“ಅವರ ಸಾವಿನ ಬಗ್ಗೆಯೇ ತಲೆಕೆಡಿಸಿಕೊಳ್ಳ ದವರು ಇನ್ನು ಬೇರೆಯವರು ನೀರಿಲ್ಲದೇ ಸಾಯೋದರ ಬಗ್ಗೆ ತಲೆಕೆಡಿಸ್ಕೋತಾರಾ..’ -ರೋಷ ತುಂಬಿದ ಕಣ್ಣಿನೊಂದಿಗೆ ಸಣ್ಣ ಹುಡುಗ ಹೀಗೆ ಹೇಳುವ ಹೊತ್ತಿಗೆ ಆರು ಜನ ಬಲಿಯಾಗಿರುತ್ತಾರೆ. ಅಲ್ಲಿಂದ ಊರಿಗೆ ನೀರು ಬರುತ್ತದೆ… ನೀರಿನ ಹಿಂದೆ ರಕ್ತದ ಕೋಡಿಯೂ… ಪರಿಸ್ಥಿತಿ ನೋಡ ನೋಡುತ್ತಲೇ ಬದಲಾಗುತ್ತದೆ. ಕಾನೂನು ಸೈಡಾಗಿ, ಲಾಂಗ್ ಕೈ ಸೇರುತ್ತದೆ. ಇಷ್ಟು ಹೇಳಿದ ಮೇಲೆ ನಿಮಗೆ “ಭೈರತಿ ರಣಗಲ್’ ಬಗ್ಗೆ ಒಂದು ಅಂದಾಜು ಸಿಕ್ಕಿರುತ್ತದೆ.
“ಭೈರತಿ ರಣಗಲ್’ ಈ ಹಿಂದೆ ತೆರೆಕಂಡಿರುವ “ಮಫ್ತಿ’ ಚಿತ್ರದ ಪ್ರೀಕ್ವೆಲ್. ಅಲ್ಲಿ ಭೈರತಿ ರಣಗಲ್ ಪಾತ್ರ ತನ್ನ ಖಡಕ್ ಹಾಗೂ ರಗಡ್ ಮ್ಯಾನರೀಸಂನಿಂದ ಪ್ರೇಕ್ಷಕರ ಮನಗೆದ್ದಿತ್ತು. ಆದರೆ, ಆ ಪಾತ್ರದ ಹಿನ್ನೆಲೆಯೇನು, ಹೃದಯ ಕಲ್ಲಾಗಿಸಿಕೊಂಡು ಮುಂದೆ ಸಾಗುತ್ತಿರುವ ಭೈರತಿ ಯಾರು, ಆತನ ಪೂರ್ವ-ಪರ ಏನು ಎಂಬ ಒಂದಷ್ಟು ಕುತೂಹಲಕಾರಿ ಅಂಶಗಳನ್ನು ಸೇರಿಸಿ ಮಾಡಿರುವ ಸಿನಿಮಾವೇ “ಭೈರತಿ ರಣಗಲ್’. ಇಡೀ ಸಿನಿಮಾದ ಕಥೆ ನಡೆಯೋದು “ರೋಣಾಪುರ’ ಎಂಬ ಊರಿ ನಲ್ಲಿ. ಮೈ ತುಂಬಾ ಮೈನಿಂಗ್ ತುಂಬಿಕೊಂಡಿರುವ ಈ ಊರಿನ ರಕ್ತಸಿಕ್ತ ಅಧ್ಯಾಯಕ್ಕೆ ರಕ್ತ ರಂಗೋಲಿ ಬಿಡಿ ಸೋದು ಭೈರತಿ ರಣಗಲ್.
ನಿರ್ದೇಶಕ ನರ್ತನ್ ಉದ್ದೇಶ ಸ್ಪಷ್ಟ. ಶಿವರಾಜ್ ಕುಮಾರ್ ಅವರನ್ನು ಎಷ್ಟು ರಗಡ್ ಆಗಿ ತೋರಿಸಬಹುದೋ, ಅಷ್ಟು ತೋರಿಸಬೇಕು. ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಮೊದಲೇ ಹೇಳಿದಂತೆ ಕಥೆ ತುಂಬಾ ಹೊಸದೇನು ಅಲ್ಲ. ಒಂದು ಔಟ್ ಅಂಡ್ ಔಟ್ ಮಾಸ್ ಸಿನಿಮಾವಿದು. ತನ್ನ ಜನರ ಪರ ನಿಲ್ಲಲು ಹೊರಟಾಗ ಎದುರಾಗುವ ಸವಾಲು ಹಾಗೂ ಅದನ್ನು ಮೆಟ್ಟಿ ಮುಂದೆ ಸಾಗುವ ಭೈರತಿಯ ಧೈರ್ಯವೇ ಈ ಸಿನಿಮಾದ ಒನ್‌ಲೈನ್.
