ಬನಹಟ್ಟಿ: ನಿಸ್ವಾರ್ಥದಿಂದ ಶಿಕ್ಷಣ ದಾಸೋಹ ನಡೆಸಿ ವಿದ್ಯಾರ್ಥಿಗಳ ಭವಿಷ್ಯ ಬೆಳಗುವಲ್ಲಿ ಗುರುಗಳ ಪಾತ್ರ ಹಿರಿದು. ಇಂಥವರ ಆದರ್ಶ, ಅನುಕರಣೀಯ. ಇದರ ನೆನಪಿನೊಂದಿಗೆ ಬದುಕು ಸಾಗಿಸಿದರೆ ನೆಮ್ಮದಿ ಸಾಧ್ಯ. ಜ್ಞಾನದ ಆಲಿಂಗನದಿಂದ ಸನ್ಮಾರ್ಗ ಸಾಧ್ಯ ಎಂದು ಎಂದು ರಬಕವಿ ಬ್ರಹ್ಮಾನಂದ ಮಠದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ನಗರದ ಭದ್ರನ್ನವರ ಸಮುದಾಯ ಭವನದಲ್ಲಿ ನಡೆದ 1967-68ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸುವರ್ಣ ಸಂಭ್ರಮ, ಗುರುವಂದನೆ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಶಿಕ್ಷಣ ಆಧುನಿಕ ಯುಗದಲ್ಲಿ ವ್ಯಾಪಾರೀಕರಣವಾಗುತ್ತಿದೆ. ಇಂತಹ ಯುಗದಲ್ಲೂ ಪ್ರೀತಿ, ಆದರ್ಶ, ಸೇವೆಯಿಂದ ವಿದ್ಯೆಯ ದಾಸೋಹ ನಡೆಯುತ್ತಿರುವುದು ಶ್ಲಾಘನೀಯ. ಅದರಂತೆ ಗುರುಗಳಿಗೆ ಭಕ್ತಿಯೆಂಬ ಬತ್ತಿಯಿಂದ ಜ್ಞಾನದ ಜ್ಯೋತಿ ಹೊತ್ತಿದೊಡೆ ಬದುಕಿನಲ್ಲಿ ಬೆಳಕು ಪ್ರಜ್ವಲಿಸುವುದು. ಅಂತೆಯೇ ಗುರುವಿನ ಸ್ಮರಣೆಯನ್ನು 50 ವರ್ಷಗಳ ನಂತರವೂ ಸ್ಮರಣಿಸುತ್ತಿರುವುದು ಗುರು-ಶಿಷ್ಯರ ಬಾಂಧವ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಹಿರೇಮಠದ ಶರಣಬಸವ ಶಿವಾಚಾರ್ಯರು ಮಾತನಾಡಿ, ಗುರು-ಶಿಷ್ಯ ಬಾಂಧವ್ಯದ ಬೆಸುಗೆ ಜೀವನದುದ್ದಕ್ಕೂ ಮಾರ್ಗ ಸೂಚಿಯಾಗಿರುತ್ತದೆ. ಗುರುವಿನ ಸ್ಮರಣೆ ಸದಾಕಾಲವಿದ್ದಲ್ಲಿ ಜೀವನದಲ್ಲಿ ಉತ್ತಮ ಭವಿಷ್ಯ ನಿರ್ಮಿಸುವುದರ ಜೊತೆಗೆ ಸದಾಕಾಲ ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ವಿಶ್ರಾಂತ ಪ್ರಾಚಾರ್ಯ ಎಂ.ಎಸ್. ಮುನ್ನೋಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ನಿವೃತ್ತ ಶಿಕ್ಷಕರಾದ ಪಿ.ಎಂ. ಧುಪದಾಳ, ಬಿ.ಕೆ. ಜಾನಕ್ಕಿ, ಡಿ.ಎ. ಬಾಗಲಕೋಟ, ಎ.ಆರ್. ವಿಭೂತಿ, ಸುರೇಶ ಕೋಲಾರ, ಬಸವರಾಜ ಭದ್ರನ್ನವರ, ಎಚ್.ಬಿ. ಸಂಕಣ್ಣವರ, ಸೀತಾರಾಮ ಮಡ್ಡಿಮನಿ, ನೀಲಕಂಠ
ಕಡಪಟ್ಟಿ, ರಾಜೇಂದ್ರ ಡೋರ್ಲೆ, ಚನ್ನಪ್ಪ ಹೆಗಡಿ, ಮೈತ್ರಿ, ರಾಜೇಂದ್ರ ಬಾಗಲಕೋಟ, ಚಂದ್ರಶೇಖರ ಬಡೇಮಿ, ಪ್ರಭು ಭದ್ರನ್ನವರ, ಅಶೋಕ ಬಕರೆ, ಶಿವರುದ್ರಯ್ಯ ಕಾಡದೇವರ, ಪರಪ್ಪ ಭದ್ರನ್ನವರ, ಆರ್.ಎ. ಕುಲಕರ್ಣಿ, ಪ್ರಕಾಶ ಬಂದಿ ಇದ್ದರು.
ಮಲ್ಲೇಶಪ್ಪ ಸುಟ್ಟಟ್ಟಿ ಸ್ವಾಗತಿಸಿದರು. ಈಶ್ವರ ಕೋಲಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧರಾಮ ಹಾವಿನಾಳ ಹಾಗೂ ಚಂದ್ರಪ್ರಭಾ ಬಾಗಲಕೋಟ ನಿರೂಪಿಸಿದರು. ಅಶೋಕ ಪತ್ತಾರ ವಂದಿಸಿದರು.