Advertisement

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

09:58 AM Dec 29, 2024 | Team Udayavani |

ಶಿರಿಯಾರ ಸಮೀಪ ಗಾವಳಿಯ ಬಡಿಯ ಕುಲಾಲ್‌-ಕೊಲ್ಲು ಕುಲಾಲ್ತಿ ದಂಪತಿಯ ಪುತ್ರನಾಗಿ 1949ರಲ್ಲಿ ಜನಿಸಿದ ಶೀನ ಕುಲಾಲ್‌ ಅವರು, ಎರಡನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ಕುಟುಂಬ ನಿರ್ವಹಣೆಗಾಗಿ ಯಕ್ಷಗಾನ ಮೇಳವನ್ನು ಸೇರ್ಪಡೆಗೊಂಡವರು. ಅನಂ ತರ ಸ್ವಂತ ಪರಿಶ್ರಮದಿಂದ ಕಲಾವಿದನಾಗಿ ಬೆಳೆದವರು.
ಗಾವಳಿ ಚಂದಯ್ಯ ಶೆಟ್ಟಿ, ಬಾಬು ಕುಲಾಲ್‌ ಮತ್ತು ಬಸವ ಕುಲಾಲರಿಂದ ವ್ಯವಸ್ಥಿತವಾದ ರಂಗವಿದ್ಯೆಯನ್ನು ಕರಗತ ಮಾಡಿಕೊಂಡ ಇವರು ಮಜ್ಜಿಗೆಬೆ„ಲು ಚಂದಯ್ಯ ಶೆಟ್ಟರಿಂದ ಮಾತುಗಾರಿಕೆ ಕಲಿತರು. ಹೀಗೆ ಹಂತ ಹಂತವಾಗಿ ಹವ್ಯಾಸಿ ಕಲಾವಿದರಾಗಿ ಬೆಳೆದರು. ಶ್ರೀಕ್ಷೇತ್ರ ಮಾರಣಕಟ್ಟೆ ಮೇಳದಲ್ಲಿ ಒಡ್ಡೋಲಗ ವೇಷಧಾರಿಯಾಗಿ ಗೆಜ್ಜೆ ಕಟ್ಟಿ ಬಳಿಕ ಕಮಲಶಿಲೆ, ಸೌಕೂರು, ಸಾಲಿಗ್ರಾಮ, ಅಮೃತೇಶ್ವರಿ ಮೇಳಗಳಲ್ಲಿ ಸೇವೆ ಸಲ್ಲಿಸಿ ಎರಡನೇ ವೇಷಧಾರಿಯಾಗಿ ಮಂದಾರ್ತಿ ಮೇಳಕ್ಕೆ ಸೇರ್ಪಡೆಯಾದರು. ಬಳಿಕ ಪೂರ್ಣ ಪ್ರಮಾಣದ ಎರಡನೇ ವೇಷಧಾರಿಯಾಗಿ ಹಾಲಾಡಿ, ಕಳುವಾಡಿ, ಮಾರಣಕಟ್ಟೆ ಮುಂತಾದ ಮೇಳಗಳಲ್ಲಿ ಸೇವೆ ಸಲ್ಲಿಸಿದರು.

Advertisement

ಇವರು ಮುಂಡಾಸು ವೇಷಧಾರಿಯಾಗಿ ಬಯಲಾಟ ರಂಗಸ್ಥಳಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಕೃಷ್ಣಾರ್ಜುನದ ಗಯಗಂಧರ್ವ, ಕೋಟೆಕರ್ಣ, ವೃಷಕೇತು, ಪ್ರದ್ಯುಮ್ನ, ಲೋಹಿತನೇತ್ರ, ವಿದ್ಯುನ್ಮಾಲಿ ಮುಂತಾದ ಸುಂದರ ವಾದ ಕೆಂಪು ಮತ್ತು ಕಪ್ಪು ಮುಂಡಾಸುಗಳು ನಡುತಿಟ್ಟಿಗೆ ಇವರ ಅಪೂರ್ವವಾದ ಕೊಡುಗೆಗಳು. ಎರಡನೇ ವೇಷಗಳಾದ ಕರ್ಣ, ಜಾಂಬವ, ಭೀಷ್ಮ, ರಾವಣ, ವೀರಮಣಿ, ಶನೀಶ್ವರ ಮಾತ್ರವಲ್ಲದೆ, ಪಾರ್ಟು ವೇಷಗಳಾದ ಕಂಸ, ಕಾಲನೇಮಿ, ಶುಂಭಾಸುರ, ಮುಂತಾದ ವೇಷಗಳು ಅಪಾರ ಜನಮನ್ನಣೆಗೆ ಪಾತ್ರವಾಗಿವೆ. ಜೋಡಾಟಗಳಲ್ಲಿ ಅವರ ಅಪೂರ್ವವಾದ ಮುಂಡಾಸು ವೇಷಗಳು ಜನಾಕರ್ಷಣೆಗೆ ಒಳಗಾಗಿವೆ.