ಇಲ್ಲಿ ಕಥೆಗಿಂತ ಸನ್ನಿವೇಶ ಹಾಗೂ ಅದನ್ನು ಕಟ್ಟಿಕೊಟ್ಟ ಪರಿಸರವೇ ಹೆಚ್ಚು ಹೈಲೈಟ್. ನಿಧಾನವಾಗಿ ತೆರೆದುಕೊಳ್ಳುವ ಕಥೆಯಲ್ಲಿ ಅಣ್ಣ-ತಂಗಿ ಸೆಂಟಿಮೆಂಟ್, ಒಂಚೂರು ಪ್ರೀತಿಯ ಪಸೆಯೂ ಕಾಣಸಿಗುತ್ತದೆ. ಆದರೆ, ಇಡೀ ಸಿನಿಮಾದ ಹೈಲೈಟ್ ಮಾಸ್. ಶಿವಣ್ಣ ಇಲ್ಲಿ ಭೈರತಿಯಾಗಿ ಮತ್ತೂಮ್ಮೆ ಮಾಸ್ ಮಹಾರಾಜ್ ಆಗಿದ್ದಾರೆ. ಲಾಂಗ್ ಹಿಡಿದು ಅಖಾಡಕ್ಕೆ ಇಳಿದರೆ ಉರುಳುವ ತಲೆಗಳಿಗೆ, ಚಿಮ್ಮುವ ರಕ್ತಗಳಿಗೆ ಲೆಕ್ಕವೇ ಇಲ್ಲ. ಭೈರತಿಯದ್ದು ಮಾತು ಕಮ್ಮಿ ಕೆಲಸ ಜಾಸ್ತಿ…. ತಾಳ್ಮೆ ಕಳೆದುಕೊಂಡರೆ ಉರುಳುವ ತಲೆಗಳು ಒಂದಾ, ಎರಡಾ… ಇಂತಹ ಪಾತ್ರದ ಮೂಲಕ “ಭೈರತಿ ರಣಗಲ್’ ಸಾಗಿದೆ. ಇಡೀ ಸಿನಿಮಾವನ್ನು ಹೊತ್ತು ಸಾಗಿರುವುದು ಶಿವರಾಜ್‌ಕುಮಾರ್.
ಅವರಿಲ್ಲಿ ಎರಡು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಕಾನೂನು ಮೂಲಕ ಜನರನ್ನು ರಕ್ಷಣೆ ಮಾಡುವ, ಇನ್ನೊಂದು ಲಾಂಗ್ ಮೂಲಕ. ಅದು ಹೇಗೆ ಮತ್ತು ಆ ಬದಲಾವಣೆ ಏನು ಎಂಬ ಕುತೂಹಲವೇ “ಭೈರತಿ’.
ಇಲ್ಲಿ ಶಿವರಾಜ್‌ಕುಮಾರ್ ಅವರ ಲುಕ್, ಮ್ಯಾನರೀಸಂ, ಕಾಸ್ಟೂéಮ್ ಎಲ್ಲವೂ ಪಾತ್ರಕ್ಕೆ ಹೊಂದಿಕೊಂಡಿದೆ. ನಾಯಕಿ ರುಕ್ಮಿಣಿ ವಸಂತ್‌ಗೆ ಇಲ್ಲಿ ಹೆಚ್ಚೇನು ಕೆಲಸವಿಲ್ಲ. ವೈದ್ಯೆಯಾಗಿ ಕಾಣಿಸಿಕೊಂಡಿರುವ ಅವರ ಪಾತಕ್ಕೆ ಹೆಚ್ಚಿನ ಮಹತ್ವವಿಲ್ಲ. ಉಳಿದಂತೆ ಅವಿನಾಶ್, ರಾಹುಲ್ ಬೋಸ್, ದೇವರಾಜ್, ಮಧುಗುರುಸ್ವಾಮಿ, ಗೋಪಾಲ ದೇಶಪಾಂಡೆ ನಟಿಸಿದ್ದಾರೆ. ಶಿವರಾಜ್‌ಕುಮಾರ್ ಅವರ ಮಾಸ್ ಅವತಾರವನ್ನು ಇಷ್ಟಪಡುವವರಿಗೆ “ಭೈರತಿ’ ಒಳ್ಳೆಯ ಆಯ್ಕೆ.
ರವಿಪ್ರಕಾಶ್ ರೈ