ಐಟಿ ಹಬ್, ಸಿಲಿಕಾನ್ ಸಿಟಿ ರೂವಾರಿ, ಸಜ್ಜನ, ಮುತ್ಸದ್ಧಿ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಮಂಗಳವಾರ (ಡಿ.09) ನಸುಕಿನ ವೇಳೆ ಇಹಲೋಕ ತ್ಯಜಿಸಿದ್ದಾರೆ. ರಾಜ್ಯ, ರಾಷ್ಟ್ರರಾಜಕಾರಣದಲ್ಲಿ ಛಾಪು ಮೂಡಿಸಿದ್ದ ಎಸ್ ಎಂಕೆಗೂ ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿಗೂ ಎಲ್ಲಿಂದ ಎಲ್ಲಿಯ ನಂಟು…ಹೌದು ಮಂಡ್ಯದ ಮದ್ದೂರಿನ ಯುವಕನ ಮೇಲೆ ಜಾನ್ ಎಫ್ ಕೆನಡಿ(John F Kennedy) ಪ್ರಭಾವ ಬೀರಿದ್ದಾದರು ಹೇಗೆ?
ರಾಜ್ಯ ರಾಜಕಾರಣದಲ್ಲಿ ಹಲವರನ್ನು ರಾಜಕೀಯ ಮುನ್ನಲೆಗೆ ತಂದಿದ್ದ ಎಸ್ ಎಂಕೆ, ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರನ್ನು ತನ್ನ ರಾಜಕೀಯ ಗುರು ಎಂದೇ ಪರಿಗಣಿಸಿದ್ದರು. 1960ನೇ ಇಸವಿಯಲ್ಲಿ ಡೆಮಾಕ್ರಟಿಕ್ ಮುಖಂಡ ಜಾನ್ ಎಫ್ ಕೆನಡಿ ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.
ಈ ಸಂದರ್ಭದಲ್ಲಿ ಅಮೆರಿಕದಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದ 28ರ ಹರೆಯದ ಕೃಷ್ಣ…ಜಾನ್ ಎಫ್ ಕೆನಡಿ ಅವರಿಗೆ ಪತ್ರ ಬರೆದು ಇಂಡಿಯನ್ ಅಮೆರಿಕನ್ ಸಮುದಾಯದವರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ನಿಮ್ಮ ಪರವಾಗಿ ಚುನಾವಣಾ ಪ್ರಚಾರ ಮಾಡುವ ಅವಕಾಶ ನೀಡುವಂತೆ ವಿನಂತಿಸಿಕೊಂಡಿದ್ದರು. ಅದಕ್ಕೆ ಜಾನ್ ಎಫ್ ಕೆನಡಿ…ಗೋ ಅಹೆಡ್ ಎಂದು ಪತ್ರ ಮುಖೇನ ತಿಳಿಸಿದ್ದರಂತೆ!
ಆ ಚುನಾವಣೆಯಲ್ಲಿ ಜಾನ್ ಎಫ್ ಕೆನಡಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಯುವ ಭಾರತೀಯ ವಿದ್ಯಾರ್ಥಿ ನೀಡಿದ ಬೆಂಬಲವನ್ನು ಕೆನಡಿ ಸದಾ ನೆನಪಿಸಿಕೊಳ್ಳುತ್ತಿದ್ದರು ಎಂದು ಎಸ್.ಎಂ.ಕೆ ಜೀವನಗಾಥೆಯಲ್ಲಿ ದಾಖಲಿಸಿದ್ದರು.
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಕೆನಡಿ ಅವರು ಧನ್ಯವಾದ ತಿಳಿಸುವ ಪತ್ರವೊಂದನ್ನು ಬರೆದಿದ್ದನ್ನು ಎಸ್ ಎಂಕೆ ಜೀವನಗಾಥೆಯಲ್ಲಿ ಹಂಚಿಕೊಂಡಿದ್ದು ಹೀಗೆ…ಡಮಾಕ್ರಟಿಕ್ ಪಕ್ಷದ ಪರವಾಗಿ ನೀವು ಚುನಾವಣ ಸಂದರ್ಭದಲ್ಲಿ ಕೈಗೊಂಡ ಪ್ರಚಾರ ಕಾರ್ಯಕ್ಕಾಗಿ ಧನ್ಯವಾದಗಳು. ನೀವು ನಮ್ಮ ಪ್ರಚಾರ ಕಾರ್ಯದಲ್ಲಿ ಸಹಭಾಗಿತ್ವ ವಹಿಸಿರುವುದಕ್ಕೆ ಆಭಾರಿಯಾಗಿದ್ದೇನೆ. ಆದರೆ ನಾನು ಖುದ್ದಾಗಿ ನಿಮ್ಮನ್ನು ಭೇಟಿಯಾಗಿ ಧನ್ಯವಾದ ಹೇಳಲು ಅಸಾಧ್ಯವಾಗಿರುವುದಕ್ಕೆ ಕ್ಷಮಿಸಿ” ಎಂದು ಪತ್ರದಲ್ಲಿ ಕೆನಡಿ ಉಲ್ಲೇಖಿಸಿದ್ದರು.
“ನಿಮ್ಮ ಅಭೂತಪೂರ್ವವಾದ ಶ್ರಮ ಮತ್ತು ನಿಷ್ಠೆಯ ಹೊರತಾಗಿ ಜಯಗಳಿಸುವುದು ಈ ಚುನಾವಣೆಯಲ್ಲಿ ಸುಲಭವಾಗಿರಲಿಲ್ಲವಾಗಿತ್ತು ಎಂದು ಜಾನ್ ಎಫ್ ಕೆನಡಿ ಎಸ್ ಎಂಕೆ ಅವರನ್ನು ಗುಣಗಾನ ಮಾಡಿದ್ದರು.
ಎಸ್ ಎಂಕೆ ನಿಧನ ಹಿನ್ನೆಲೆಯಲ್ಲಿ ಗೌರವ ಸೂಚಕವಾಗಿ ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆ ಘೋಷಿಸಿದೆ. ಅಲ್ಲದೇ ಬುಧವಾರ (ಡಿ10) ರಾಜ್ಯದಾದ್ಯಂತ ಎಲ್ಲಾ ಶಾಲಾ, ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಈ ಮೂರು ದಿನಗಳ ಕಾಲ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.