Advertisement

ಹೈ-ಕ ಡ್ಯಾಂಗಳು ಖಾಲಿ ಖಾಲಿ;  ತಳಕಚ್ಚಿದ ಭೀಮಾ ಏತ ಜಲಾಶಯ

06:00 AM Jun 22, 2018 | |

ಕಲಬುರಗಿ: ರಾಜ್ಯದ ಹಲವೆಡೆ ಧಾರಾಕಾರ ಮಳೆ ಸುರಿದು ಆ ಭಾಗದ ಜಲಾಶಯಗಳು ಭರ್ತಿಯಾಗುತ್ತಿದ್ದರೆ, ಬಿಸಿಲ ನಾಡು ಹೈದ್ರಾಬಾದ್‌ ಕರ್ನಾಟಕ ಭಾಗದ ಜಲಾಶಯಗಳು ಮಾತ್ರ ದಿನೇ ದಿನೆ ಬತ್ತುತ್ತಿವೆ. ಕಲಬುರಗಿ ಜಿಲ್ಲೆಯ ಜೀವನಾಡಿ ಭೀಮಾ ಏತ ಜಲಾಶಯ ನೀರಿಲ್ಲದೆ ಬರಡು ಭೂಮಿಯಂತಾಗಿದೆ.

Advertisement

ಮುಂಗಾರು ಆರಂಭವಾಗಿ ಎರಡು ವಾರಗಳೇ ಕಳೆದರೂ ಭೂಮಿ ಹಸಿಯಾಗುವಷ್ಟು ಮಳೆ ಬಾರದೇ ಇರುವುದು ಹಾಗೂ ಕಳೆದೊಂದು ವಾರದಿಂದ ಬಿರುಗಾಳಿ, ಬಿಸಿಲಿನ ಪ್ರಮಾಣದಲ್ಲಿ ಏರಿಕೆ ಉಂಟಾಗಿದ್ದರಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಸಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಯಾವುದೇ ಜಲಾಶಯಗಳಲ್ಲಿ ನೀರು ಏರಿಲ್ಲ. ಮುಂಗಾರು ಆರಂಭಕ್ಕೂ ಮುಂಚೆ ಸ್ವಲ್ಪ ಮಳೆ ಬಂದಿದ್ದು ಬಿಟ್ಟರೆ ಮತ್ತೆ ಮಳೆರಾಯನ ಕೃಪೆಯೇ ಇಲ್ಲ. 3-4 ದಿನಗಳ ವಾತಾವರಣ ನೋಡಿದರೆ ಮತ್ತೆ ಬರಗಾಲವೇ ಎನ್ನುವ ಆತಂಕ ರೈತರಲ್ಲಿ ಮೂಡಲಾರಂಭಿಸಿದೆ.

ಎಷ್ಟೆಷ್ಟಿದೆ ನೀರು?
ಕಳೆದ ವರ್ಷ ಈ ವೇಳೆಗೆ ಉತ್ತಮವಾಗಿ ಮಳೆಯಾಗಿದ್ದು, ಜಲಾಶಯಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ನೀರು ಸಂಗ್ರಹವಾಗಿತ್ತು. 3.16 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಭೀಮಾ ಏತ ಜಲಾಶಯದಲ್ಲಿ ಈಗ ಕೇವಲ 0.669 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹ ಹೊಂದಿದೆ. ಒಳಹರಿವು ಏನೂ ಇಲ್ಲ. ಕಳೆದ ವರ್ಷ ಇದೇ ಸಮಯಕ್ಕೆ 1.042 ಟಿಎಂಸಿ ಅಡಿ ನೀರಿತ್ತು.

