Advertisement

ಆಹಾರ ನಷ್ಟ ತಪ್ಪಿಸಲು ಹೆಚ್ಚಿನ ಆದ್ಯತೆ

11:14 AM Aug 19, 2017 | Team Udayavani |

ಬೆಂಗಳೂರು: ದೇಶದಲ್ಲಿ ವಾರ್ಷಿಕವಾಗಿ ಒಂದು ಲಕ್ಷ ಕೋಟಿ ರೂ.ನಷ್ಟು ಆಹಾರ ವ್ಯರ್ಥವಾಗುತ್ತಿದ್ದು, ಇದರ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಆಹಾರ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಖಾತೆ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಹೇಳಿದ್ದಾರೆ.

Advertisement

ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಭಾರತೀಯ ಕೈಗಾರಿಕಾ ಒಕ್ಕೂಟದ ಸಹಯೋಗದಲ್ಲಿ ನವೆಂಬರ್‌ನಲ್ಲಿ ದೆಹಲಿಯಲ್ಲಿ ಹಮ್ಮಿಕೊಂಡಿರುವ “ವರ್ಲ್ಡ್ ಫ‌ುಡ್‌ ಇಂಡಿಯಾ- 2017′ ಮೇಳಕ್ಕೆ ಸಂಬಂಧಪಟ್ಟಂತೆ ನಗರದಲ್ಲಿ ಶುಕ್ರವಾರ ನಡೆದ ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದ ಅವರು, ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಆಹಾರ ಬೆಳೆ ಉತ್ಪಾದಿಸಲಾಗುತ್ತಿದೆ. ಆದರೂ, ಜನರಿಗೆ ಆಹಾರ ಸಿಗದೇ ಸಾವಿರಾರು ಮಂದಿ ಸಾವಿಗೀಡಾಗುತ್ತಿದ್ದಾರೆ.

ಈ ಮಧ್ಯೆ ಅಪಾರ ಪ್ರಮಾಣದ ಆಹಾರ ವ್ಯರ್ಥವಾಗುತ್ತಿದೆ. ಜಗತ್ತಿನಾದ್ಯಂತ ವಾರ್ಷಿ ವ್ಯರ್ಥವಾಗುವ ಆಹಾರದ ಪ್ರಮಾಣ ಚೀನಾ ದೇಶದಲ್ಲಿ ವಾರ್ಷಿಕ ಉತ್ಪಾದನೆಯಾಗುವಷ್ಟು ಆಹಾರಕ್ಕೆ ಸಮ. ಆಹಾರ ಪದಾರ್ಥ ಪೋಲಾಗುವುದನ್ನು ಅನ್ಯರಾಷ್ಟ್ರಗಳಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ. ಆ ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಸದ್ಯ ದೇಶದಲ್ಲಿ ಶೇ.10ರಷ್ಟು ಆಹಾರ ಸಂಸ್ಕರಣೆಯಾಗುತ್ತಿದೆ. ಈ ಪ್ರಮಾಣ ಹೆಚ್ಚಬೇಕು. ತುಮಕೂರಿನಲ್ಲಿ ಈಗಾಗಲೇ ಫ‌ುಡ್‌ಪಾರ್ಕ್‌ ಆರಂಭವಾಗಿದೆ. ಮಂಡ್ಯದಲ್ಲಿ ವಿಳಂಬವಾಗುತ್ತಿದೆ. ಅದು ತ್ವರಿತವಾಗಿ ಆಗಬೇಕು. ಅದಕ್ಕೆ ಕೇಂದ್ರದ ಸಹಕಾರವಿದೆ ಇದಕ್ಕೆ ಪೂರಕವಾಗಿ ನವೆಂಬರ್‌ನಲ್ಲಿ ವರ್ಲ್ಡ್ ಫ‌ುಡ್‌ ಇಂಡಿಯಾ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕೃಷಿ ಸಚಿವ ಕೃಷ್ಣ ಬೈರೇಗೌಡ, ಕರ್ನಾಟಕದ ಭೌಗೋಳಿಕ ಪರಿಸರದಿಂದ ತರಹೇವಾರಿ ಆಹಾರ, ತೋಟಗಾರಿಕೆ ಬೆಳೆ, ಹಣ್ಣು, ತರಕಾರಿ, ಕಾಳು, ಹೂವುಗಳನ್ನು ಬೆಳೆಯಲಾಗುತ್ತಿದೆ. ಆ ಮೂಲಕ ಆಹಾರ ಬೆಳೆಗಳ ಉತ್ಪಾದನೆಯಲ್ಲಿ ಸಮೃದ್ಧವಾಗಿದೆ. ಮಾಂಸ ಉತ್ಪಾದನೆದಲ್ಲೂ ಮುಂಚೂಣಿಯಲ್ಲಿದೆ ಎಂದು ಹೇಳಿದರು. 

