Advertisement

ಸೌದಿಯವರಿಗೆ ಹಜ್‌ ಯಾತ್ರೆಗೆ ಅವಕಾಶ

11:53 AM Jun 24, 2020 | mahesh |

ರಿಯಾದ್‌: ಮುಸ್ಲಿಂ ಸಮುದಾಯದ ಪವಿತ್ರ ಯಾತ್ರೆಯೆಂದೇ ಪರಿಗಣಿಸಲ್ಪಡುವ ಹಜ್‌ ಯಾತ್ರೆ ರದ್ದತಿ ಬಗೆಗಿನ ಊಹಾಪೋಹಗಳಿಗೆ ಸೌದಿ ರಾಜ ಮನೆತನ ಸಂಪೂರ್ಣವಾಗಿ ತೆರೆ ಎಳೆದಿದೆ. ಜುಲೈ ಅಂತ್ಯದಲ್ಲಿ ಆರಂಭವಾಗುವ ಹಜ್‌ ಪ್ರವಾಸಕ್ಕೆ ಈ ಬಾರಿ ಹೊರದೇಶದವರಿಗೆ ಪ್ರವೇಶವಿಲ್ಲ ಎಂಬ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಕೋವಿಡ್‌ ವೈರಸ್‌ ಕಾರಣದಿಂದ ಈ ಬಾರಿ ಹಜ್‌ ಯಾತ್ರೆ ನಡೆಯಲಿದೆಯೇ? ಇಲ್ಲವೇ? ಎಂಬ ಬಗ್ಗೆ ವಿಶ್ವಾದ್ಯಂತ ಪ್ರಶ್ನೆಗಳೆದ್ದಿದ್ದವು. ಹಲವು ದೇಶಗಳು ತಮ್ಮ ದೇಶವಾಸಿಗಳನ್ನು ಈ ಬಾರಿ ಯಾತ್ರೆಗೆ ಕಳಹಿಸುವುದಿಲ್ಲವೆಂದು ಈಗಾಗಲೇ ತಿಳಿಸಿದ್ದವು, ಇದೇ ವೇಳೆ ಹಜ್‌ ಯಾತ್ರೆ ವಿಚಾರದಲ್ಲಿ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ, ಕೆಲವು ದೇಶಗಳು ಅದಕ್ಕೆ ಅನುವು ಮಾಡುಂತೆ ಸೌದಿ ಅರೇಬಿಯಾವನ್ನು ವಿನಂತಿಸಿದ್ದವು. ಇದಕ್ಕೆ ಪೂರಕವಾಗಿ ನಿನ್ನೆಯಷ್ಟೇ ದೇಶದಲ್ಲಿ ಹೇರಿದ್ದ ಕರ್ಫ್ಯೂವನ್ನು ಸಂಪೂರ್ಣವಾಗಿ ಹಿಂಪಡೆದ ಸೌದಿ ಇದೀಗ ಹಜ್‌ ಯಾತ್ರೆ ಬಗ್ಗೆಯೂ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

Advertisement

ಅದರಂತೆ ಇದೇ ಮೊದಲ ಬಾರಿಗೆ ಸೌದಿ ರಾಷ್ಟ್ರ ಹೊರತುಪಡಿಸಿ ಉಳಿದ ರಾಷ್ಟ್ರಗಳ ಮುಸ್ಲಿಂ ಸಮುದಾಯದವರಿಗೆ ಈ ಬಾರಿ ಹಜ್‌ ಪ್ರವಾಸಕ್ಕೆ ಅವಕಾಶವಿಲ್ಲ. ಕಳೆದ ಬಾರಿ ಅಂದಾಜು 25 ಲಕ್ಷ ಯಾತ್ರಿಕರಿದ್ದ ಹಜ್‌ ಯಾತ್ರೆ ಈ ಬಾರಿ ಕೆಲವೇ ಕೆಲವು ಯಾತ್ರಿಕರೊಂದಿಗೆ ನಡೆಯಲಿದೆ. ಈಗಾಗಲೇ ರಾಷ್ಟ್ರದಲ್ಲಿ ಇರುವ ಇತರ ದೇಶಗಳ ಪ್ರವಾಸಿಗರಿಗೂ ಯಾತ್ರೆಗೆ ಅವಕಾಶ ಸಿಗಲಿದೆ. ಯಾತ್ರೆಯನ್ನು ಹೆಚ್ಚು ಭದ್ರತೆ ಹಾಗೂ ಸುರಕ್ಷತೆ ಯೊಂದಿಗೆ ನಡೆಸುವುದಕ್ಕಾಗಿ ರಾಜ ಮನೆತನದವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸೌದಿಯಲ್ಲಿ ಈಗಾಗಲೇ 161000 ಜನ ಸೋಂಕಿತರಿದ್ದು, ಸೋಂಕಿನಿಂದ 1300 ಮಂದಿ ಮೃತಪಟ್ಟಿದ್ದಾರೆ. ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಹಜ್‌ ಯಾತ್ರೆ ಆರಂಭವಾದಂದಿನಿಂದ ಇಲ್ಲಿಯವರೆಗೆ ಪ್ರವಾಸ ಮೊಟಕುಗೊಂಡ ಇತಿಹಾಸವೇ ಇರಲಿಲ್ಲ. ಹಾಗಾಗದಿರಲು ಸೌದಿಯವರಿಗೆ ಮಾತ್ರ ಯಾತ್ರೆಗೆ ಅವಕಾಶ ಮಾಡಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next