Advertisement

ಹೆಜಮಾಡಿ ಟೋಲ್‌ಗೇಟ್‌ : ಪರಿಷ್ಕೃತ ದರ ಸಂಗ್ರಹ ದಿನ ನಿಗದಿಯಾಗಿಲ್ಲ: ಕೂರ್ಮಾರಾವ್‌

11:07 PM Dec 01, 2022 | Team Udayavani |

ಮಣಿಪಾಲ : ಕೇಂದ್ರ ಸರಕಾರದ ಗೆಜೆಟ್‌ ನೋಟಿಫಿಕೇಶನ್‌ ಪ್ರಕಾರ ಸುರತ್ಕಲ್‌ನಲ್ಲಿದ್ದ ಟೋಲ್‌ ಅನ್ನು ಹೆಜಮಾಡಿ ಟೋಲ್‌ನೊಂದಿಗೆ ವಿಲೀನಗೊಳಿಸಲಾಗಿದೆ. ಪರಿಷ್ಕೃತ ದರ ಪಡೆಯುವ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕೋರಿಕೆಯಂತೆ ಹೆಜಮಾಡಿ ಗೇಟ್‌ಗೆ ಸೂಕ್ತ ಭದ್ರತೆ ಕಲ್ಪಿಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಟೋಲ್‌ ದರ ಹೆಚ್ಚಳಕ್ಕೆ ಜನಪ್ರತಿನಿಧಿ ಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿಯೇ ಅವರ ಸಭೆ ಕರೆಯಲಾಗುತ್ತದೆ. ಸಾರ್ವಜನಿಕರು ಅಥವಾ ಯಾವುದೇ ಸಂಘಟನೆಗಳಿಂದ ಈ ಸಂಬಂಧ ದೂರು ಅಥವಾ ಆಕ್ಷೇಪಣೆಗಳು ಬಂದಿಲ್ಲ. ಬಂದಲ್ಲಿ ಪರಿಶೀಲಿಸಲಾಗುವುದು. ಪರಿಷ್ಕೃತ ದರ ಸಂಗ್ರಹ ಆರಂಭಿ ಸುವ ಮೊದಲು ಹೆದ್ದಾರಿ ಪ್ರಾಧಿಕಾರವು ಸ್ಥಳೀಯವಾಗಿಯೂ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಲಿದೆ. ಕೇಂದ್ರ ಸರಕಾರದ ಸೂಚನೆಯನ್ನು ಪಾಲಿಸುತ್ತೇವೆ ಎಂದರು.

ಅಗತ್ಯ ಬಿದ್ದರೆ ಕಾನೂನು ಕ್ರಮ
ಟೋಲ್‌ಗೇಟ್‌ ವಿರೋಧಿ ಸಮಿತಿಯು ಪ್ರತಿಭಟನೆಗೆ ಕರೆ ನೀಡಿರುವ ಮಾಹಿತಿ ಬಂದಿದೆ. ಪ್ರಜಾಸತ್ತಾತ್ಮಕ ಪ್ರತಿಭಟನೆಗೆ ಯಾವುದೇ ಸಮಸ್ಯೆಯಿಲ್ಲ. ಹೆದ್ದಾರಿ ಬಂದ್‌, ಆಸ್ತಿಪಾಸ್ತಿ ಹಾನಿ ಇತ್ಯಾದಿ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ. ಕಾಪು ಠಾಣೆ ವ್ಯಾಪ್ತಿಯಲ್ಲಿ ಈಗಾಗಲೇ ಸಭೆ ನಡೆಸಿ ಅಗತ್ಯ ಸೂಚನೆ ನೀಡಿದ್ದೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ತಿಳಿಸಿದರು.

