ಕೂದಲು ಉದುರುವುದು, ತಲೆಹೊಟ್ಟು, ತುರಿಕೆ, ಸತ್ವಹೀನ ಕೂದಲು, ಬಿಳಿಗೂದಲು… ಇವು ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಗಳು. ಶ್ಯಾಂಪೂ, ಎಣ್ಣೆ, ಕಂಡಿಷನರ್ ಅಂತ ಏನನ್ನೆಲ್ಲಾ ಬಳಸಿದರೂ ಪ್ರಯೋಜನ ಮಾತ್ರ ಶೂನ್ಯ. ಆದರೆ, ಕೂದಲನ್ನು ಸದೃಢವಾಗಿಸುವ ಕೆಲವು ವಸ್ತುಗಳಿವೆ. ಇವುಗಳನ್ನು ಶ್ಯಾಂಪೂವಿನ ಜೊತೆಗೆ ಬೆರೆಸಿದರೆ ಕೂದಲಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ರೋಸ್ ವಾಟರ್: ಶ್ಯಾಂಪೂವಿನ ಜೊತೆಗೆ ರೋಸ್ ವಾಟರ್ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಮೃದುವಾಗುವುದಲ್ಲದೆ, ತಲೆ ತುರಿಕೆ ದೂರಾಗುತ್ತದೆ.
ಲಿಂಬೆ ರಸ: ಕೂದಲು ಒಣಹುಲ್ಲಿನಂತೆ ಸತ್ವಹೀನವಾಗಿದ್ದರೆ, ಶ್ಯಾಂಪೂವಿಗೆ ಲಿಂಬೆ ರಸ ಬೆರೆಸಿ ಬಳಸಿ. ಲಿಂಬೆ ರಸವು ಕೂದಲು ಮತ್ತು ಕೂದಲಿನ ಬುಡಕ್ಕೆ ಅಗತ್ಯ ತೇವಾಂಶವನ್ನು ನೀಡುತ್ತದೆ.
ಜೇನು: ನೆತ್ತಿ/ಕೂದಲಿನ ಬುಡದ ಆರೋಗ್ಯಕ್ಕೆ ಒಳ್ಳೆಯದು. ಶ್ಯಾಂಪೂವಿನ ಜೊತೆಗೆ ಶುದ್ಧ ಜೇನುತುಪ್ಪವನ್ನು ಬೆರೆಸಿದರೆ, ತುರಿಕೆ ಉಂಟು ಮಾಡುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಕೂದಲಿನ ಹೊಳಪು ಹೆಚ್ಚುತ್ತದೆ.
ಲೋಳೆಸರ: ತಲೆ ತುರಿಕೆ, ಕೂದಲು ಉದುರುವುದು, ತಲೆಹೊಟ್ಟಿನ ಸಮಸ್ಯೆ ಇದ್ದವರು ಶ್ಯಾಂಪೂವಿನ ಜೊತೆಗೆ ಲೋಳೆಸರ (ಅಲೊವೆರಾ) ಮಿಶ್ರಣ ಮಾಡಿ.
ನೆಲ್ಲಿಕಾಯಿ: ಶ್ಯಾಂಪೂವಿನ ಜೊತೆಗೆ ನೆಲ್ಲಿಕಾಯಿ ರಸ ಬೆರೆಸಿದರೆ, ಕೂದಲು ಸದೃಢವಾಗುವುದಲ್ಲದೆ, ತಲೆಹೊಟ್ಟು ನಿವಾರಣೆಯಾಗುತ್ತದೆ.
* ಭಾಗ್ಯ ಎಸ್. ಬುಳ್ಳಾ