕಾರವು ನೀರಿನ ಬಿಲ್ ಏರಿಸುವ ಸುಳಿವು ಸಿಕ್ಕಿದ್ದು, ಮುಂದಿನ ವಾರದಲ್ಲಿ ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗೆ ಸಭೆ ನಡೆಸುವ ಸಾಧ್ಯತೆಗಳಿವೆ ಎಂದು ಜಲಮಂಡಳಿ ಮೂಲಗಳಿಂದ ತಿಳಿದು ಬಂದಿದೆ.
ಜಲಮಂಡಳಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ನೀರಿದ ದರ ಪರಿಷ್ಕರಣೆ ಸಂಬಂಧ ಪ್ರಸ್ತಾವನೆ ಸರ್ಕಾರದ ಮುಂದಿಡಲಾಗಿದೆ. ಬೆಂಗಳೂರಿನ ಎಲ್ಲಾ ಶಾಸಕರಿಗೆ ಜಲ ಮಂಡಳಿಯ ಆರ್ಥಿಕ ಪರಿಸ್ಥಿತಿ ಕುರಿತಂತೆ ಈಗಾಗಲೇ ಪತ್ರ ಬರೆದಿದ್ದು, ನೀರಿನ ದರ ಏರಿಕೆಯ ಅನಿವಾರ್ಯತೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಮುಂದಿನ ವಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸುವ ಹೆಚ್ಚಿನ ಸಾಧ್ಯತೆಗಳಿವೆ. ಸಭೆಯಲ್ಲಿ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳ ಜೊತೆಗೆ ನೀರಿನ ದರ ಎಷ್ಟು ಪ್ರಮಾಣದಲ್ಲಿ ಹೆಚ್ಚಿಸಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯಲಿದೆ. ನಂತರ ಜನವರಿ ಅಂತ್ಯಕ್ಕೆ ನೀರಿನ ದರ ಏರಿಕೆಯ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ತಿಳಿದು ಬಂದಿದೆ.
ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದ ಜಲಮಂಡಳಿ ಅಧ್ಯಕ್ಷರು: ಕಾವೇರಿ ನೀರಿನ ದರ ಪರಿಷ್ಕರಣೆ ಸಂಬಂಧ ಶೀಘ್ರದಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಭೆ ಕರೆಯಲಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿ ದರ ಪರಿಷ್ಕರಣೆ ಪ್ರಸ್ತಾವನೆಗೆ ಸಲಹೆ ನೀಡುವಂತೆ ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಬೆಂಗಳೂರಿನ ಜನಪ್ರತಿನಿಧಿಗಳಿಗೆ ಡಿ.2ರಂದು ಪತ್ರ ಬರೆದು ಮನವಿ ಮಾಡಿದ್ದರು.
ನೀರಿನ ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಕಾರ್ಯಾ ಚರಣೆಯ ವೆಚ್ಚಗಳು 2 ಪಟ್ಟು ಹೆಚ್ಚಾಗಿವೆ. ಆದರೂ, ಹಲವಾರು ಕಾರಣಗಳಿಂದ ಕಳೆದ 1 ದಶಕದಿಂದ ದರವನ್ನು ಪರಿಷ್ಕರಿಸಲಾಗಿಲ್ಲ. ಬೆಂಗಳೂರು ಜಲಮಂಡಳಿ ಆರ್ಥಿಕ ಸ್ಥಿತಿ ಅಭಿವೃದ್ಧಿಯಿಲ್ಲದೇ ಸ್ಥಿರವಾಗಿದ್ದು, ಪ್ರಸ್ತುತ ಬಹಳಷ್ಟು ತೊಂದರೆಯಲ್ಲಿದೆ.
2014ರಲ್ಲಿ ನಿಗದಿಪಡಿಸಲಾಗಿದ್ದ ಕುಡಿಯುವ ನೀರಿನ ದರದಿಂದ ಬರುತ್ತಿರುವ ಲಾಭವು ಇಂದಿನ ಕಾರ್ಯಾಚರಣೆಯ ವೆಚ್ಚಗಳನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ನೀರಿನ ದರ ಪರಿಷ್ಕರಿಸದೇ ಇದ್ದಲ್ಲಿ, ಜಲಮಂಡಳಿ ತನ್ನ ಈಗಿನ ದೈನಂದಿನ ಕಾರ್ಯ ಚಟುವಟಿಕೆ ನಿರ್ವಹಿಸಲು, ತಾಂತ್ರಿಕ ಸುಧಾರಣೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ, ದರ ಪರಿಷ್ಕರಣೆ ಅನಿವಾರ್ಯವಾಗಿದೆ. ಉಪಮುಖ್ಯಮಂತ್ರಿಗಳು ನೀರಿನ ದರ ಪರಿಷ್ಕರಣೆ ಸಂಬಂಧ ಶೀಘ್ರ ಸಭೆ ಕರೆಯಲಿದ್ದಾರೆ.
ಈ ಸಭೆಯಲ್ಲಿ ತಾವುಗಳು ಭಾಗವಹಿಸಿ ದರ ಪರಿಷ್ಕರಣೆ ಪ್ರಸ್ತಾವನೆಗೆ ಬೆಂಬಲ ನೀಡುವಂತೆ ನೀರಿನ ದರ ಏರಿಕೆಯ ಅನಿವಾರ್ಯತೆ ಕುರಿತು ಜನಪ್ರತಿನಿಧಿಗಳಿಗೆ ಬರೆದಿದ್ದ ಪತ್ರದಲ್ಲಿ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದರು.
ನೀರಿನ ದರ ಹೆಚ್ಚಿಸುವ ಕುರಿತು ಇನ್ನೂ ನಿರ್ಧಾರ ತೆಗೆದುಕೊಂ ಡಿಲ್ಲ. ಶೀಘ್ರದಲ್ಲೇ ಈ ಸಂಬಂಧ ಉಪಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಲಾಗುವುದು. ●
ರಾಮ್‌ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ.