ಬೆಂಗಳೂರು: ಕೋವಿಡ್-19 ಸೋಂಕು ನಿರ್ವಹಣೆಯ ಹಿನ್ನಲೆಯಲ್ಲಿ ಇಂದು ರಾತ್ರಿಯಿಂದ ಬೆಂಗಳೂರು ಲಾಕ್ ಡೌನ್ ಆಗಲಿದ್ದು, ಜನರು ಅನಗತ್ಯವಾಗಿ ಹೊರಬರದೆ ಸಹಕರಿಸಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಸಮಯದಲ್ಲಿ ಜನರಿಗೆ ದಿನಸಿ ಸಾಮಾನು ಖರೀದಿಗೆ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ. ಜನರು ಈ ಅವಕಾಶವನ್ನು ಬಳಸಿಕೊಳ್ಳಬೇಕು. 12 ಗಂಟೆಯ ಬಳಿಕ ಅವಕಾಶ ಇಲ್ಲ, ಇದರ ಮೊದಲು ನಿಮ್ಮ ವ್ಯವಹಾರಗಳನ್ನು ಮುಗಿಸಿಕೊಳ್ಳಿ ಎಂದರು.
ಸುಮ್ಮನೆ ಓಡಾಡಿ ಪೊಲೀಸ್ ಫೋರ್ಸ್ ಬಳಸುವ ಅನಿವಾರ್ಯತೆ ತಂದುಕೊಡಬೇಡಿ. ನೀವು ಅನಿವಾರ್ಯತೆ ತಂದರೆ ಬಳಕೆ ಮಾಡಬೇಕಾಗುತ್ತದೆ, ಬಳಸುತ್ತೇವೆ. ಪೊಲೀಸ್ ಇಲಾಖೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಪಾಲನೆ ಮಾಡಲು ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದ್ದಾರೆ ಎಂದರು.
ಹಲವಾರು ಬ್ಯಾರಿಕೇಡ್ ಹಾಕಿ, ಫ್ಲೈ ಓವರ್ ಬಂದ್ ಮಾಡಿದ್ದೇವೆ. ವಾಹನ ದಟ್ಟಣೆ ಕಡಿಮೆ ಇದೆ. ಲಾಕ್ ಡೌನ್ ವಾತಾವರಣ ನಿರ್ಮಾಣವಾಗಿದೆ. ಅಗತ್ಯ ಸೇವೆಗಳಿಗೆ ಅವಕಾಶ ಕೊಡುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ಪೊಲೀಸರು ಸಹಕಾರ ಕೊಟ್ಟು ಕೆಲಸ ಮಾಡ್ತಾರೆ, ಜನರೂ ಕೂಡಾ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಲಾಕ್ ಡೌನ್ ಯಶಸ್ವಿ ಆಗಬೇಕಾದರೆ ಜನರ ಸ್ವಯಂಪ್ರೇರಿತ ಲಾಕ್ ಡೌನ್ ಆಗಬೇಕು. ಈ ಬಾರಿ ಹೆಚ್ಚು ಸೋಂಕು ಇರುವ ಕಾರಣ ಚೈನ್ ಬ್ರೇಕ್ ಮಾಡಲು ಲಾಕ್ ಡೌನ್ ಮಾಡಿದ್ದೇವೆ. ಅನಾವಶ್ಯಕ ಓಡಾಟ ತಡೆಗಟ್ಟಿ ಎಂದು ಪೊಲೀಸರಿಗೆ ಸೂಚಿಸಿದ್ದೇವೆ. ಫೋರ್ಸ್ ಬಳಸುವ ಅನಿವಾರ್ಯತೆ ಬರದಂತೆ ಜನರು ಸಹಕಾರ ಮಾಡಬೇಕು ಎಂದರು.