ಬೆಣ್ಣೆ ತೋರಾದಲ್ಲಿ 5.29 ಟಿಎಂಸಿ ಅಡಿ ನೀರಿನ ಸಂಗ್ರಹದ ಪೈಕಿ ಈಗ 3.22 ಟಿಎಂಸಿ ಅಡಿ ನೀರಿದೆ. ಕಳೆದ ವರ್ಷ ಇದೇ ಜೂ.20ಕ್ಕೆ 4.20 ಟಿಎಂಸಿ ಅಡಿ ನೀರಿತ್ತು. ಅಮರ್ಜಾದಲ್ಲಿ 1.55 ಟಿಎಂಸಿ ಅಡಿ ನೀರಿನ ಪೈಕಿ 0.850 ಟಿಎಂಸಿ ಅಡಿ ನೀರಿದೆ. ಬೀದರ್‌ನ ಕಾರಂಜಾ ಜಲಾಶಯದಲ್ಲಿ 7.691 ಟಿಎಂಸಿ ಪೈಕಿ 3.677 ಟಿಎಂಸಿ ಅಡಿ ನೀರಿದೆ. ಚಂದ್ರಂಪಳ್ಳಿ, ಸೌದಾಗಾರ, ಹತ್ತಿಕುಣಿ ಜಲಾಶಯಗಳು ಡೆಡ್‌ ಸ್ಟೋರೇಜ್‌ಗೆ ತಲುಪಿವೆ.

ಬಿತ್ತನೆ ಕೈ ಬಿಟ್ಟ ರೈತರು
ರಾಜ್ಯಾದ್ಯಂತ ಭಾರೀ ಮಳೆ ಸುರಿದಾಗ ಕಲಬುರಗಿ ಭಾಗದಲ್ಲಿ ಸ್ವಲ್ಪ ಮಳೆ ಸುರಿದಿತ್ತು. ಭೂಮಿ ಹಸಿಯಾಗದಿದ್ದರೂ ಮಳೆ ಸುರಿಯುತ್ತದೆ ಎನ್ನುವ ಆಶಾಭಾವನೆಯಿಂದ ರೈತ ಬಿತ್ತನೆ ಕಾರ್ಯ ಆರಂಭಿಸಿದ್ದ. ಆದರೆ ಭೂಮಿ ಹಸಿ ಮಾಯವಾಗಿ ಬರೀ ಗಾಳಿ ಹಾಗೂ ಬಿಸಿಲಿನ ಪ್ರಮಾಣ ಹೆಚ್ಚಳವಾಗುವುದರ ಜತೆಗೆ ಮಳೆ ಮಾಯವಾಗಿದ್ದರಿಂದ ರೈತರು ಈಗ ಬಿತ್ತನೆ ಕಾರ್ಯ ನಿಲ್ಲಿಸಿದ್ದಾರೆ. ಭೂಮಿಗೆ ಹಾಕಿದ ಬೀಜ ಮೊಳಕೆಯೊಡೆದು ಮೇಲೆ ಬರುತ್ತಿಲ್ಲ.

Advertisement

ಮರಳುಗಾರಿಕೆಯಿಂದ ಬತ್ತುತ್ತಿವೆ ಜಲಾಶಯ!
ಕಲಬುರಗಿ ಭಾಗದ ಜಲಾಶಯಗಳಲ್ಲಿ ಭೀಮಾ ನದಿಯೇ ಹೆಚ್ಚಿನ ಪ್ರಮಾಣದಲ್ಲಿ ಬತ್ತಲು ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕಾರಣ. ಅಕ್ರಮ ಮರಳುಗಾರಿಕೆ ತಡೆದಲ್ಲಿ ಮಾತ್ರ ಭೀಕರ ಪರಿಸ್ಥಿತಿ ಎದುರಾಗುವುದನ್ನು ಸ್ವಲ್ಪ ಪ್ರಮಾಣದಲ್ಲಾದರೂ ತಪ್ಪಿಸಬಹುದು. ಭೀಮಾ ನದಿಯಲ್ಲಿ ನೀರು ಬತ್ತುತ್ತಿರುವುದರಿಂದ ಕಲಬುರಗಿ ಮಹಾನಗರ ನೀರು ಪೂರೈಕೆಯ ಸರಡಗಿ ಬ್ಯಾರೇಜ್‌ನಲ್ಲಿ ನೀರು ಕಡಿಮೆಯಾಗಿದೆ. ಹೀಗಾಗಿ ನಗರಕ್ಕೆ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next