ಸುದೀರ್ಘ‌ 40-45 ವರ್ಷಗಳ ಕಾಲ ಬಯಲಾಟ ರಂಗಸ್ಥಳವನ್ನು ಶ್ರೀಮಂತಗೊಳಿಸಿದ ಶೀನ ಕುಲಾಲರು ಅನಾರೋಗ್ಯದ ಕಾರಣ ಮೇಳದ ತಿರುಗಾಟ ಮೊಟಕುಗೊಳಿಸಿ ಸದ್ಯ ಪತ್ನಿ, ನಾಲ್ಕು ಮಕ್ಕಳೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಮುಂಬಯಿ ಕಲಾ ಪ್ರತಿಷ್ಠಾನ ಪ್ರಶಸ್ತಿ, ರಂಗಸ್ಥಳ ಪ್ರಶಸ್ತಿ ಸಹಿತ ಅನೇಕ ಸಮ್ಮಾನಗಳು ಸಂದಿವೆ.

ಯಕ್ಷಗಾನದಲ್ಲಿ ಪಾತ್ರಗಳಿಗೆ ಕಲಾವಿದರ ಆಯ್ಕೆ ಅಂದು ಹೇಗಿತ್ತು, ಇಂದು ಹೇಗಿದೆ?
ಅಂದಿನ ಕಾಲದಲ್ಲಿ ಪಾತ್ರ ವರ್ಗೀಕರಣ ವಿಶೇಷವಾಗಿತ್ತು. ಉದಾಹರಣೆಗೆ ಮುಮ್ಮೇಳದಲ್ಲಿ ಪ್ರಧಾನವಾಗಿ ಬಣ್ಣದ ವೇಷ, ಎರಡನೇ ವೇಷ, ಒತ್ತು ಎರಡನೇ ವೇಷ, ಪುರುಷ ವೇಷ, ಮೂರನೇ ವೇಷ, ಒತ್ತು ಮೂರನೇ ವೇಷ, ಕೆಂಪು ಮುಂಡಾಸು, ಕಪ್ಪು ಮುಂಡಾಸು, ಪೀಠಿಕೆ ರಾಜ, ಒಡ್ಡೋಲಗ ಹೀಗೆ ಶ್ರೇಣಿಕೃತವಾದ ಪಾತ್ರ ವರ್ಗೀಕರಣ ವ್ಯವಸ್ಥೆ ಇತ್ತು. ಒಂದು ಮೇಳದಲ್ಲಿ ಕರ್ಣಾರ್ಜುನ ಕಾಳಗ ಪ್ರಸಂಗ ಎಂದಾಕ್ಷಣ ಯಾವ ಕಲಾವಿದ, ಯಾವ ವೇಷ ಮಾಡುತ್ತಾನೆ ಎನ್ನುವುದನ್ನು ಅಭಿಮಾನಿಗಳೇ ಕಲ್ಪಿಸಿಕೊಳ್ಳುತ್ತಿದ್ದರು ಮತ್ತು ರಂಗದಲ್ಲಿ ಕೂಡ ಅದೇ ರೀತಿ ಪಾತ್ರ ವ್ಯವಸ್ಥೆ ಇರುತ್ತಿತ್ತು. ಆದರೆ ಈಗ ಈ ಶ್ರೇಣಿಕೃತ ವ್ಯವಸ್ಥೆಯೇ ಮರೆಯಾಗಿದೆ. ಪಾತ್ರಗಳ ಗೌರವ, ಮನ್ನಣೆ ಮರೆಯಾಗಲು ಇದೂ ಒಂದು ಕಾರಣ.