Advertisement

ನವಣೆ ಪೌಷ್ಠಿಕ ಆಹಾರವೆನಿಸಿದ್ದು, ಅದನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಧರ್ಮೇಂದ್ರ ಸಿಂಗ್‌ ಗಂಗ್ವಾರ್‌, “ನವದೆಹಲಿಯ ರಾಜಪಥದಲ್ಲಿರುವ ವಿಜ್ಞಾನ ಭವನದಲ್ಲಿ ನವೆಂಬರ್‌ 3ರಿಂದ 5ರವರೆಗೆ “ವರ್ಲ್ಡ್ ಫ‌ುಡ್‌ ಇಂಡಿಯಾ- 2017′ ಮೇಳ ಆಯೋಜಿಸಲಾಗಿದೆ.

ಇದರಲ್ಲಿ ಸಂವಾದ, ವಿಚಾರ ಸಂಕಿರಣ, ಚರ್ಚೆ, ಪ್ರದರ್ಶನ, ಪ್ರಾತ್ಯಕ್ಷಿಕೆ ಇರಲಿದೆ ಎಂದು ಹೇಳಿದರು. ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರ ರಾವ್‌, ಸಿಐಐ ಕರ್ನಾಟಕ ಘಟಕದ ಅಧ್ಯಕ್ಷ ಕಮಲ್‌ ಬಾಲಿ, ಬ್ರಿಟಾನಿಯಾ ಇಂಡಸ್ಟ್ರೀಸ್‌ನ ವ್ಯವಸ್ಥಾಪಕ ನಿರ್ದೇಶಕ ವರುಣ್‌ ಬೆರ್ರಿ ಇತರರು ಉಪಸ್ಥಿತರಿದ್ದರು.

ಕರ್ನಾಟಕವು ತಾಂತ್ರಿಕ ನಗರಿ ಎಂಬ ಹಿರಿಮೆ ಜತೆಗೆ ವೈವಿಧ್ಯದ ಆಹಾರ ಬೆಳೆ, ಕೃಷಿ ಉತ್ಪನ್ನಗಳನ್ನು ಬೆಳೆಯುವ ರಾಜ್ಯವಾಗಿರುವುದು ಸಂತಸದ ಸಂಗತಿ. ಆದರೆ ಕರ್ನಾಟಕದ ವೈವಿಧ್ಯದ ಬೆಳೆ ಪದ್ಧತಿಗೆ ಸಿಗಬೇಕಾದ ಮಾನ್ಯತೆ ಸಿಕ್ಕಂತಿಲ್ಲ. ಜತೆಗೆ ವೈವಿಧ್ಯದ ಬೆಳೆ ಬೆಳೆದು ಹಿರಿಮೆ ಹೆಚ್ಚಿಸಿದ ರೈತರ ಕೊಡುಗೆಯನ್ನು ಸ್ಮರಿಸುವ ಕೆಲಸ ಆಗಬೇಕು. 
-ಹರ್‌ಸಿಮ್ರತ್‌ ಕೌರ್‌ ಬಾದಲ್‌, ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next