ಹೊಸದಿಲ್ಲಿ: ದೇಶದ ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳ ನೇಮಕ ಕುರಿತಂತೆ ಮಹತ್ತರವಾದ ಬದಲಾವಣೆಗಳನ್ನು ಕೈಗೊಳ್ಳಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಮುಂದಾಗಿದೆ.
ಇದಕ್ಕಾಗಿ ಹೈಕೋರ್ಟ್, ಸುಪ್ರೀಂ ಕೋರ್ಟ್ಗಳಲ್ಲಿ ನ್ಯಾಯಮೂರ್ತಿಗಳಾಗಿರು ವವರ ಮನೆಯವರು ಹಾಗೂ ಹತ್ತಿರದ ಸಂಬಂಧಿಕರನ್ನು ಜಡ್ಜ್ ಹುದ್ದೆಗೆ ನೇಮಕ ಮಾಡದೇ ಇರುವ ಬಗ್ಗೆ ಚರ್ಚೆ ಆರಂಭಿಸಿದೆ ಎನ್ನಲಾಗಿದೆ.
ಜಡ್ಜ್ ಗಳ ನೇಮಕ ವಿಚಾರ ಬಂದಾಗ ಹೈಕೋರ್ಟ್ ಅಥವಾ ಸುಪ್ರೀಂನ ಹಾಲಿ ಅಥವಾ ನಿವೃತ್ತ ಜಡ್ಜ್ ಗಳ ಮಕ್ಕಳು, ಹತ್ತಿರದ ಸಂಬಂಧಿಗಳ ಹೆಸರನ್ನು ಶಿಫಾರಸು ಮಾಡದಂತೆ ಹೈಕೋರ್ಟ್ನ ಕೊಲಿಜಿಯಂಗೆ ಸೂಚಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಚಿಂತನೆಯನ್ನು ಕೆಲವರು ಸ್ವಾಗತಿಸಿದ್ದರೆ, ಮತ್ತೆ ಕೆಲವು ವಕೀಲರು ವಿರೋಧಿಸಿದ್ದಾರೆ.
ಹೈಕೋರ್ಟ್ಗಳು ಸೂಚಿಸುವ ವಕೀಲರನ್ನು ಜಡ್ಜ್ ಗಳಾಗಿ ನೇಮಿಸುವ ಸಂಪ್ರದಾಯ ದಿಂದ ಸುಪ್ರೀಂ ಕೊಲಿಜಿಯಂ ಹಿಂದೆ ಸರಿದಿದೆ. ಇದೇ ಮೊದಲ ಬಾರಿ ಸಂಭಾವ್ಯ ಜಡ್ಜ್ ಗಳ ಜತೆಗೆ ಕೊಲಿಜಿಯಂ ಖುದ್ದು ಸಂವಹನ ನಡೆಸಿದೆ. ಇದು ಜಡ್ಜ್ ನೇಮಕದಲ್ಲಿ ತೆಗೆದುಕೊಳ್ಳಲಾ ಗುತ್ತಿರುವ ಪ್ರಮುಖ ನಿರ್ಧಾರ ಎನ್ನಲಾಗುತ್ತಿದೆ.