ಮುಂಡಾಸು ವೇಷಗಳಿಗೆ ಆ ಕಾಲದಲ್ಲಿ ಎಷ್ಟು ಗೌರವವಿತ್ತು?
ಜೋಡಾಟಗಳಲ್ಲಿ ಮುಂಡಾಸು ವೇಷಗಳ ಮೂಲಕವೇ ರಂಗಕ್ಕೆ ರಂಗು ತರುತ್ತಿದ್ದ ಕಾಲವೊಂದಿತ್ತು. ಆಗೆಲ್ಲ ಈಗಿನ ತರದಲ್ಲಿ ಥರ್ಮಾಕೋಲ್‌ ಬಳಕೆ ಇರಲಿಲ್ಲ. ಅಟ್ಟೆಮುಂಡಾಸು ಕಟ್ಟಿಯೇ ರಂಗವೇರಬೇಕಿತ್ತು. ಮುಂಡಾಸಿನಷ್ಟೇ ಭಾರ ಪಾತ್ರಕ್ಕಿತ್ತು. ನನ್ನ ಕರ್ಣ, ವೀರಮಣಿ ಮೊದಲಾದ ಮುಂಡಾಸಿನ ಪಾತ್ರಗಳು ಸಾಕಷ್ಟು ಹೆಸರು ತಂದುಕೊಡಲು ಇದೂ ಒಂದು ಕಾರಣ.

Advertisement

ಯಕ್ಷಗಾನದಲ್ಲಿ ತಾಂತ್ರಿಕತೆ ಎಷ್ಟು ಮುಖ್ಯ?
ತಾಂತ್ರಿಕತೆ ಎನ್ನುವುದು ಈಗಿನ ಬೆಳವಣಿಗೆ. ಆದರೆ ಐದಾರು ದಶಕದ ಹಿಂದೆ ಮಿರಿ-ಮಿರಿ ವಿದ್ಯುತ್‌ ದೀಪಗಳಿರಲಿಲ್ಲ, ಗ್ಯಾಸ್‌ ಲೈಟ್‌ನಲ್ಲೇ ಆಟ ಆಗುತ್ತಿತ್ತು. ಎಲೆಕ್ಟ್ರಾನಿಕ್‌ ಮೈಕ್‌ಗಳಿಲ್ಲದೆ ಭಾಗವತರ ಪದ ಮೂರು-ನಾಲ್ಕು ಮೈಲು ದೂರ ಕೇಳುತ್ತಿತ್ತು. ವೇಷಭೂಷಣಗಳು ತೀರಾ ಸರಳವಾಗಿತ್ತು. ಆದರೂ ಅಂದಿನ ಆಟದ ಸೊಬಗನ್ನು ಇಂದಿನ ಆಟದಲ್ಲಿ ನೋಡುವುದು ಅಪರೂಪ.

ನಿಮ್ಮ ಕಾಲದ ಮರೆಯಲಾಗದ ನೆನಪುಗಳು
ನಮ್ಮ ಕಾಲದ ಜೋಡಾಟಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದರ ಜತೆಗೆ ಆ ಕಾಲದಲ್ಲಿ ನಾವು ಎತ್ತಿನಗಾಡಿಯಲ್ಲಿ ಮೇಳದ ಪರಿಕರಗಳನ್ನು, ಕಲಾವಿದರನ್ನು ಕ್ಯಾಂಪ್‌ಗೆ ತೆರಳುತ್ತಿದ್ದೆವು. ಒಂದು ದಿನ ಮಾರಣಕಟ್ಟೆಯಲ್ಲಿ ಆಟ ಮುಗಿಸಿ ಬ್ರಹ್ಮಾವರಕ್ಕೆ ಹೋಗಬೇಕಿತ್ತು. ಗಾಡಿ ಹೊಡೆಯುವವ ಎಷ್ಟು ಹೊತ್ತಾದರೂ ಬರಲೇ ಇಲ್ಲ. ಕೊನೆಗೆ ಕಲಾವಿದರೆಲ್ಲ “ಶೀನಣ್ಣ ಗಾಡಿ ಹ್ವಡೀನಿ’ ಅಂದ್ರು; ನಾನೇ ಗಾಡಿ ಹೊಡೆದುಕೊಂಡು ಆಟದ ಸ್ಥಳಕ್ಕೆ ತಲುಪಿಸಿದ್ದೆ. ಇದೆಲ್ಲ ಒಂದು ರೀತಿಯ ತಮಾಷೆಯ ನೆನಪುಗಳು.