ತಂತ್ರಜ್ಞಾನ ಆಧಾರಿತ ಮಾಹಿತಿ ಸಂಗ್ರಹ
ಜಿಲ್ಲೆಗೆ ಬರುವ ಹೊರ ರಾಜ್ಯ ಅಥವಾ ವಿದೇಶಿಗರ ಮಾಹಿತಿ ಸಂಗ್ರಹಕ್ಕೆ ತಂತ್ರಜ್ಞಾನ ಆಧಾರಿತ ಹೊಸ ವ್ಯವಸ್ಥೆಯನ್ನು ಭವಿಷ್ಯದಲ್ಲಿ ರೂಪಿಸಲಾಗುತ್ತದೆ. ಈಗಾಗಲೇ ವಿದೇಶಿಗರ ಮಾಹಿತಿ ನೀಡುವಂತೆ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ಹಾಗೂ ಪಿ.ಜಿ. ಗೆಸ್ಟ್‌ಹೌಸ್‌ ಹಾಗೂ ಮನೆ ಮಾಲಕರಿಗೆ ಸೂಚನೆ ನೀಡಿದ್ದೇವೆ. ಮಲ್ಪೆಯಲ್ಲಿ ಹೊರ ರಾಜ್ಯದ ಕಾರ್ಮಿಕರು ಹೆಚ್ಚಿರುವುದರಿಂದ ಅಗತ್ಯ ಮಾಹಿತಿ ಒದಗಿಸುವಂತೆ ಮೀನುಗಾರರ ಸಂಘಟನೆಗಳ ಪ್ರಮುಖರಿಗೂ ತಿಳಿಸಿದ್ದೇವೆ. ಎಲ್ಲ ಕಡೆಗಳಲ್ಲಿ ಸಿಸಿ ಕೆಮ ರಾ ಅಳವಡಿಕೆ ಮತ್ತು ಸ್ಮಾರ್ಟ್‌ ಸಿಗ್ನಲ್‌ ಸ್ಥಾಪನೆ ನಡೆಯುತ್ತಿದೆ. ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಸಭೆಯನ್ನು ಶೀಘ್ರ ಕರೆಯಲಿದ್ದೇವೆ ಎಂದರು.
ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್‌. ಉಪಸ್ಥಿತರಿದ್ದರು.

ಸ್ಯಾಟಲೈಟ್‌ ಫೋನ್‌: ವಿಚಾರಣೆ ಹಂತದಲ್ಲಿ
ಮಂಗಳೂರು ಸ್ಫೋಟದ ಆರೋಪಿ ಶಾರೀಕ್‌ ಉಡುಪಿಗೆ ಬಂದಿ ರುವ ಬಗ್ಗೆ ಬೆಂಗಳೂರು ಪೊಲೀಸರು ಉಡುಪಿಗೆ ಬಂದು ತನಿಖೆ ನಡೆಸಿ, ಮಾಹಿತಿ ಸಂಗ್ರಹಿದ್ದಾರೆ. ಸ್ಯಾಟಲೈಟ್‌ ಫೋನ್‌ ಸಹಿತ ಇನ್ನಿತರ ವಿಷಯಗಳು ವಿಚಾರಣೆ ಹಂತದಲ್ಲಿ ಇರುವುದರಿಂದ ಮಾಹಿತಿ ಬಹಿರಂಗ ಸಾಧ್ಯವಿಲ್ಲ.
– ಹಾಕೆ ಅಕ್ಷಯ್‌ ಮಚ್ಚೀಂದ್ರ, ಉಡುಪಿ ಎಸ್‌ಪಿ

Advertisement

ಹೆಜಮಾಡಿ ಟೋಲ್‌ನಲ್ಲಿ ಯಥಾಸ್ಥಿತಿ, ಇಂದು ಧರಣಿ
ಪಡುಬಿದ್ರಿ: ಸುರತ್ಕಲ್‌ ಟೋಲ್‌ ವಿಲೀನದೊಂದಿಗೆ ವಾಹನಗಳ ಟೋಲ್‌ ದರದಲ್ಲಿ ಏರಿಕೆಯಾಗಬೇಕಿದ್ದ ಹೆಜಮಾಡಿ ನವಯುಗ ಟೋಲ್‌ ಪ್ಲಾಜಾದಲ್ಲಿ ಯಾವುದೇ ಮಾರ್ಪಾಟು ಇಲ್ಲದೇ ಗುರುವಾರ ಯಥಾಸ್ಥಿತಿ ಮುಂದುವರಿದಿತ್ತು. ಡಿ. 2ರಂದು ಹೆಜಮಾಡಿ ಟೋಲ್‌ ಗೇಟ್‌ ಸಮೀಪ ಕಾಂಗ್ರೆಸ್‌ ಹಾಗೂ ಟೋಲ್‌ ವಿಲೀನದ ವಿರೋಧಿ ಹೋರಾಟಗಾರರ ಬೆಂಬಲಿತರ ಧರಣಿಗೆ ಸರ್ವ ಸಿದ್ಧತೆಗಳು ನಡೆದಿವೆ.
ನವಯುಗ ಅಧಿಕಾರಿಗಳು ಸುರತ್ಕಲ್‌ ಟೋಲ್‌ ದರವನ್ನು ಹೆಜಮಾಡಿ, ಬ್ರಹ್ಮರಕೂಟ್ಲು ಮತ್ತು ತಲಪಾಡಿಯ ಪ್ಲಾಜಾಗಳಿಗೆ ಹಂಚಿ ಹಾಕಲು ಬಯಸುತ್ತಿದ್ದಾರೆ. ಆದರೆ ಸರಕಾರವು ಇದಕ್ಕೊಪ್ಪುತ್ತಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next