1970-80ರ ದಶಕದಲ್ಲಿ ಪರಾಕಷ್ಟೆ ತಲುಪಿದ್ದ ಬೆಂಗಳೂರು ಭೂಗತ ಜಗತ್ತಿನ ಬಗ್ಗೆ ಇಂದಿಗೂ ನೂರಾರು ಕುತೂಹಲ ಸಂಗತಿಗಳು, ಅಂತೆ-ಕಂತೆಗಳು ಆಗಾಗ್ಗೆ ಹರಿದಾಡುತ್ತಲೇ ಇರುತ್ತವೆ. ಬೆಂಗಳೂರು ಪಾತಕ ಲೋಕದ ನೆತ್ತರ ಕಥೆಗಳು ಈಗಾಗಲೇ ಪುಸ್ತಕ, ಅಂಕಣ, ಸಿನಿಮಾ ಹೀಗೆ ಹತ್ತಾರು ರೂಪದಲ್ಲಿ ಬಂದು ಹೋಗಿವೆ. ಆದರೆ ಪಾತಕ ಲೋಕದ ಇತಿಹಾಸದ ಪುಟಗಳು ತಿರುವಿ ಹಾಕುವ, ಅದರೊಳಗೆ ಇಣುಕಿ ನೋಡುವ ಪ್ರಯತ್ನ ಮಾತ್ರ ಇನ್ನೂ ನಿಂತಿಲ್ಲ. ಈ ವಾರ ತೆರೆಗೆ ಬಂದಿರುವ “ಹೆಡ್ ಬುಷ್’ ಕೂಡ ಬೆಂಗಳೂರಿನ ಪಾತಕ ಲೋಕವನ್ನು ಮತ್ತೂಂದು ಆಯಾಮದಲ್ಲಿ ಪರಿಚಯಿಸುವ ಸಿನಿಮಾ.
ಲೇಖಕ ಅಗ್ನಿ ಶ್ರೀಧರ್ ಅವರ “ದಾದಾಗಿರಿಯ ದಿನಗಳು’ ಪುಸ್ತಕವನ್ನು ಆಧರಿಸಿ ತೆರೆಗೆ ಬಂದಿರುವ “ಹೆಡ್ ಬುಷ್’ ಸಿನಿಮಾದಲ್ಲಿ ಬೆಂಗಳೂರಿನ ಭೂಗತ ಜಗತ್ತಿನ ಆರಂಭದ ದಿನಗಳನ್ನು ತೆರೆಮೇಲೆ ತೆರೆದಿಡಲಾಗಿದೆ. ಜಯರಾಜ್ ಎಂಬ ಮಧ್ಯಮ ಕುಟುಂಬದ ಸಾಮಾನ್ಯ ಹುಡಗನೊಬ್ಬ ತನ್ನ ಹುಂಬುತನದಿಂದ ಹೇಗೆ ಡಾನ್ ಜಯರಾಜ್ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಾನೆ. ಬೆಂಗಳೂರು ಭೂಗತ ಜಗತ್ತು ಹೇಗೆ ಬೆಳೆದು ನಿಲ್ಲುತ್ತದೆ ಎನ್ನುವುದು ಸಿನಿಮಾದ ಕಥೆಯ ಒಂದು ಎಳೆ.
ಪೊಲೀಸ್ ದಾಖಲೆಗಳು, ಮಾಧ್ಯಮಗಳ ವರದಿಗಳು, ಜನಸಾಮಾನ್ಯರ ಬಾಯಲ್ಲಿ ಹರಿದಾಡುತ್ತಿರುವ ಒಂದಷ್ಟು ಊಹಾಪೋಹ ಕಥೆಗಳ ಹೊರತಾಗಿ, ಅಗ್ನಿ ಶ್ರೀಧರ್ ತಮ್ಮ ದೃಷ್ಟಿಕೋನದಲ್ಲಿ ಕಂಡ ಭೂಗತ ಜಗತ್ತಿನ ಒಂದಷ್ಟು ಘಟನೆಗಳನ್ನು ಬೇರೆಯದ್ದೇ ರೀತಿಯಲ್ಲಿ ಸಿನಿಮಾದಲ್ಲಿ ತೋರಿಸಲಾಗಿದೆ. ಬೆಂಗಳೂರು ಭೂಗತ ಪಾತಕಿಗಳ ಹಿನ್ನೆಲೆ, ಅವರ ಬೆಳವಣಿಗೆ, ಪೊಲೀಸ್ ವ್ಯವಸ್ಥೆ, ರಾಜಕೀಯ ವೈಷಮ್ಯ, ಸಾಮಾಜಿಕ ಸ್ಥಿತಿ-ಗತಿ, ಹೀಗೆ ಮೇಲ್ನೋಟಕ್ಕೆ ಕಾಣದ ಒಂದಷ್ಟು ಒಳ ಚಿತ್ರಣವನ್ನು “ಹೆಡ್ ಬುಷ್’ ಸಿನಿಮಾದಲ್ಲಿ ರಸವತ್ತಾಗಿ ಹಿಡಿದಿಡಲಾಗಿದೆ. ಹಾಗಂತ ಕೆಲವೊಂದು ವಿಷಯಗಳು ತಾರ್ಕಿಕವಾಗಿ ಒಪ್ಪಲು ಸಾಧ್ಯವಾಗದಿರುವುದರಿಂದ, ವಾಸ್ತವ ನೆಲೆಗಟ್ಟಿಗಿಂತ ಕಾಲ್ಪನಿಕ ನೆಲೆಗಟ್ಟಿನಲ್ಲೆ “ಹೆಡ್ ಬುಷ್’ ನೋಡಿ ಖುಷಿಪಡುವುದು ಒಳ್ಳೆಯದು. ಮೊದಲಾರ್ಧ ರಕ್ತಪಾತದಲ್ಲಿ ಸಾಗುವ ಕಥೆಗೆ ಮಧ್ಯಂತರದ ನಂತರ ರಾಜಕೀಯ ನಂಟು ಬೆಸೆದುಕೊಳ್ಳುತ್ತದೆ.
ಇನ್ನು ನಟ ಡಾಲಿ ಧನಂಜಯ್ ಡಾನ್ ಜಯರಾಜ್ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ನೆಗೆಟಿವ್ ಶೇಡ್‌ನಲ್ಲಿರುವ ಪಾತ್ರದಲ್ಲಿ ಡಾಲಿ ಫುಲ್‌ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಉಳಿದಂತೆ ಗಂಗು ಪಾತ್ರದಲ್ಲಿ ಲೂಸ್‌ಮಾದ ಯೋಗಿ, ಸ್ಯಾಮ್ಸನ್ ಪಾತ್ರದಲ್ಲಿ ಬಾಲು ನಾಗೇಂದ್ರ, ಕೊತ್ವಾಲ್ ಪಾತ್ರದಲ್ಲಿ ವಸಿಷ್ಟ ಸಿಂಹ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತವೆ. ಇನ್ನುಳಿದ ಪಾತ್ರಗಳ ಬಗ್ಗೆ ಅಷ್ಟೇನೂ ಹೇಳುವಂತಿಲ್ಲ
ಜಿ.ಎಸ್.ಕಾರ್ತಿಕ ಸುಧನ್