ಕಲಾವಿದನಿಗೆ ಧ್ವನಿ ಎನ್ನುವಂತದ್ದು ಎಷ್ಟು ಮುಖ್ಯ?
ಕಲಾವಿದನಾದವನಿಗೆ ಉತ್ತಮ ಹೆಜ್ಜೆಗಾರಿಕೆ, ಅಭಿನಯ, ಆಳ್ತನದ ಜತೆಗೆ ಸ್ವರಭಾರ ಎನ್ನುವುದು ಅತೀ ಮುಖ್ಯ. ನಾನು ಪ್ರಮುಖ ವೇಷಗಳಿಗೆ ಭಡ್ತಿ ಪಡೆಯುವುದಕ್ಕೆ ನನ್ನ ಸ್ವರಭಾರವೇ ಪೂರಕವಾಯಿತು. ಒಬ್ಬ ಕಲಾವಿದನಿಗೆ ಒಳ್ಳೆ ಹೆಜ್ಜೆ, ಅಭಿನಯ ಇದ್ದು ಸ್ವರವೇ ಇಲ್ಲವಾದರೆ ಯಶಸ್ವಿಯಾಗಲು ಅಸಾಧ್ಯ. ಜತೆಗೆ ರಂಗದಲ್ಲಿ ಯಾವ ಸನ್ನಿವೇಶಕ್ಕೆ, ಭಾಗವತರ ಶ್ರುತಿಗೆ ಸ್ವರ ಸೇರಿಸಿ ಮಾತನಾಡುವ ಚಾಕಚಕ್ಯತೆ ಕಲಾವಿದನಿಗೆ ಬೇಕು.

ಹಿರಿಯ ಕಲಾವಿದರು-ಕಿರಿಯ ಕಲಾವಿದರ ಸಂಬಂಧ ಹೇಗಿರಬೇಕು?
ಎಲ್ಲ ಕಲಾವಿದರಲ್ಲೂ ಒಂದಷ್ಟು ಒಳ್ಳೆ ವಿಚಾರಗಳಿರುತ್ತದೆ. ನಾನು ಎರಡನೇ ವೇಷಧಾರಿ, ಅವರು ಕೆಳಸಾಲಿನವನು ಎನ್ನುವ ತಾರತಮ್ಯದ ಮನಃಸ್ಥಿತಿ ಸರಿಯಲ್ಲ. ಕೆಳಸಾಲಿನಲ್ಲಿರುವ ಕಲಾವಿದರ ಬಳಿ ಒಳ್ಳೆ ವಿಚಾರವನ್ನು ಕಲಿಯಲು ನಮ್ಮಲ್ಲಿ ಒಳ್ಳೆತನವಿದ್ದರೆ ಸಾಧ್ಯವಾಗುತ್ತದೆ ಹಾಗೂ ನಮ್ಮಲ್ಲಿರುವ ಒಳ್ಳೆ ವಿಚಾರಗಳನ್ನು ಅವರಿಗೆ ಕಲಿಸಲು ಸಾಧ್ಯ.

ನಿವೃತ್ತಿ ಅನಂತರದ ಜೀವನ ಹೇಗಿದೆ?
ನಾವು ತಿರುಗಾಟ ಮಾಡುವ ಸಂದರ್ಭ ಎರಡನೇ ವೇಷಧಾರಿಯಾದರೂ ಸಂಬಳ ತುಂಬಾ ಕಡಿಮೆ ಇತ್ತು ಹಾಗೂ ಈಗಿನ ಹಾಗೆ ಮೇಳದ ಆಟ ಬಿಟ್ಟು ಬೇರೆ ಆಟಗಳು ಸಿಗುತ್ತಿರಲಿಲ್ಲ. ಹೀಗಾಗಿ ಮೇಳದಲ್ಲಿ ಸಂಪಾದಿಸಿದ್ದು ತುಂಬಾ ಕಡಿಮೆ. ಆರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆಗಳು ಎನ್ನುವುದು ಬಂದಾಗ ಮೇಳದ ದುಡಿಮೆ ಬಗ್ಗೆ ಬೇಸರ ಎನಿಸುತ್ತದೆ. ಹಾಗೆಂದು ಕಲೆಯ ಬಗ್ಗೆ ಬೇಸರ ಇಲ್ಲ.

