ಬೆಂಗಳೂರು: ನಗರಕ್ಕೆ ಹೊರ ರಾಜ್ಯದಿಂದ ಬಂದು ಕ್ವಾರಂಟೈನ್ ಆಗುವವರನ್ನು ಕ್ವಾರಂಟೈನ್ ಆದ 10ನೇ ದಿನ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಕ್ವಾರಂಟೈನ್ ಮಾಡಿದ 10ನೇ ದಿನ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು.
ಇವರು ಕಡ್ಡಾಯವಾಗಿ 14ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು. ಉಳಿದಂತೆ ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 80 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ದೀರ್ಘಕಾಲದಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ (ಕ್ಯಾನ್ಸರ್, ಉಸಿರಾಟದ ತೊಂದರೆ, ಮೂತ್ರಪಿಂಡ ಸೋಂಕು ಅಥವಾ ಸಮಸ್ಯೆ) ಇದ್ದಲ್ಲಿ ಅವರನ್ನು ಮೊದಲ ಎರಡು ದಿನಗಳಲ್ಲಿ ಆದ್ಯತೆಯ ಮೇರೆಗೆ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗುವುದು.
ಸೋಂಕು ದೃಢಪಡದೆ ಇದ್ದಲ್ಲಿ ಷರತ್ತುಗಳ ಅನ್ವಯ ಕಡ್ಡಾಯ 14ದಿನಗಳ ಹೋಂಕ್ವಾರಂಟೈನ್‌ಗೆ ಕಳುಹಿಸಲಾಗುವುದು. ಇವರು 10ರಿಂದ 12 ದಿನಗಳ ನಂತರ ಮತ್ತೆ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗಬೇಕು ಎಂದು ಮಾಹಿತಿ ನೀಡಿದರು.
ಪ್ರಮಾಣ ಪತ್ರಕ್ಕೆ ಸಹಿ: ಷರತ್ತಿನ ಆಧಾರದ ಮೇಲೆ ಹೋಂ ಕ್ವಾರಂಟೈನ್‌ನಲ್ಲಿರುವವರು 10ರಿಂದ 12ನೇ ದಿನಗಳ ಮಧ್ಯೆ ಕಡ್ಡಾಯವಾಗಿ ಕೊರೊನಾ ಸೋಂಕು ಪರೀಕ್ಷೆಗೆ ಒಳಗಾಗುತ್ತೇವೆ ಎಂದು ಪತ್ರಕ್ಕೆ ಸಹಿ ಹಾಕ ಬೇಕು. ಈ ರೀತಿ ಪತ್ರಕ್ಕೆ ಸಹಿ ಮಾಡಿಸಿಕೊಂಡೇ ಅವ ರನ್ನು ಕಳುಹಿಸಲಾಗುವುದು ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೈ ರಿಸ್ಕ್ ಪ್ರಕರಣ ಮಾತ್ರ ಕ್ವಾರಂಟೈನ್: ರಾಜ್ಯದಲ್ಲಿ ಕೊರೊನಾ ಪೀಡಿತರ ಪ್ರಕರಣಗಳು ಹೆಚ್ಚಾಗುತ್ತಿರುವದರಿಂದ ಸೋಂಕಿತ ವ್ಯಕ್ತಿಗೆ ಸಂಪರ್ಕಕ್ಕೆ ಬಂದವರ ಆರೋಗ್ಯ ತಪಾಸಣೆ ಮಾಡಿ ಅಗತ್ಯವಿದ್ದರೆ ಮಾತ್ರ ಕ್ವಾರಂಟೈನ್ ಗೆ ಒಳಪಡಿಸುವಂತೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೆದ್ ಅಕ್ತರ್ ಸುತ್ತೋಲೆ ಹೊರಡಿಸಿದ್ದಾರೆ. ಸೋಂಕಿತರ ಸಂಪರ್ಕಕ್ಕೆ ಬರುವ ವ್ಯಕ್ತಿಗಳನ್ನು ಲೊ ರಿಸ್ಕ್ ಹಾಗೂ ಹೈ ರಿಸ್ಕ್ ಎಂದು ಪ್ರತ್ಯೇಕಿಸಿ.ಹೈ ರಿಸ್ಕ್ ಇರುವ ಪ್ರಕರಣಗಳನ್ನು ಮಾತ್ರ ಕ್ವಾರಂಟೈನ್ ಗೆ ಒಳಪಡಿಸುವಂತೆ ಸೂಚಿಸಿದ್ದಾರೆ.