ಹೊಸಪೇಟೆ : ಅಕ್ಷರ ದಾಸೋಹದ ಬಿಸಿಯೂಟ ಸೇವಿಸುತ್ತಿದ್ದ ಮಕ್ಕಳ ತಟ್ಟೆಯಲ್ಲಿ ಹುಳುಗಳು ಕಂಡು ಬಂದು ಮಕ್ಕಳ ಪಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯ ದೇವಲಾಪುರ ಗ್ರಾಮದ ಶಾಲೆಯಲ್ಲಿ ಗುರುವಾರ ನಡೆದಿದೆ.
ಶಾಲೆಯ ಮಕ್ಕಳಿಗೆ ಬಿಸಿಯೂಟದಲ್ಲಿ ಹುಳು ಹಿಡಿದ ದವಸಧಾನ್ಯಗಳನ್ನು ಬಳಸಿ ಅನ್ನ, ಸಾಂಬಾರು ತಯಾರಿಸಿ ಮಕ್ಕಳಿಗೆ ಬಡಿಸಿದ್ದಾರೆ. ಇದರಲ್ಲಿ ಬಾಲಹುಳು, ನುಸಿಹುಳುಗಳು ಕಂಡು ಬಂದಿವೆ. ಮಕ್ಕಳು ಕೂಡಲೇ ಪಾಲಕರಿಗೆ ತಿಳಿಸಿದ್ದಾರೆ. ಇದರಿಂದ ಪಾಲಕರು ಶಾಲೆಗೆ ಭೇಟಿ ನೀಡಿ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಊಟ ಮಾಡಿದ್ದೇವೆ. ಮಕ್ಕಳು ಯಾವ ಲೆಕ್ಕ ಎಂದು ಸಹಶಿಕ್ಷಕರೊಬ್ಬರು ಪಾಲಕರ ಎದುರೇ ಮಾತಾಡಿದ್ದರಿಂದ ಪರಿಸ್ಥಿತಿ ಕೆಲಕಾಲ ವಿಕೋಪಕ್ಕೆ ತಿರುಗಿತ್ತು.
“ಮಕ್ಕಳು ಎಲ್ಲರಿಗೂ ಮಕ್ಕಳೇ ಅವರ ಆರೋಗ್ಯ ಕಾಪಾಡಬೇಕಾದದ್ದು ಶಿಕ್ಷಕರ ಜವಾಬ್ದಾರಿ. ಈ ರೀತಿಯಾದಂತಹ ಉದಾಸೀನದ ಉತ್ತರವನ್ನು ನೀಡುತ್ತಾ ಅವರ ಜೀವದ ಜತೆ ಚೆಲ್ಲಾಟ ಆಡಬಾರದು. ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಜರುಗದಂತೆ ಎಚ್ಚರವಹಿಸಬೇಕು. ಶಾಲೆಯ ಮಕ್ಕಳಿಗೆ ಬಿಸಿಯೂಟದಲ್ಲಿ ಹುಳು ಹಿಡಿದ ದವಸಧಾನ್ಯಗಳನ್ನು ಬಳಸಿದ್ದು ತಪ್ಪು ಎಂದು ಗ್ರಾಮದ ಮುಖಂಡರಾದ ವೆಂಕಟೇಶ ಉಪ್ಪಾರ, ಯು.ರಾಘವೇಂದ್ರ, ಅಶೋಕ, ಉದಯ, ಹುಲುಗಪ್ಪ, ಲೋಹಿತ್ ಒತ್ತಾಯ ಮಾಡಿದರು.
ಇದನ್ನೂ ಓದಿ : ಗಂಗಾವತಿ: ಪಂಪಾಸರೋವರ ಜೀರ್ಣೋದ್ಧಾರ; ಜಯಲಕ್ಷ್ಮೀ ಮೂರ್ತಿ ಸ್ಥಳಾಂತರಕ್ಕೆ ಸ್ಥಳೀಯರ ವಿರೋಧ
ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಇಒ ಸುನಂದಾ ಅವರು, ಪಾಲಕರು ದೂರು ನೀಡಿದರೆ, ಸಂಬಂಧಿಸಿದವರ ಕ್ರಮಕ್ಕೆ ಮುಂದಾಗಲಾಗುತ್ತದೆ. ಈ ಕುರಿತು ಬಿಸಿಯೂಟದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು ಎಂದು ಅವರು ತಿಳಿಸಿದ್ದಾರೆ.