ಈಗಿನ ಯಕ್ಷಗಾನ ಕ್ಷೇತ್ರದ ಶ್ರೀಮಂತಿಕೆ ಕಂಡಾಗ ಏನನಿಸುತ್ತದೆ?
ಕಲೆ ಕಾಲ-ಕಾಲಕ್ಕೂ ಬದಲಾಗುತ್ತ ಇರುತ್ತದೆ. ನಾವು ಕಾಲ್ನಡಿಗೆಯಲ್ಲಿ, ಎತ್ತಿನಗಾಡಿಯಲ್ಲಿ ಓಡಾ ಡಿದ್ದೆವು. ಆದರೆ ಹಿರಿಯರು ನಮಗಿಂತ ಹೆಚ್ಚು ಕಷ್ಟವನ್ನು ಕಂಡಿದ್ದಾರೆ. ಯಕ್ಷಗಾನ ಕ್ಷೇತ್ರ ಈಗಿನ ಬೆಳವಣಿಗೆಯನ್ನು ಕಂಡು ಖುಷಿಪಡುತ್ತೇನೆ ಹೊರತು; ಛೇ ನಮ್ಮ ಕಾಲದಲ್ಲಿ ಇಂತಹ ಸವಲತ್ತು ಇರಲಿಲ್ಲ ಎಂದು ವ್ಯಥೆಪಡುವುದಿಲ್ಲ.
ಈಗಿನ ಕಲಾವಿದರಿಗೆ ನಿಮ್ಮ ಕಿವಿ ಮಾತು ಏನು? ಈಗ ನಾನು ಆಟ ನೋಡುವುದು ಅಪರೂಪ. ಕಲಾವಿದರು ಅಧ್ಯಯನ ಮಾಡಿ ರಂಗಸ್ಥಳಕ್ಕೆ ಬರಬೇಕು, ಪಾತ್ರ ಜ್ಞಾನ ಇರಬೇಕು. ಇದು ಕಲಾವಿದರ ಪಾಲಿಗೆ ಸಾರ್ವಕಾಲಿಕ ಸತ್ಯ. ರಂಗದಲ್ಲಿ ವೈಯಕ್ತಿಕ ಟೀಕೆ-ಟಿಪ್ಪಣಿಗಳು ಬೇಡ.

ನಿಮ್ಮ ಕಾಲದಲ್ಲಿ ಯಕ್ಷಗಾನ ಕಲೆ ಹೇಗಿತ್ತು?
ಆ ಕಾಲದಲ್ಲಿ ಕಲಾವಿದನಾದವನಿಗೆ ಪ್ರೇಕ್ಷಕನ ಪ್ರತಿಕ್ರಿಯೆ ಬಗ್ಗೆ ಸಾಕಷ್ಟು ನಿರೀಕ್ಷೆ ಜತೆಗೆ ಒಂದಷ್ಟು ಭಯ ಇತ್ತು. ಯಾಕೆಂದರೆ ಕಲಾವಿದ ರಂಗದಲ್ಲಿ ತೋರಿದ ಅಭಿನಯವನ್ನು ಅಳೆಯಲು ಆಗೆಲ್ಲ ಬೇರೆ ಮಾಧ್ಯಮಗಳಿರಲಿಲ್ಲ. ಪ್ರೇಕ್ಷಕ ಪ್ರದರ್ಶನವನ್ನು ನೋಡಿ ವ್ಯಕ್ತಪಡಿಸುವಂತಹ ಅಭಿಪ್ರಾಯಗಳ ಆಧಾರದಲ್ಲೇ ಕಲಾವಿದನ ಯಶಸ್ಸು ಮತ್ತು ಸೋಲು ನಿರ್ಣಯವಾಗುತ್ತಿತ್ತು ಹಾಗೂ ಯಜಮಾನರು ಪ್ರೇಕ್ಷಕರ ಅಭಿಪ್ರಾಯದ ಆಧಾರದಲ್ಲಿ ಕಲಾವಿದನಿಗೆ ಸಂಭಾವನೆ ಹೆಚ್ಚಳ, ಪಾತ್ರಗಳಲ್ಲಿ ಭಡ್ತಿ ನೀಡುತ್ತಿದ್ದರು. ಕಲಾವಿದ ತಪ್ಪಿದಾಗ ಪ್ರೇಕ್ಷಕ ಅಭಿಮಾನಿ ಮೆತ್ತಗೆ ಚೌಕಿಗೆ ಬಂದು ಅಥವಾ ಹೊರಗಡೆ ಎಲ್ಲಾದರು ಸಿಕ್ಕಿದಾಗ ಒಟ್ಟಿಗೆ ಕುಳಿತು ವೀಳ್ಯ ಮೆಲ್ಲುತ್ತ ಬುದ್ಧಿಮಾತು ಹೇಳುತ್ತಿದ್ದರು. ಆದರೆ ಈಗ ಆ ಸಂಬಂಧವೇ ಇಲ್ಲ ಹಾಗೂ ಕಲಾವಿದನ ತಪ್ಪನ್ನೂ ಸರಿ ಎನ್ನುವ ಅಭಿಮಾನಿ ವರ್ಗವಿದೆ.

 ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next