ಜೀವನದಲ್ಲಿ ತೃಪ್ತಿ ಮತ್ತು ಪ್ರಾಪ್ತಿ ಎರಡೂ ತುಂಬಾ ಮುಖ್ಯ. ಇವೆರಡು ಸಿಕ್ಕರೆ ಒಂದು ನೆಮ್ಮದಿ ಎಂದು ಭಾವಿಸುವವರು ಅನೇಕರು. ಇದೇ ವಿಚಾರವನ್ನು ಮುಖ್ಯವಾಗಿಟ್ಟುಕೊಂಡು ತೆರೆಗೆ ಬಂದಿರುವ ಸಿನಿಮಾ “ಪ್ರಾಪ್ತಿ’. ವಿಧಿ ನಿಗದಿಯಾಗಿದೆ ಎಂಬ ಟ್ಯಾಗ್‌ಲೈನ್ ಚಿತ್ರಕ್ಕಿದೆ. ಈ ಚಿತ್ರದಲ್ಲಿ ನಿರ್ದೇಶಕರು ಹಲವು ವಿಚಾರಗಳನ್ನ ಹೇಳಲು ಪ್ರಯತ್ನಿಸಿದ್ದಾರೆ.
ಈಗಿನ ಕಾಲಮಾನದಲ್ಲಿ ನಡೆಯುತ್ತಿರುವ ಮೂರು ಅಂಶಗಳನ್ನು ಬಳಸಿಕೊಂಡು, ಸಂದೇಶದ ಮೂಲಕ ತೋರಿಸುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಮೊದಲನೆಯದಾಗಿ ಮದುವೆ ಬಳಿಕದ ಅಕ್ರಮ ಸಂಬಂಧ, ಇದರಿಂದ ಪತಿ-ಪತ್ನಿ ನಡುವೆ ಬಿರುಕು ಬಂದು ವಿಚ್ಚೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ. ಎರಡನೆಯದು ಆಕರ್ಷಣೆ. ಇದು ಹೆಚ್ಚಾಗಿ ಸಣ್ಣ ಹುಡುಗರು, ಹುಡುಗಿಯರಲ್ಲಿ ಕಂಡು ಬರುತ್ತದೆ.
ಇದರಿಂದ ಮಾನಸಿಕವಾಗಿ ಕುಗ್ಗುತ್ತಾರೆ. ಕೊನೆಯದಾಗಿ ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುವುದು. ಅಂದರೆ ನೃತ್ಯ ಅದರಲ್ಲೂ ಭರತನಾಟ್ಯ ವಿಶ್ವದೆಲ್ಲೆಡೆ ಪ್ರಚಲಿತವಾಗಿದೆ. ಇವೆಲ್ಲವು ಸಸ್ಪೆನ್ಸ್-ಥ್ರಿಲ್ಲರ್‌ನೊಂದಿಗೆ ಹೇಳಲಾಗಿದೆ. ಈ ಹಾದಿಯಲ್ಲಿ ಒಂದಷ್ಟು ಕುತೂಹಲದ ಅಂಶಗಳು ಕೂಡಾ ಸಿಗುತ್ತವೆ.
ಒಂದು ಸಿನಿಮಾದ ಹಲವು ವಿಭಾಗಗಳಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭಾ ಪ್ರದರ್ಶನ ಮಾಡುವ ಅನೇಕರು ಚಿತ್ರರಂಗದಲ್ಲಿ ಸಿಗುತ್ತಾರೆ. ಈ ಸಾಲಿಗೆ ಡಾ.ಎಸ್.ಮಹೇಶ್ ಬಾಬು ಕೂಡಾ ಸೇರುತ್ತಾರೆ. “ಪ್ರಾಪ್ತಿ’ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಂಕಲನ, ನಿರ್ದೇಶನ ಜತೆಗೆ ಸಿಸಿ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಾಣ ಕೂಡಾ ಮಾಡದ್ದಾರೆ.
ಜಯಸೂರ್ಯ ಈ ಚಿತ್ರದ ನಾಯಕ. ಗಾಯಕಿ ಮಂಜುಳಾ ಗುರುರಾಜ್ ಸೊಸೆ ಗೌರಿಸಾಗರ್ ವೃತ್ತಿಯಲ್ಲಿ ಡ್ಯಾನ್ಸರ್. ಸಿನಿಮಾದಲ್ಲೂ ಅದೇ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಉಳಿದಂತೆ ನಿನಿಖೀತಾರಾಂ,ಮೋನಿಷಾ ಥಾಮಸ್, ಕಳಸ ಮಂಜುನಾಥ್ ನಟಿಸಿದ್ದಾರೆ.